ಈದ್ ಉಲ್ ಅಧಾ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 10; ಭಾರತದ ಪ್ರಧಾನಿ ನರೇಂದ್ರ ಮೋದಿ ಈದ್ ಉಲ್ ಅಧಾ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದರು. ದೇಶಾದ್ಯಂತ ಭಾನುವಾರ ಈದ್ ಉಲ್ ಅಧಾ (ಬಕ್ರೀದ್) ಆಚರಣೆ ಮಾಡಲಾಗುತ್ತಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. 'ಈದ್ ಮುಬಾರಕ್! ಈದ್ ಉಲ್ ಅಧಾ ಶುಭಾಶಯಗಳು' ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
'ಈ ಹಬ್ಬ ಮಾನವಕುಲದ ಒಳಿತಿಗಾಗಿ ಸಾಮೂಹಿಕ ಯೋಗಕ್ಷೇಮ ಮತ್ತು ಸಮೃದ್ಧಿಯ ಮನೋಭಾವವನ್ನು ಹೆಚ್ಚಿಸಲು ಕೆಲಸ ಮಾಡಲು ನಮಗೆ ಸ್ಫೂರ್ತಿಯಾಗಲಿ" ಎಂದು ಮೋದಿ ಹೇಳಿದ್ದಾರೆ.

ಭಾರತದಲ್ಲಿ ಜುಲೈ 10ರಂದು ಈದ್ ಉಲ್ ಅಧಾ ಆಚರಣೆ ಮಾಡಲಾಗುತ್ತದೆ. ದೇಶದ ವಿವಿಧ ನಗರದಲ್ಲಿ ಮುಸ್ಲಿಂ ಬಾಂಧವರು ಮುಂಜಾನೆಯೇ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ.
ಬಕ್ರೀದ್ ಹಬ್ಬವನ್ನು ಬಲಿದಾನದ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ. ಕುರ್ಬಾನಿ ಎಂದು ಕರೆಯುವ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸಹ ಮುನ್ನೆಚ್ಚರಿಕೆ ವಹಿಸಿದ್ದಾರೆ.
Eid Mubarak! Greetings on Eid-ul-Adha. May this festival inspire us to work towards furthering the spirit of collective well-being and prosperity for the good of humankind.
— Narendra Modi (@narendramodi) July 10, 2022
ಇಸ್ಲಾಂ ಕ್ಯಾಂಲೆಡರ್‌ನ ದುಲ್ಹಜ್ ತಿಂಗಳ 10ರಂದು ಈದ್ ಉಲ್ ಅಧಾ ಆಚರಣೆ ಮಾಡಲಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಮಾಡಿದ ತ್ಯಾಗ ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯವಾಗಿದೆ.

ಧರ್ಮ ಸಂಸ್ಥಾಪನೆ ಕಾರ್ಯದಲ್ಲಿ ತೊಡಗಿದ್ದ ಪ್ರವಾದಿ ಇಬ್ರಾಹಿಂ ಅನೇಕ ಸತ್ವ ಪರೀಕ್ಷೆಗಳನ್ನು ಎದುರಿಸಿದರು. ಪತ್ನಿ ಹಾಜಿರಾ ಮತ್ತು ಬಹಳ ವರ್ಷಗಳ ನಿರೀಕ್ಷೆ ಬಳಿಕ ಹುಟ್ಟಿದ ಪುಟ್ಟ ಕಂದ ಇಸ್ಮಾಯಿಲ್ ಅವರನ್ನು ಅರೇಬಿಯಾದ ಮರುಭೂಮಿಯ ನಿರ್ಜಲ, ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರಬೇಕು ಎಂದು ಆಜ್ಞೆಯಾಗುತ್ತದೆ.
ಕುರಾನ್‌ನಲ್ಲಿ ಪತ್ನಿ, ಮಗುವನ್ನು ಬಿಟ್ಟು ಮರಳುವಾಗ ಪ್ರವಾದಿ ಇಬ್ರಾಹಿಂ ಮಾಡಿದ ಪ್ರಾರ್ಥನೆಯನ್ನು ಉಲ್ಲೇಖಿಸಲಾಗಿದೆ. ಬಕ್ರೀದ್ ಅಥವ ಈದ್ ಉಲ್ ಅಧಾ ಆಚರಣೆ ಬಗ್ಗೆ ಇಸ್ಲಾಂನಲ್ಲಿ ಹಲವು ನಿಯಮಗಳಿವೆ.
ಪ್ರಾಣಿಗಳನ್ನು ಬಲಿಕೊಡುವುದು ಸಹ ಈ ಹಬ್ಬದ ಆಚರಣೆಗಳ ಒಂದು ಭಾಗ. ಬಲಿಕೊಟ್ಟ ಪ್ರಾಣಿಯ ಮಾಂಸವನ್ನು ಮೂರು ಭಾಗವಾಗಿ ವಿಂಗಡನೆ ಮಾಡಿ ಹಂಚಬೇಕು ಎಂದು ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಲಾಗಿದೆ.












Click it and Unblock the Notifications