ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್ ರಾಣಾ ಭಾರತಕ್ಕೆ: ಮುಂದೇನು?
ನವದೆಹಲಿ, ಏಪ್ರಿಲ್ 10: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿರುವ ತಹವ್ವೂರ್ ರಾಣಾನನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಅಮೆರಿಕಾದಿಂದ ಭಾರತಕ್ಕೆ ಕರೆತರುವ ವಿಮಾನವು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ. ಸದ್ಯ ತಹವ್ವೂರ್ ರಾಣಾನನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ತಿಹಾರ್ ಜೈಲಿಗೆ ಕರೆದೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ.
ತಹವವ್ವೂರ್ ರಾಣಾ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಗೆ ಈತನೇ ರೂವಾರಿಯಾಗಿದ್ದಾನೆ. ಲಷ್ಕರ್ ಏ ತೊಯ್ಬಾದ ಸಕ್ರಿಯ ಸದಸ್ಯನಾಗಿದ್ದ ಈತ ಹಫೀಸ್ ಸಯೀದ್ನ ಲಷ್ಕರ್ ಏ ತೊಯ್ಬಾದ ಉಗ್ರ ಸಂಘಟನೆಗೆ ಭಾರತದ ಮಾರ್ಗ ತೋರಿಸಿದ್ದಾನೆ ಎನ್ನುವ ಆರೋಪವಿದೆ.

2008 ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿ ಬಳಿಕ ತಹಾವ್ವೂರ್ ರಾಣ ಇದಕ್ಕೆ ಕಾರಣರಾದವರಿಗೆ ಪಾಕ್ ಸೇನೆ ಗೌರವ ಕೊಡಬೇಕು ಎಂದು ಭಾರತದಲ್ಲಿ ನಡೆದ ಉಗ್ರರ ದಾಳಿಯನ್ನು ಸಮರ್ಥಿಸಿಕೊಂಡಿದ್ದ.
ಈ ಘಟನೆ ಬಳಿಕ ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ತಹವವ್ವೂರ್ ರಾಣಾ ಪಾಕಿಸ್ತಾನದಿಂದ ಕೆನಡಾಗೆ ಹೋಗಿ ನೆಲೆಸಿದ್ದ ಅಲ್ಲಿಯೂ ಭಯೋತ್ಪಾದಕ ಕೃತ್ಯ ಮುಂದುವರಿಸಿದ ಹಿನ್ನೆಲೆಯಲ್ಲಿ ಅಮೆರಿಕಾದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದರು. ಇದೀಗ ಭಾರತ ಸರ್ಕಾರದ ಮನವಿ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಫಲವಾಗಿ ಅಮೆರಿಕಾ ರಾಣಾನನ್ನು ಗಡಿಪಾರು ಮಾಡಿ ಭಾರತಕ್ಕೆ ಹಸ್ತಾಂತರಿಸಿದೆ.
ತಹವ್ವೂರ್ ರಾಣಾ ಭಾರತಕ್ಕೆ ಹಸ್ತಾಂತರ ತಡವಾಗಿದ್ದೇಕೆ?
2024ರಲ್ಲಿಯೇ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ಇತ್ತು. ಆದರೆ ಈ ಪ್ರಕ್ರಿಯೆಗಳನ್ನು ಕೈಗೊಳ್ಳಲು ಯುಎಸ್ ಸುಪ್ರೀಂಕೋರ್ಟ್ ಒಪ್ಪಿಗೆ ಸಿಕ್ಕಿರಲಿಲ್ಲ. ಡಿಸೆಂಬರ್‌ನಲ್ಲಿ ಭಾರತಕ್ಕೆ ತಹವ್ವೂರ್ ಹುಸೇನ್ ರಾಣಾ ಕರೆತರಲಾಗುತ್ತದೆ ಎಂದು ಮುಂಬೈನ ಜೈಲಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಗಡಿಪಾರು ಮಾಡದಂತೆ ಕೋರಿ ತಹವ್ವೂರ್ ಹುಸೇನ್ ರಾಣಾನನ್ನು ಸಲ್ಲಿಕೆ ಮಾಡಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲು ಅವಕಾಶವಿದೆ ಎಂದು ಹೇಳಿತ್ತು. ಇದೀಗ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ತಹವ್ವೂರ್ ರಾಣಾ ಭಾರತ ತಲುಪಿದ್ದು, ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.












Click it and Unblock the Notifications