ಮುಂಬೈ ಮೇಯರ್ ಸ್ಥಾನ ಮಹಿಳೆಗೆ ಮೀಸಲು, ಪಟ್ಟಕ್ಕಾಗಿ ರಾಜಕೀಯ ಕಿತ್ತಾಟ ಜೋರು
ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಹಾಗೂ ಮಹಾನಗರಿ ಎಂದು ಮುಂಬೈ ಸಿಟಿಯನ್ನು ಜನರು ಕರೆಯುತ್ತಾರೆ, ಜಗತ್ತಿನಾದ್ಯಂತ ಗುರುತಿಸುತ್ತಾರೆ. ಕೋಟಿ ಕೋಟಿ ಜನರಿಗೆ ಆಶ್ರಯ ನೀಡಿರುವ ಇದೇ ಮುಂಬೈ ನಗರ, ಪ್ರತಿವರ್ಷ ನೂರಾರು ಲಕ್ಷ ಕೋಟಿ ರೂಪಾಯಿ ವ್ಯಾಪಾರ & ವಹಿವಾಟು ನಡೆಸುತ್ತಾ ಬಂದಿದೆ. ಪ್ರಮುಖವಾಗಿ ಮುಂಬೈ ಷೇರು ಮಾರುಕಟ್ಟೆ ದೇಶದ ಆರ್ಥಿಕತೆ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಹೊಂದಿದೆ. ಹೀಗಿದ್ದಾಗ ಮುಂಬೈ ನಗರದ ಮೇಯರ್ ಸ್ಥಾನ ಒಂದು ದೊಡ್ಡ ಹುದ್ದೆಯಾಗಿದೆ. ಈ ಹುದ್ದೆ ಪಡೆಯಲು ರಾಜಕೀಯ ಪಕ್ಷಗಳ ನಾಯಕರ ನಡುವೆ ಫೈಟಿಂಗ್ ಜೋರಾಗಿದೆ. ಹೀಗಿದ್ದಾಗಲೇ ಮುಂಬೈ ಮೇಯರ್ ಸ್ಥಾನ ಮಹಿಳೆಗೆ ಮೀಸಲಾಗಿದೆ.
ಗುರುವಾರ ನಡೆದ ಲಾಟರಿ ಡ್ರಾ ವೇಳೆ, ಮುಂಬೈ ನಗರದ ಮೇಯರ್ ಸ್ಥಾನ ಯಾವ ಕೆಟಗರಿಗೆ ಮೀಸಲಾಗಿ ಇಡಬೇಕು ಎಂಬುದನ್ನು ಅಂತಿಮ ಮಾಡಿಕೊಳ್ಳಲಾಯಿತು. ರಾಜಕೀಯ ಜಿದ್ದಾಜಿದ್ದಿ ಜೋರಾಗಿರುವ ಈ ಸಮಯದಲ್ಲೇ 'ಸಾಮಾನ್ಯ ಮಹಿಳೆ' ವರ್ಗಕ್ಕೆ ಮುಂಬೈ ಮೇಯರ್ ಸ್ಥಾನ ಮೀಸಲಾಗಿದೆ. ಲಾಟರಿ ಡ್ರಾ ಮೂಲಕ ಕೆಟಗರಿ ಫೈನಲ್ ಆಗಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಈ ವಿಚಾರದಲ್ಲಿ ಆಕ್ರೋಶ ಹೊರ ಹಾಕಿದೆ. ಅಲ್ಲದೆ ಮೇಯರ್ ಆಯ್ಕೆ ಪ್ರಕ್ರಿಯೆ & ಫಲಿತಾಂಶ ಎರಡನ್ನೂ ಆಕ್ಷೇಪಿಸಿ, ಭಾರಿ ದೊಡ್ಡ ಕೋಲಾಹಲ ಸೃಷ್ಟಿ ಮಾಡಿದೆ. ಮುಂಬೈ ಜೊತೆಗೆ ಮಹಾರಾಷ್ಟ್ರದ ಇನ್ನುಳಿದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಆಯ್ಕೆಗೂ ಈಗ ಮೀಸಲಾತಿ ಪ್ರಕಟವಾಗಿದೆ.

