Election Result: ಸಣ್ಣ ರಾಜ್ಯದಲ್ಲಿ ಹೊಸ ಪಕ್ಷದಿಂದ ದೊಡ್ಡ ಪಾರ್ಟಿಗೆ ಆಘಾತ!
ಕೆಲವು ಚುನಾವಣೆ ರಾಷ್ಟ್ರೀಯ ಪಕ್ಷಗಳಿಗೆ ದೊಡ್ಡ ಪಾಠ ಕಲಿಸುತ್ತವೆ. ಅದ್ರಲ್ಲೂ ದೊಡ್ಡ ದೊಡ್ಡ ಪಕ್ಷಗಳಿಗೆ ಪ್ರಾದೇಶಿಕ ಪಕ್ಷಗಳಿಂದ ಭೀಕರ ಆಘಾತ ಎದುರಾದ ಉದಾಹರಣೆ ಇದೆ. ಹೀಗೆ ಮಿಜೋರಾಂ ವಿಧಾನಸಭೆ ಎಲೆಕ್ಷನ್ 2023ರ ಫಲಿತಾಂಶದಲ್ಲಿ, ಬಿಜೆಪಿ & ಕಾಂಗ್ರೆಸ್‌ಗೆ ಪುಟಾಣಿ ಪಕ್ಷದಿಂದ ದೊಡ್ಡ ಆಘಾತ ಎದುರಾಗಿದೆ. ಇವತ್ತು, ನಿನ್ನೆ ರಚನೆಯಾದ ಹೊಸ ಪಕ್ಷವೇ ರಾಷ್ಟ್ರೀಯ ಪಕ್ಷಗಳಿಗೆ ಎಂದೂ ಮರೆಯಲಾಗದ ಸೋಲಿನ ಪಾಠ ಕಲಿಸಿದೆ.
ಹಸಿರು ಹಾಸು ಹೊದ್ದು ಮ್ಯಾನ್ಮಾರ್ ಗಡಿಯಲ್ಲಿ ಹರಡಿದ ಈಶಾನ್ಯ ಭಾರತದ ಪುಟಾಣಿ ರಾಜ್ಯ, ಮಿಜೋರಾಂ ವಿಧಾನಸಭೆ ಎಲೆಕ್ಷನ್ ತೀವ್ರ ಕುತೂಹಲ ಕೆರಳಿಸಿತ್ತು. ನವೆಂಬರ್ 7ರಂದು ಈ ರಾಜ್ಯದಲ್ಲಿ ವಿಧಾನಸಭೆಗೆ ಮತದಾನ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಲೀಡರ್ಸ್ ಇಲ್ಲಿ ಗೆಲುವಿಗಾಗಿ ಭಾರಿ ಸರ್ಕಸ್ ಮಾಡಿದ್ದರು. ಆದರೆ ಕೊನೆಗೂ ಅದು ವರ್ಕೌಟ್ ಆಗಿಲ್ಲ. ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಯಾವುದು ಗೊತ್ತಾ?

ಹೊಸಪಕ್ಷ ZPMಗೆ ಅಧಿಕಾರ ನೀಡಿದ ಜನ!
ಹೌದು ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 'ಮಿಜೋ ನ್ಯಾಷನಲ್ ಫ್ರಂಟ್' (MNF) ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡಿದೆ. ಈ ಮೂಲಕ ಆಡಳಿತದ ಹೊಣೆ ಹೊತ್ತಿದ್ದ MNF ವಿರುದ್ಧ ಭಾರಿ ಪ್ರಚಾರ ನಡೆಸಿದ್ದ ಜೋರಂ ಪೀಪಲ್ಸ್ ಮೂಮೆಂಟ್ (ZPM) 2023ರ ಚುನಾವಣೆಯಲ್ಲಿ ಪ್ರಚಂಡ ಜಯ ದಾಖಲಿಸಿದೆ. 1987ರಿಂದ ಎಂಎನ್‌ಎಫ್ & ಕಾಂಗ್ರೆಸ್ ಅಧಿಕಾರ ನಡೆಸುತ್ತಿತ್ತು.
#WATCH | Aizawl: Mizoram CM Zoramthanga tenders his resignation to Governor Dr Hari Babu Kambhampati at Raj Bhavan. pic.twitter.com/nXtuZgCmJh
— ANI (@ANI) December 4, 2023
5 ವರ್ಷದ ಹಿಂದೆ ಪಕ್ಷ ಸ್ಥಾಪನೆ
ಕೆಲವೇ ವರ್ಷಗಳ ಹಿಂದೆ ಸ್ಥಾಪನೆಯಾದ ಜೋರಂ ಪೀಪಲ್ಸ್ ಮೂಮೆಂಟ್ ಮೇಲೆ ಮತದಾರರು ಈ ಬಾರಿ ವಿಶ್ವಾಸ ಇಟ್ಟು ಆಯ್ಕೆ ಮಾಡಿದ್ದಾರೆ. 40 ಸ್ಥಾನ ಇರುವ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ZPM ಪಕ್ಷ 27 ಸ್ಥಾನ ಗೆಲ್ಲುವ ಮೂಲಕ, ಬಹುಮತ ಪಡೆದಿದೆ. ಈ ಮೂಲಕ 2ನೇ ಬಾರಿ ಅಧಿಕಾರ ಪಡೆಯುವ ನಿರೀಕ್ಷೆ ಹೊಂದಿದ್ದ MNFಗೆ ಕೇವಲ 10 ಸ್ಥಾನ ಮಾತ್ರ ಸಿಕ್ಕಿದೆ. ಇದರ ಜೊತೆಗೆ ಕಾಂಗ್ರೆಸ್ ಬರೀ ಒಂದೇ ಒಂದು ಸ್ಥಾನದಲ್ಲಿ ಗೆದ್ದಿದೆ. 2018ಕ್ಕೆ ಹೋಲಿಸಿದಲ್ಲಿ ಬಿಜೆಪಿ ಈ ಬಾರಿ 2 ಸ್ಥಾನ ಗೆದ್ದಿದೆ, ಆದರೆ ಕಳೆದ ಬಾರಿ ಬಿಜೆಪಿ ಇಲ್ಲಿ ಕೇವಲ 1 ಸ್ಥಾನವನ್ನ ಗೆದ್ದಿತ್ತು.

MNF ಮುಖ್ಯಮಂತ್ರಿಗೆ ಗೆಲ್ಲಲು ಆಗಲಿಲ್ಲ!
ಈ ಬಾರಿ ಗೆಲ್ಲಬೇಕು ಎಂಬ ಹುಮ್ಮಸ್ಸಿನಲ್ಲಿ ZPM ಭರ್ಜರಿ ಪ್ಲಾನ್ ಮಾಡಿಕೊಂಡು ಅಖಾಡ ಪ್ರವೇಶ ಮಾಡಿತ್ತು. ಹೀಗೆ ಆಡಳಿತ ಪಕ್ಷವಾಗಿದ್ದ MNFಗೆ ಸಾಲು ಸಾಲು ಆಘಾತ ಕಾದಿತ್ತು. ಹಾಲಿ ಮಿಜೋರಾಂ ಸಿಎಂ ಆಗಿದ್ದ ಜೋರಂತಂಗಾ ಐಜ್ವಾಲ್ ಪೂರ್ವ-1 ಕ್ಷೇತ್ರದಲ್ಲಿ 2,100 ಮತಗಳ ಅಂತರದಿಂದ ಸೋಲು ಕಂಡರು. ಜೆಡ್‌ಪಿಎಂ (ZPM) ಪಕ್ಷದ ಲಾಲ್ತನ್‌ಸಂಗಾ ಈ ಚುನಾವಣೆಯಲ್ಲಿ ಹಾಲಿ ಮಿಜೋರಾಂ ಸಿಎಂಗೆ ಸೋಲಿನ ರುಚಿ ತೋರಿಸಿದ್ರು. ಇಷ್ಟಲ್ಲದೆ, ಮಿಜೋರಾಂ ಉಪಮುಖ್ಯಮಂತ್ರಿ ಟುಯಿಚಾಂಗ್ ಕೂಡ ಹೀನಾಯವಾಗಿ ಸೋತಿದ್ದಾರೆ.
ಕಾಂಗ್ರೆಸ್ ವಿರುದ್ಧವೂ ಮತದಾರನ ಕೋಪ?
ಈ ಪ್ರಚಂಡ ಗೆಲುವಿನ ಬಗ್ಗೆ ಹೇಳಿಕೆ ನೀಡಿರುವ ಜೋರಂ ಪೀಪಲ್ಸ್ ಮೂಮೆಂಟ್ (ZPM)ನ ಮುಖ್ಯಸ್ಥ ಲಾಲ್ಡುಹೊಮಾ, ಕಾಂಗ್ರೆಸ್ ಮತ್ತು ಎಂಎನ್‌ಎಫ್ ವಿರುದ್ಧ ಹರಿಹಾಯ್ದಿದ್ದಾರೆ. 'ಮಿಜೋರಾಂ ಉದಯವಾದ ನಂತರ ಅಂದ್ರೆ 1987 ರಿಂದ ಅಧಿಕಾರದಲ್ಲಿರುವ ಎಂಎನ್‌ಎಫ್ & ಕಾಂಗ್ರೆಸ್ ಸರ್ಕಾರಗಳ ಆಡಳಿತದ ವಿರುದ್ಧ ಮತದಾರರು ಮತ್ತು ರಾಜ್ಯದ ಜನ ಬೇಸತ್ತಿದ್ದಾರೆ. ಈ ಕಾರಣಕ್ಕೆ, ಬದಲಾವಣೆ ಬಯಸಿ ಈಗ ಜೆಡ್‌ಪಿಎಂ (ZPM) ಪರ ಮತ ಹಾಕಿದ್ದಾರೆ' ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಿಜೋರಾಂ ರಾಜ್ಯದಲ್ಲಿ ಹೊಸ ಪಕ್ಷ ಜನರಿಗೆ ಹತ್ತಿರವಾಗಿದೆ. ಹಾಗೇ MNFಗೆ ಹೀನಾಯ ಸೋಲು ಎದುರಾಗಿದ್ದು ಹಾಲಿ ಸಿಎಂ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.












Click it and Unblock the Notifications