RSS, ಬಿಜೆಪಿಯನ್ನು ಹೊಗಳಿದ ಮುಸ್ಲಿಂ ಮುಖಂಡರು
ನವದೆಹಲಿ, ಡಿ 21: ಕಾಂಗ್ರೆಸ್ ಪಕ್ಷ ಯಾವುದೇ ವಿಚಾರದಲ್ಲಿ ದ್ವಂದ್ವ ನಿಲುವನ್ನು ತಾಳಬಾರದು. ಕಾಂಗ್ರೆಸ್ ಪಕ್ಷಕ್ಕೆ ತಾಕತ್ತಿದ್ದರೆ ಮುಂಬರುವ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಸಲಿಂಗಕಾಮಿಗಳಿಗೆ ಬೆಂಬಲ ಘೋಷಿಸಲಿ ಎಂದು ಮುಸ್ಲಿಂ ಸಮುದಾಯದ ಮುಖಂಡರು ಸವಾಲೆಸೆದಿದ್ದಾರೆ.
ಸಲಿಂಗಕಾಮ ವಿಚಾರದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ನಿಲುವನ್ನು ನಾವು ಸ್ವಾಗತಿಸುತ್ತೇವೆ. ಬಿಜೆಪಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದೆ. (ಸಲಿಂಗ ಕಾಮ ಅಸಹಜ, ಬಿಜೆಪಿ ಬೆಂಬಲಿಸಲ್ಲ)

ಇತರ ಪಕ್ಷಗಳು ಈ ವಿಚಾರದಲ್ಲಿ ಸೂಕ್ತವಾದ ತೀರ್ಮಾನಕ್ಕೆ ಬರಲು ವಿಫಲವಾಗಿವೆ. ಸಲಿಂಗಕಾಮ ಎನ್ನುವುದು ರಾಜಕೀಯ ಅಥವಾ ಜಾತ್ಯಾತೀತದ ವಿಚಾರವಲ್ಲ. ಇದು ಇಡೀ ಮಾನವ ಕುಲಕ್ಕೆ ಮಾರಕ ಎಂದು ಕೆಲ ಮುಸ್ಲಿಂ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ಮತ್ತು ಮುಖ್ಯವಾಗಿ ರಾಹುಲ್ ಗಾಂಧಿ ಸಲಿಂಗಕಾಮವನ್ನು ಬೆಂಬಲಿಸಲು ವೈಯಕ್ತಿಕ ಕಾರಣಗಳಿರಬಹುದು. ಸಲಿಂಗಕಾಮಕ್ಕೆ ಇಸ್ಲಾಂ, ಹಿಂದೂ, ಜೈನ ಮತ್ತು ಬುದ್ದ ಧರ್ಮದಲ್ಲಿ ವಿರೋಧವಿದೆ ಎಂದು ಪತ್ರಕರ್ತ ಕ್ವಾರಿ ಎಂ ಎಂ ಮಝಾರಿ ಹೇಳಿದ್ದಾರೆ.
ಈ ಬಾರಿ ಮುಸ್ಲಿಮರೆಲ್ಲರೂ ಒಗ್ಗಟ್ಟಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದು ಮತ್ತೊಬ್ಬ ಮುಖಂಡ ಅರ್ಷದ್ ಖಾನ್ ಹೇಳಿದ್ದಾರೆ.
ಬಿಜೆಪಿ ರಾಷ್ಟೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಈ ವಿಚಾರದಲ್ಲಿ ತಮ್ಮ ಮತ್ತು ತಮ್ಮ ಪಕ್ಷದ ನಿಲುವನ್ನು ದೇಶದ ಜನತೆಗೆ ಸ್ಪಷ್ಟ ಪಡಿಸಿದ್ದಾರೆ. ಸಲಿಂಗಕಾಮದ ವಿಚಾರದಲ್ಲಿ ನಾವು ಬಿಜೆಪಿಯ ನಿಲುವನ್ನು ಬೆಂಬಲಿಸುತ್ತೇವೆ ಎಂದು ಕೆಲವು ಮುಸ್ಲಿಂ ಮುಖಂಡರು ಹೇಳಿದ್ದಾರೆ.












Click it and Unblock the Notifications