ಮಹಿಳಾ ಮೇಯರ್ ಆಯ್ಕೆ ಗ್ಯಾರಂಟಿ
ಮೀಸಲಾತಿ ಘೋಷಣೆ ಪ್ರಕಾರ ಇದೀಗ ಪುಣೆ, ಧುಲೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಎಂದರೆ ಬಿಎಂಸಿ, ನಾಂದೇಡ್, ನವಿ ಮುಂಬೈ, ಮಾಲೆಗಾಂವ್, ಮೀರಾ ಭಯಂದರ್ ಹಾಗೂ ನಾಸಿಕ್ ಸೇರಿದಂತೆ ನಾಗ್ಪುರದಲ್ಲಿ ಮೇಯರ್ ಹುದ್ದೆ ಮಹಿಳೆಯರಿಗೆ ಮೀಸಲಾಗಿ ಇರಲಿದೆ. ಹೀಗಾಗಿ ಈ ಎಲ್ಲೆಡೆ ಮಹಿಳಾ ಮೇಯರ್ ಅಧಿಕಾರ ಹಿಡಿಯಲಿದ್ದು, ಲಾತೂರ್, ಜಲ್ನಾ ಮತ್ತು ಥಾಣೆಯ ಪುರಸಭೆ ನಿಗಮ ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಿಡಲಾಗಿದೆ. ಈ ಪೈಕಿ ಲಾತೂರ್ & ಜಲ್ನಾ ಪರಿಶಿಷ್ಟ ಜಾತಿಯವರಿಗೆ ಮೀಸಲಾಗುವ ಜೊತೆಗೆ ಮಹಿಳೆಯರಿಗೆ ಅವಕಾಶ ನೀಡಲಿದೆ. ಅಕೋಲಾ, ಚಂದ್ರಾಪುರ, ಅಹಲ್ಯಾನಗರ & ಜಲಗಾಂವ್ ಒಬಿಸಿ ವಿಭಾಗದಲ್ಲಿ ಮಹಿಳೆಯರಿಗೆ ಮೀಸಲಾಗಿದೆ. ಹಾಗೂ ಪನ್ವೇಲ್, ಇಚಲಕರಂಜಿ, ಕೊಲ್ಹಾಪುರ, ಉಲ್ಲಾಸ್‌ನಗರ ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ಅಡಿಯಲ್ಲಿ ಅವಕಾಶ ಸಿಗಲಿದೆ.
ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು
ಬಿಎಂಸಿ ಚುನಾವಣೆಯಲ್ಲಿ ಠಾಕ್ರೆ ಕುಟುಂಬ ಭಾರಿ ಹಿನ್ನಡೆ ಅನುಭವಿಸಿತ್ತು, ಸುಮಾರು 30 ವರ್ಷಗಳ ಕಾಲ ಬಿಎಂಸಿ ಚುನಾವಣೆ ಮೇಲೆ ಹಿಡಿತ ಹೊಂದಿದ್ದ ಠಾಕ್ರೆ ಕುಟುಂಬಕ್ಕೆ ಈ ಬಾರಿ ದೊಡ್ಡ ಹಿನ್ನಡೆ ಆಗಿದೆ. ಬಿಜೆಪಿ ಮತ್ತು ಶಿಂಧೆ ಸೇನಾ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ 89 ಸ್ಥಾನ & ಶಿಂಧೆ ಸೇನಾ 29 ಸ್ಥಾನ ಗೆದ್ದು ಬೀಗಿದೆ. ಈ ಮೂಲಕ ಬಿಎಂಸಿ ಆಡಳಿತದ ಚುಕ್ಕಾಣಿ ಹಿಡಿಯುವುದು ಬಿಜೆಪಿ ಮತ್ತು ಮಿತ್ರಪಕ್ಷಗಳು ಎಂಬುದು ಗ್ಯಾರಂಟಿ ಆಗಿದೆ. ಇನ್ನೊಂದು ಕಡೆ ಮೀಸಲಾತಿ ವಿಚಾರವು ಕೂಡ ಈಗ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ.












Click it and Unblock the Notifications