ಆಧುನಿಕ ಚಾಣಾಕ್ಯ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಪಕ್ಷದೊಳಗೆ ಹಲವು ಸುತ್ತಿನ ಪೈಪೋಟಿಯ ನಂತರ ಆಯಕಟ್ಟಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಪ್ರಧಾನಿ ಮೋದಿಯ ಪರಮಾಪ್ತ ಮತ್ತು ಪಕ್ಷದೊಳಗೆ 'ಆಧುನಿಕ ಚಾಣಕ್ಯ' ಎಂದೇ ಕರೆಯಲ್ಪಡುವ ಅಮಿತ್ ಶಾ ಆಯ್ಕೆಯಾಗಿದ್ದಾರೆ. ಬುಧವಾರ (ಜು 9) ದಂದು ನಿರ್ಗಮಿತ ಅಧ್ಯಕ್ಷ ರಾಜನಾಥ್ ಸಿಂಗ್ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.
ಈ ಕ್ಷಣದಿಂದಲೇ ಅಮಿತ್ ಶಾ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆಂದು ರಾಜನಾಥ್ ಈ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. ಮಹಾನ್ ಸಂಘಟನಕಾರ, ಮಿತಭಾಷಿ ಅಮಿತ್ ಶಾ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ.
ಅಮಿತ್ ಭಾಯಿ ಅನಿಲ್ ಚಂದ್ರ ಶಾ (ಅಮಿತ್ ಶಾ) ಮುಂಬೈನಲ್ಲಿ 1964ರಲ್ಲಿ ಜನಿಸಿದರು. ತಂದೆ ಅನಿಲ್ ಚಂದ್ರ ಶಾ ಗುಜರಾತಿನ ಗಾಂಧಿನಗರ ಜಿಲ್ಲೆಯ ಮಾನಸ ನಗರದಲ್ಲಿ ಪಿವಿಸಿ ಪೈಪ್ ಉದ್ಯಮಿಗಳಾಗಿದ್ದವರು.ಗುಜರಾತಿನ ಮೆಹನ್ಸಾ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅಮಿತ್ ಶಾ, ಅಹಮದಾಬಾದ್ ನಗರದ ಸಿಯು ಶಾ ಸೈನ್ಸ್ ಕಾಲೇಜಿನಲ್ಲಿ ಜೀವ ರಸಾಯನ ಶಾಸ್ತ್ರದಲ್ಲಿ ಪದವಿಯನ್ನು ಪಡೆದರು. (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ಆಯ್ಕೆ)
ತನ್ನ ಚಿಕ್ಕ ವಯಸ್ಸಿನಿಂದಲೇ ರಾಷ್ಟೀಯ ಸ್ವಯಂಸೇವಕ ಸಂಘದಲ್ಲಿ (RSS) ಸ್ವಯಂ ಸೇವಕನಾಗಿ ದುಡಿದ ಅಮಿತ್ ಶಾ, ಮುಂದೆ ಬಿಜೆಪಿ ಯುವ ಘಟಕಕ್ಕೆ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಲ್ಲಿ (ಎಬಿವಿಪಿ) ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.
ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಎಲ್ ಕೆ ಅಡ್ವಾಣಿಯವರ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಅಮಿತ್ ಶಾ ನಿರ್ವಹಿಸಿದ್ದರು. ಪಕ್ಷದ ಮೇಲಿನ ನಿಯತ್ತು ಮತ್ತು ತನ್ನ ಕಾರ್ಯಕ್ಷಮತೆಯಿಂದ ಅಮಿತ್ ಶಾ, ನರೇಂದ್ರ ಮೋದಿಗೆ ಮುಂದಿನ ದಿನದಲ್ಲಿ ತೀರಾ ಹತ್ತಿರವಾದರು.
1995ರಲ್ಲಿ ಬಿಜೆಪಿ ಪ್ರಥಮ ಬಾರಿಗೆ ಗುಜರಾತಿನಲ್ಲಿ ಅಧಿಕಾರಕ್ಕೆ ಬರುವಲ್ಲಿ ಅಮಿತ್ ಶಾ ಪಾತ್ರ ಕೂಡಾ ಬಹಳ ಪ್ರಮುಖವಾದದ್ದು. ಗುಜರಾತ್ ಗ್ರಾಮೀಣ ಭಾಗದಲ್ಲಿ ತುಂಬಾ ಪ್ರಭಾವವನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ತಗ್ಗಿಸುವಲ್ಲಿ ಅಮಿತ್ ಶಾ ಮತ್ತು ಮೋದಿ ನಿರ್ಣಾಯಕ ಪಾತ್ರ ವಹಿಸಿದ್ದರು.
(ಫೋಟೋ: ಪಿಟಿಐ)

