Breaking: ದೆಹಲಿಯ ಇಸ್ರೇಲ್ ಕಚೇರಿ ಬಳಿ ಬಾಂಬ್ ಸ್ಪೋಟ? ಪೊಲೀಸರಿಗೆ ಸಿಕ್ಕ ಪತ್ರದಲ್ಲೇನಿದೆ
ನವದೆಹಲಿ, ಡಿಸೆಂಬರ್ 27: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಾಂಬ್ ಸ್ಪೋಟವಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಇದು ಇಸ್ರೇಲ್ ರಾಯಭಾರಿ ಕಚೇರಿ ಬಳಿಯೇ ಜೋರಾಗಿ ಸ್ಫೋಟದ ಸದ್ದು ಕೇಳಿ ಬಂದಿದೆ. ಸ್ಫೋಟದ ಸದ್ದಿಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಹೌದು, ದೆಹಲಿಯಲ್ಲಿನ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಭಾರಿ 'ಸ್ಫೋಟ' ಸದ್ದು ಕೇಳಿ ಬಂದಿದೆ. ಇದು ಬಾಂಬ್ ಸ್ಪೋಟ ಎನ್ನಲಾಗಿದ್ದು, ದೆಹಲಿ ಪೊಲೀಸರು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನದಳ, ಅಪರಾಧ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ದೌಡಾಯಿಸಿದ್ದಾರೆ. ಇವರೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಕೂಡ ಸ್ಥಳಕ್ಕೆ ತೆರಳಿದ್ದರು.

ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಪಕ್ಕದಲ್ಲಿಯೇ ಕೂಗಳತೆಯ ದೂರದಲ್ಲಿ ಇರುವ ಖಾಲಿ ಜಮೀನಿನಲ್ಲಿ ಈ ಬ್ಲಾಸ್ಟ್ ಕುರಿತು ಇಸ್ರೇಲಿ ರಾಯಭಾರಿಯನ್ನು ಉದ್ದೇಶಿಸಿ ಬರೆದ ಪತ್ರವು ಪೋಲೀಸರಿಗೆ ಸಿಕ್ಕಿದೆ.
ವಿಧಿವಿಜ್ಞಾನ ಪರೀಕ್ಷೆಗೆ ಸಿಕ್ಕ ಸಾಕ್ಷ್ಯ ರವಾನೆ
ರಾಯಭಾರಿ ಕಚೇರಿ ಪಕ್ಕದಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಹುಡುಕಾಟದ ನಂತರ ಸಾಕ್ಷ್ಯವಾಗಿ ಸಿಕ್ಕ ವಸ್ತುಗಳು, ಪತ್ರ ಸೇರಿದಂತೆ ಎಲ್ಲವನ್ನು ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಇಸ್ರೇಲ್‌ನ ಉಪ ರಾಯಭಾರಿ ಓಹದ್ ನಕಾಶ್ ಕಯ್ನಾರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅವರ ವಿಡಿಯೋದಲ್ಲಿ ''ಇಂದು ಸಂಜೆ, 5 ಗಂಟೆಯ ನಂತರ ಹಲವಾರು ನಿಮಿಷಗಳ ನಂತರ, ರಾಯಭಾರ ಕಚೇರಿಯ ಸಮೀಪದಲ್ಲಿ ಸ್ಫೋಟ ಸಂಭವಿಸಿದೆ. ನಮ್ಮ ಎಲ್ಲಾ ಕೆಲಸಗಾರರು ಸುರಕ್ಷಿತವಾಗಿದ್ದಾರೆ. ನಮ್ಮ ರಾಜತಾಂತ್ರಿಕರು ಸುರಕ್ಷಿತವಾಗಿದ್ದಾರೆ. ನಮ್ಮ ಭದ್ರತಾ ತಂಡಗಳು ಸ್ಥಳೀಯ ದೆಹಲಿ ಪೊಲೀಸರಿಂದ ಭದ್ರತೆ, ಅಗತ್ಯ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ'' ಎಂದು ಅವರು ತಿಳಿಸಿದ್ದಾರೆ.
ದೆಹಲಿಯಾದ್ಯಂತ ಪೊಲೀಸ್ ಕಟ್ಟೆಚ್ಚರ
ಈ ಸ್ಪೋಟದ ಬಳಿಕ ಕೇಂದ್ರ ದೆಹಲಿಯ ಈ ಪಹರ್‌ಗಂಜ್ ಪ್ರದೇಶದಲ್ಲಿರುವ ಚಾಬಾದ್ ಹೌಸ್‌ಗೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಹೂದಿ ಸಮುದಾಯ ಕೇಂದ್ರದ ಸುತ್ತಲೂ ಕಟ್ಟೆಚ್ಚರ ವಹಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪೊಲೀಸರು ಆ ಪ್ರದೇಶದಲ್ಲಿ ನಿಗಾ ಇಟ್ಟಿದ್ದಾರೆ. ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ಇನ್ನೂ ಕೇಳಿಬಂದ ಈ ಸ್ಪೋಟದ ಸುದ್ದಿ ಯಾವ ಕಾರಣದಿಂದ ಬಂದಿದೆ?, ಇಲ್ಲಿ ನಿಜವಾಗಿಯು ಯಾರಾದರೂ ಬಾಂಬ್ ಇಟ್ಟಿದ್ದಾರೆಯೇ? ಅಥವಾ ಇದು ಹೆಸರಿಸಲು ಮಾಡಿದ ಕೃತ್ಯವೇ? ಎಂಬೆಲ್ಲ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications