ನೀಟ್ 2022: ದಿನಾಂಕ, ಪ್ರವೇಶ ಪತ್ರ ಹಾಗೂ ಪರೀಕ್ಷೆ ಕುರಿತು ಗೊಂದಲಗಳಿಗೆ ಉತ್ತರ
ನವದೆಹಲಿ, ಮೇ 8: ಸ್ನಾತಕೋತ್ತರ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET PG) 2022 ಅನ್ನು ಮೇ 21ರಂದು ಆರಂಭಿಸಲಾಗುತ್ತಿದ್ದು, ಹದಿನೈದು ದಿನಗಳ ಅವಧಿಯಲ್ಲಿ ನಡೆಸಲಾಗುವುದು ಎಂದು ಘೋಷಿಸಲಾಗಿದೆ. ಪರೀಕ್ಷೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಪರೀಕ್ಷೆ ಮುಂದೂಡುವ ಮಾತುಗಳು ನಿರಂತರವಾಗಿ ಹೆಚ್ಚುತ್ತಿವೆ.
ಭಾನುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ವೈದ್ಯಕೀಯ ಅಭ್ಯರ್ಥಿಗಳು ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದರು.
NEET 2022 ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ವೈದ್ಯಕೀಯ ವಿದ್ಯಾರ್ಥಿಗಳ ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿಗೆ ಸ್ಮರಣೀಯ ಮನವಿ ಸಲ್ಲಿಸಿದ ನಂತರ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದರ ಮಧ್ಯೆ, ಹೊಸ ಪರೀಕ್ಷೆಯ ದಿನಾಂಕ ಜುಲೈ 9 ಆಗಿರುವುದರಿಂದ NEET 2022 ಅನ್ನು ಮುಂದೂಡಲಾಗಿದೆ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಅಧಿಸೂಚನೆಯನ್ನು ಸರ್ಕಾರ ಪರಿಶೀಲಿಸಿದೆ. ಈ ವಾರದಲ್ಲೇ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಬಹುದು ಎಂದು ವರದಿಯಾಗಿದ್ದು, NEET PG 2022 ರ ಇತ್ತೀಚಿನ ಅಪ್ ಡೇಟ್ ಗಳು ಇಲ್ಲಿವೆ.

ದೆಹಲಿಯ ಜಂತರ್ ಮಂತರ್‌ಗೆ ವಿದ್ಯಾರ್ಥಿಗಳ ಪ್ರತಿಭಟನೆ
ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘ (ಎಐಎಂಎಸ್‌ಎ) ಶಾಂತಿಯುತ ಸಭೆ ಮತ್ತು ಮೌನ ಪ್ರತಿಭಟನೆ ನಡೆಸಿತು. ಈ ವಿದ್ಯಾರ್ಥಿಗಳಿಗೆ ಇತರ ಸಂಘಗಳು ಬೆಂಬಲ ಸೂಚಿಸಿದವು.

ನೀಟ್ ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳ ಒತ್ತಾಯ
"ನಾವು ಅದಕ್ಕೆ ಸರ್ಕಾರದ ಅನುಮತಿಯನ್ನು ತೆಗೆದುಕೊಂಡಿದ್ದೇವೆ. ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸುವುದು ಪ್ರಮುಖ ಉದ್ದೇಶವಾಗಿದೆ. ಈ ಸಭೆಯೊಂದಿಗೆ ನಾವು ನಮ್ಮ ಬೇಡಿಕೆಯನ್ನು ಪ್ರಧಾನ ಮಂತ್ರಿ ಕಚೇರಿ (PMO), ಕೇಂದ್ರ ಆರೋಗ್ಯ ಸಚಿವರು ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ತಿಳಿಸಲು ಪ್ರಯತ್ನಿಸುತ್ತಿದ್ದೇವೆ. ಎನ್‌ಎಂಸಿ ಮತ್ತು ಅವರು ಪರೀಕ್ಷೆ ಮುಂದೂಡುವಿಕೆ ಬಗ್ಗೆ ಮರುಪರಿಶೀಲಿಸಲಿ," ಎಂದು ಎಐಎಂಎಸ್‌ಎಯ ಡಾ ಜಿತೇಂದ್ರ ಟ್ವೀಟ್ ಮಾಡಿದ್ದಾರೆ.

ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗದ ಹಿನ್ನೆಲೆ ಪ್ರಧಾನಿಗೆ ಮನವಿ
ಕಳೆದ ಶುಕ್ರವಾರವಷ್ಟೇ 15,000 ಅಭ್ಯರ್ಥಿಗಳು 2022ನೇ ಸಾಲಿನ ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಪ್ರಧಾನಿ ಮೋದಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಕೌನ್ಸೆಲಿಂಗ್ ಪ್ರಕ್ರಿಯೆಯ ಅನಿಶ್ಚಿತತೆಯಿಂದಾಗಿ 50,000ಕ್ಕೂ ಹೆಚ್ಚು ಆಕಾಂಕ್ಷಿಗಳು NEET PG 2022 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಮೆಮೊರಾಂಡಮ್ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ನಕಲಿ ಅಧಿಸೂಚನೆ ಬಗ್ಗೆ ಸರ್ಕಾರದ ಸ್ಪಷ್ಟನೆ
ನೀಟ್ ಪರೀಕ್ಷೆ ಮುಂದೂಡಿಕೆಗೆ ಸಂಬಂಧಿಸಿದಂತೆ ನಕಲಿ ಅಧಿಸೂಚನೆಯನ್ನು ಸರ್ಕಾರವು ಗಮನಿಸಿದೆ. ಟ್ವಿಟರ್‌ನಲ್ಲಿ ತನ್ನ ಫ್ಯಾಕ್ಟ್ ಚೆಕಿಂಗ್ ಹ್ಯಾಂಡಲ್ ಮೂಲಕ, NEET PG 2022 ಅನ್ನು ಮುಂದೂಡಲಾಗಿಲ್ಲ. ಮೇ 21ರಂದು ವೇಳಾಪಟ್ಟಿಯ ಪ್ರಕಾರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ (NBEMS) ಹೆಸರಿನಲ್ಲಿ ನಕಲಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಜುಲೈ 9ಕ್ಕೆ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಹೇಳುವ ಮೂಲಕ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಲಾಗಿತ್ತು.
"ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಹೆಸರಿನಲ್ಲಿ ನೀಡಲಾದ ನಕಲಿ ನೋಟೀಸ್ NEET PG ಪರೀಕ್ಷೆಯನ್ನು ಮುಂದೂಡಲಾಗಿದೆ. ಜುಲೈ 9ರ 2022 ರಂದು ನಡೆಸಲಾಗುವುದು ಎಂದು ಹೇಳಲಾಗಿದೆ. ಆದರೆ ಪರೀಕ್ಷೆಯನ್ನು ಮುಂದೂಡಲಾಗಿಲ್ಲ. ಇದನ್ನು 21 ಮೇ 2022 ರಂದು ನಡೆಸಲಾಗುವುದು," ಎಂದು PIB ಯ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಟ್ವೀಟ್ ಮಾಡಿದೆ.












Click it and Unblock the Notifications