ಗುಜರಾತ್ ಫೈನಾನ್ಸ್ ಕಾರ್ಪೋರೇಶನ್
ಗುಜರಾತ್ ಸರಕಾರದ ಅಧೀನದ 'ಗುಜರಾತ್ ಫೈನಾನ್ಸ್ ಕಾರ್ಪೋರೇಶನ್ ಲಿಮಿಟೆಡ್' ನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅಮಿತ್ ಶಾ , ನಂತರ ಅಹಮದಾಬಾದ್ ಜಿಲ್ಲಾ ಕೋಪರೇಟೀವ್ ಬ್ಯಾಂಕಿನ ಅಧ್ಯಕ್ಷರಾಗಿ ನಿಯುಕ್ತಿಯಾದರು.

ನಷ್ಟದಲ್ಲಿ ಓಡುತ್ತಿದ ಸಂಸ್ಥೆಯನ್ನು ಸರಿದಾರಿಗೆ ತಂದ ಹಿರಿಮೆ
ನಷ್ಟದಲ್ಲಿ ಓಡುತ್ತಿದ್ದ ಈ ಸಂಸ್ಥೆಗಳನ್ನು ಲಾಭದ ದಾರಿಗೆ ತಂದ ಅಮಿತ್ ಶಾ, ಮೋದಿಗೆ ಮತ್ತಷ್ಟು ಆಪ್ತರಾದರು. 1997ರಲ್ಲಿ ನಡೆದ ಗುಜರಾತ್ ಉಪಚುನಾವಣೆಯ ಮೂಲಕ ಶಾಸಕರಾದ ಅಮಿತ್ ಶಾ, ನಂತರ ಸತತವಾಗಿ ವಿಧಾನಸಭೆಗೆ ಆಯ್ಕೆಯಾದರು. ಕೇಶುಭಾಯಿ ಪಟೇಲ್ ಸ್ಥಾನದಲ್ಲಿ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಸರಕಾರದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಅಮಿತ್ ಶಾ ಹತ್ತು ಖಾತೆಗಳನ್ನು ಸಂಭಾಳಿಸಿದ್ದರು. ಅದರಲ್ಲಿ ಪ್ರಮುಖವಾಗಿ ಗೃಹ ಖಾತೆ ಕೂಡಾ ಒಂದು.

ಕೇಸುಗಳ ಮೇಲೆ ಕೇಸು
ಸೊಹ್ರಬುದ್ದೀನ್ ಶೇಕ್, ಇಶ್ರತ್ ಜಹಾನ್ ನಕಲಿ ಕೌಂಟರ್ ಕೇಸಿನಲ್ಲಿ ತಗಲಾಕೊಂಡಿದ್ದ ಅಮಿತ್ ಶಾ, ಜುಲೈ 2010ರಲ್ಲಿ ಸೊಹ್ರಬುದ್ದೀನ್ ಕೇಸಿನ ವಿಚಾರದಲ್ಲಿ ಬಂಧನಕ್ಕೊಳಗಾಗಿದ್ದರು. ಮುಂದೆ ಸಿಬಿಐ ಮತ್ತು ಸುಪ್ರೀಂಕೋರ್ಟಿನಿಂದ ಕ್ಲೀನ್ ಚಿಟ್ ಪಡೆದರು. 2009ರಲ್ಲಿ ಗುಜರಾತ್ ಗೃಹ ಸಚಿವರಾಗಿದ್ದ ಸಮಯದಲ್ಲಿ ಮಹಿಳೆಯೊಬ್ಬಳ ಮೇಲೆ ಬೇಹುಗಾರಿಕೆ ನಡೆಸಿದ ಆರೋಪವೂ ಅಮಿತ್ ಶಾ ಅವರ ಮೇಲಿತ್ತು.

