ಮಾರ್ಚ್ 2ರಂದು ಮತ ಎಣಿಕೆ; ಈಶಾನ್ಯ ರಾಜ್ಯಗಳ ಅಧಿಕಾರ ಬಿಜೆಪಿಗೆ?
ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ಫಲಿತಾಂಶ ಮಾರ್ಚ್ 2ರಂದು ಪ್ರಕಟವಾಗಲಿದೆ.
ನವದೆಹಲಿ, ಫೆಬ್ರವರಿ 27; ಈ ವರ್ಷದಲ್ಲಿ ಮೊದಲು ವಿಧಾನಸಭೆ ಚುನಾವಣೆ ಎದುರಿಸಿದ ರಾಜ್ಯಗಳು ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್. ಅಚ್ಚರಿಯ ವಿಚಾರವೆಂದರೆ ಮೂರು ರಾಜ್ಯಗಳಲ್ಲಿರುವ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 60. ಲೋಕಸಭಾ ಚುನಾವಣೆ 2024ರಲ್ಲಿ ನಡೆಯಲಿದ್ದು, ಅದಕ್ಕೂ ಮೊದಲು ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಈಶಾನ್ಯ ಭಾಗದ ಈ ಮೂರು ರಾಜ್ಯಗಳು ಸೇರಿವೆ.
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16ರಂದು ಮತದಾನ ನಡೆದಿತ್ತು. ನಾಗಾಲ್ಯಾಂಡ್ (60) ಮತ್ತು ಮೇಘಾಲಯ (60) ವಿಧಾನಸಭೆಗೆ ಫೆಬ್ರವರಿ 27ರ ಸೋಮವಾರ ಮತದಾನ ನಡೆದಿದೆ. ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 2ರ ಗುರುವಾರ ಪ್ರಕಟವಾಗಲಿದೆ. ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಈ ಚುನಾವಣೆ ಮಹತ್ವದ್ದಾಗಿದೆ.

ಐದು ವರ್ಷಗಳ ಹಿಂದೆ ಪ್ರಾದೇಶಿ ಪಕ್ಷಗಳ ಜೊತೆ ಕೈ ಜೋಡಿಸಿ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈ ಬಾರಿಯ ಚುನಾವಣೆಯಲ್ಲಿಯೂ ಸಹ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದು 2024ರ ಲೋಕಸಭೆ ಚುನಾವಣೆಗೆ ಸಹಾಯಕವಾಗುವಂತೆ ನೋಡಿಕೊಳ್ಳುವುದು ಬಿಜೆಪಿ ತಂತ್ರವಾಗಿದೆ. ಎರಡೂ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದ್ದರು, ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ಕೊಟ್ಟಿದ್ದರು.
ಈಶಾನ್ಯದ 8 ರಾಜ್ಯಗಳಲ್ಲಿ ಬಿಜೆಪಿ ಪಾಲುದಾರಿಕೆ ಹೊಂದಿದೆ. ಈ ಬಾರಿಯ ಚುನಾವಣೆಯಲ್ಲಿ ಉಭಯ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಪಡೆಯುವ ಉತ್ಸಾಹದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಮೇಘಾಲಯದಲ್ಲಿ ಕಾಂಗ್ರೆಸ್ ಜೊತೆಗೆ ಟಿಎಂಸಿ ಸಹ ಈ ಬಾರಿಯ ಚುನಾವಣಾ ಕಣಕ್ಕಿಳಿದಿದೆ. ಇದರಿಂದಾಗಿ ಬಿಜೆಪಿಗೆ ಸವಾಲು ಸಹ ಇದೆ.
ತ್ರಿಪುರಾ ರಾಜ್ಯದಲ್ಲಿ ಶೇ 80ಕ್ಕಿಂತ ಅಧಿಕ ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 60 ಕ್ಷೇತ್ರಗಳ ಪೈಕಿ 36ರಲ್ಲಿ ಗೆದ್ದು ಸಿಪಿಎಂನ 25 ವರ್ಷಗಳ ಆಳ್ವಿಕೆಗೆ ಅಂತ್ಯ ಹಾಡಿತ್ತು. ಅಧಿಕಾರ ಕಳೆದುಕೊಂಡ ಸಿಪಿಎಂ ಕೇವಲ 16 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಈ ಬಾರಿಯೂ ಐಪಿಎಫ್‌ಟಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದೆ.
2023ರಲ್ಲಿ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿವೆ. ವರ್ಷದ ಆರಂಭದಲ್ಲಿಯೇ ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಬಳಿಕ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣೆ ಇದೆ. ಈ ಚುನಾವಣೆಗಳನ್ನು ಗೆದ್ದರೆ ಮುಂದಿನ ಲೋಕಸಭೆ ಚುನಾವಣೆಗೆ ಸಹಕಾರಿಯಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಮಾರ್ಚ್ 2ರ ಗುರುವಾರ ಬೆಳಗ್ಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಸ್ಥಾನಗಳ ಸಂಖ್ಯೆ 60. ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಚುನಾವಣೆ ನಡೆದಿರುವ ಕಾರಣ ಮಧ್ಯಾಹ್ನ 12 ಗಂಟೆಯೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ. ಆದ್ದರಿಂದ ಕ್ರೈಸ್ತರ ಪ್ರಾಬಲ್ಯ ಇರುವ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್‌ಗೆ ಭಾರತ್ ಜೋಡೋ ಯಾತ್ರೆ ಸಹಾಯಕವಾಗಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications