ಛತ್ತೀಸಗಡ: ನಕ್ಸಲರಿಂದ ಶರಣಾಗತ ನಕ್ಸಲನ ಹತ್ಯೆ
ದಾಂತೇವಾಡ, ಆಗಸ್ಟ್ 30: ಕೆಲವೇ ದಿನಗಳ ಹಿಂದೆ ಪೊಲೀಸರಿಗೆ ಶರಣಾಗಿದ್ದ ಮಾಜಿ ನಕ್ಸಲ್‌ನನ್ನು ನಕ್ಸಲರು ಹತ್ಯೆ ಮಾಡಿದ್ದಾರೆ.
ಛತ್ತೀಸಗಡದ ದಾಂತೇವಾಡ ಜಿಲ್ಲೆಯ ಚೋಲ್ನಾರ್ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ.
ಪೋಡಿಯಾ ಅಲಿಯಾಸ್ ಗಾಂಧಿ ವಡ್ಡೆ ಎಂಬ 55 ವರ್ಷದ ನಕ್ಸಲೈಟ್, ಕೆಲವು ದಿನಗಳ ಹಿಂದಷ್ಟೇ ಪೊಲೀಸರಿಗೆ ಶರಣಾಗತನಾಗಿದ್ದ.

'ಪೋಡಿಯಾ ವಡ್ಡೆ ಸುಮಾರು 20-25 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಕಳೆದ ಏಪ್ರಿಲ್‌ನಲ್ಲಿ ಏಳು ಮಂದಿ ಪೊಲೀಸರ ಸಾವಿಗೆ ಕಾರಣವಾಗಿದ್ದ ಚೋಲ್ನಾರ್ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರನಾಗಿದ್ದ.
ನಕ್ಸಲಿಸಂ ಬಿಡಲು ಆತ ನಿರ್ಧರಿಸಿದ್ದ. ಅವನನ್ನು ನಾಲ್ಕು ದಿನದ ಹಿಂದೆ ಬಂಧಿಸಲಾಗಿತ್ತು. ಆತ ಇನ್ನೂ ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.
ಜಾಮೀನಿನ ಮೇಲೆ ಹೊರಗೆ ಬಂದಿದ್ದ ವಡ್ಡೆಗೆ ಹಳ್ಳಿಗೆ ತೆರಳದಂತೆ ಎಚ್ಚರಿಸಲಾಗಿತ್ತು. ನಗರದಲ್ಲಿ ಇರುವ ತನ್ನ ಮಗನ ಜತೆಗೆ ವಾಸಿಸುವಂತೆ ಸಲಹೆ ನೀಡಲಾಗಿತ್ತು. ಆದರೆ, ಪೊಲೀಸರ ಸಲಹೆಗೆ ಕಿವಿಗೊಡದೆ ಆತ ಹಳ್ಳಿಗೆ ತೆರಳಿದ್ದ.
ಇದೇ ಸಂದರ್ಭವನ್ನು ಬಳಸಿಕೊಂಡು ನಕ್ಸಲರು, ಗ್ರಾಮಸ್ಥರ ಎದುರೇ ಆತನ ಮೇಲೆ ದಾಳಿ ನಡೆಸಿ ಕೊಚ್ಚಿ ಕೊಂದಿದ್ದಾರೆ ಎನ್ನಲಾಗಿದೆ.












Click it and Unblock the Notifications