ರಾಷ್ಟ್ರ ರಾಜಕಾರಣದಲ್ಲಿ ಅಮಿತ್ ಶಾ
ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ರಾಷ್ಟ್ರ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಮಿತ್ ಶಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. ಕಳದ ಲೋಕಸಭಾ ಚುನಾವಣೆಯಲ್ಲಿ ನಿತಿನ್ ಶಾ ಬಿಜೆಪಿಯ ಪಾಲಿಗೆ ಅತ್ಯಂತ ನಿರ್ಣಾಯಕ ಫಲಿತಾಂಶ ನೀಡುವಲ್ಲಿ ಯಶಸ್ವಿಯಾದರು.

ಕ್ರಿಕೆಟ್ ಅಶೋಶಿಯೇಶನ್ ಅಧ್ಯಕ್ಷ
ಈ ನಡುವೆ ಗುಜರಾತ್ ಕ್ರಿಕೆಟ್ ಅಶೋಶಿಯೇಶನಿಗೆ ಅಧ್ಯಕ್ಷರಾಗಿ ಕೂಡಾ ಅಮಿತ್ ಶಾ ಆಯ್ಕೆಯಾದರು. ಉತ್ತರಪ್ರದೇಶದ ಉಸ್ತುವಾರಿಯಾಗಿ ನೇಮಕಗೊಂಡು ಲಕ್ನೋಗೆ ತೆರಳಿದ ಅಮಿತ್ ಶಾ, ಮಹಾನ್ ಚಾಣಾಕ್ಷತನದಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆದು ವಿರೋಧ ಪಕ್ಷದ ಘಟಾನುಗಟಿಗಳು ನಿಬ್ಬೆರಗಾಗುವಂತೆ ಫಲಿತಾಂಶ ನೀಡುವಲ್ಲಿ ಯಶಸ್ವಿಯಾದರು.

ನಿರ್ಣಾಯಕ ಉತ್ತರಪ್ರದೇಶ
ಪಕ್ಷದ ಪಾಲಿಗೆ ಪವಾಡ ಸದೃಶ ಕಾರ್ಯ ಮಾಡಿ ತೋರಿಸಿದ ಅಮಿತ್ ಶಾ, ಉತ್ತರಪ್ರದೇಶದ ಜಾತಿ ರಾಜಕಾರಣವನ್ನು ಪರಿವರ್ತಿಸಿ ಪಕ್ಷಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸನ್ನು ತಂದುಕೊಟ್ಟರು. 'ಮೋದಿ ಅಲೆಯೆಂದೇ' ಬಿಂಬಿತವಾಗಿದ್ದ ಕಳೆದ ಲೋಕಸಭಾ ಚುನಾವಣೆಗೆ ಚಾಣಾಕ್ಷತನದ ಲೇಪ ನೀಡಿದ ಅಮಿತ್ ಶಾ, ಉತ್ತರಪ್ರದೇಶದ 80 ಸ್ಥಾನಗಳ ಪೈಕಿ ಪಕ್ಷಕ್ಕೆ 71 ಸ್ಥಾನದಲ್ಲಿ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಿತಭಾಷಿ ಅಮಿತ್ ಶಾ
ಅತ್ಯಂತ ಮಿತಭಾಷಿಯಾಗಿರುವ ಅಮಿತ್ ಶಾ ತಂತ್ರಗಾರಿಕೆ ಹೆಣೆಯುವುದರಲ್ಲಿ ಎತ್ತಿದ ಕೈ. ಹಲವಾರು ಘಟಾನುಗಟಿಗಳ ಹೆಸರು ಬಿಜೆಪಿ ರಾಷ್ಟೀಯ ಅಧ್ಯಕ್ಷ ರೇಸಿನಲ್ಲಿದ್ದರೂ, ಎಲ್ಲರನ್ನೂ ಮೀರಿಸಿ ಅಮಿತ್ ಶಾ ಜುಲೈ 9, 2014ರಂದು ಪಕ್ಷದ ರಾಷ್ಟೀಯ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಇದೇ ವರ್ಷ ನಡೆಯಲಿರುವ ಮೂರು ರಾಜ್ಯಗಳ ಚುನಾವಣೆಯಲ್ಲಿ ಅಮಿತ್ ಶಾ ಪಕ್ಷಕ್ಕೆ ಆಶಾದಾಯಕ ಫಲಿತಾಂಶ ತಂದು ಕೊಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications