Mumbai: ಬಿಎಂಸಿ ಎಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ, ವಾರ್ಷಿಕ ಬಜೆಟ್ ಮೊತ್ತವೇ 74,000 ಕೋಟಿ ರೂ.
ಮುಂಬೈ: ದೇಶದಲ್ಲಿ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ದೊಡ್ಡ ಪಾಲಿಕೆ ಎಂದು ಹೆಸರು, ಖ್ಯಾತಿ ಗಳಿಸಿರುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶ ಬರುತ್ತಿದೆ. ಪ್ರಾರಂಭದ ಹಂತದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಮುನ್ನಡೆ ಸಾಧಿಸಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯನ್ನು ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಎಂದೂ ಕರೆಯಲಾಗುತ್ತದೆ. ಒಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುವ ಚುನಾವಣೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಏಷ್ಯಾದಲ್ಲೇ ದೊಡ್ಡ ಹಾಗೂ ಅತ್ಯಂತ ಪ್ರಭಾವಶಾಲಿ ಪಾಲಿಕೆಗಳಲ್ಲಿ ಮುಂಬೈ ಮಹಾನಗರ ಪಾಲಿಕೆಯೂ ಒಂದಾಗಿದೆ. ಈ ಪಾಲಿಕೆಯು ಅತ್ಯಂತ ಹಳೆಯ ಪಾಲಿಕೆ ಎನ್ನುವುದರೊಂದಿಗೆ ಹಲವು ದಾಖಲೆಗಳನ್ನೂ ಬರೆದಿದೆ. ಕೋವಿಡ್ ಸಮಯದಲ್ಲಿ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಹೆಚ್ಚು ಪರಿಣಾಮಕಾರಿ ಯೋಜನೆಗಳನ್ನು ಜಾರಿ ಮಾಡಿದ ಖ್ಯಾತಿಯೂ ಈ ಪಾಲಿಕೆಗೆ ಇದೆ. 1865ರಲ್ಲಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸ್ಥಾಪನೆ ಆಗಿತ್ತು. ಆಡಳಿತ, ಆರ್ಥಿಕ ಸಾಮರ್ಥ್ಯ ಮತ್ತು ಆಡಳಿತದ ಮೇಲಿನ ಪ್ರಭಾವದಿಂದಾಗಿ ಇದು ದೇಶದಲ್ಲೇ ಖ್ಯಾತಿ ಗಳಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಅತ್ಯಂತ ಶ್ರೀಮಂತ ಪಾಲಿಕೆ ಆಗಿರುವುದರಿಂದ ಸಹಜವಾಗಿಯೇ ಈ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದಕ್ಕೆ ಜಿದ್ದಾಜಿದ್ದಿನ ಪೈಪೋಟಿ ಇದೆ.

ಬಿಎಂಸಿ - ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಏಷ್ಯಾದಲ್ಲೇ ದೊಡ್ಡ ಪಾಲಿಕೆ ಆಗಿರುವುದು ಮಾತ್ರವಲ್ಲ. ಇದರ ಬಜೆಟ್ ಸಹ ಅಷ್ಟೇ ಖ್ಯಾತಿ ಗಳಿಸಿದೆ. ಭಾರತದ ರಾಜ್ಯವೊಂದು ಮಂಡನೆ ಮಾಡುವಷ್ಟು ದೊಡ್ಡದಾದ ಬಜೆಟ್‌ಅನ್ನು ಬಿಎಂಸಿ ಮಂಡನೆ ಮಾಡುತ್ತದೆ. ಬಿಎಂಸಿಯ ಬಜೆಟ್ ದೇಶದ ಹಲವು ಸಣ್ಣ ರಾಜ್ಯಗಳ ವಾರ್ಷಿಕ ಬಜೆಟ್‌ಗೆ ಸರಿಸಮಾನವಾಗಿದೆ. ಬಿಎಂಸಿಯ ವಾರ್ಷಿಕ ಬಜೆಟ್ ಮೊತ್ತವೇ 74,000 ಕೋಟಿ ರೂಪಾಯಿ ಇದೆ. ಭಾರತದ ಸಣ್ಣ ರಾಜ್ಯಗಳಾದ ಗೋವಾ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಂತಹ ರಾಜ್ಯಗಳ ವಾರ್ಷಿಕ ಬಜೆಟ್‌ಗಳಿಗಿಂತಲೂ ಬಿಎಂಸಿ ಬಜೆಟ್ ದೊಡ್ಡದು. ಇದು ಬಿಎಂಸಿಯ ಪ್ರಭಾವ ಹಾಗೂ ಪ್ರಾಮುಖ್ಯತೆಗೆ ಸಣ್ಣ ನಿದರ್ಶನವಷ್ಟೇ. ಈ ರೀತಿಯ ಹಲವು ದಾಖಲೆಗಳು ಬಿಎಂಸಿಯ ಹೆಸರಿನಲ್ಲಿದೆ.
ಹೆಚ್ಚು ತೆರಿಗೆ ಸಂಗ್ರಹಿಸುವ ಪಾಲಿಕೆ
ಕರ್ನಾಟಕದಲ್ಲಿ ಹೇಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಹಳೆಯ ಬಿಬಿಎಂಪಿ) ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗುತ್ತದೆಯೋ ಅದೇ ರೀತಿ ಮಹಾರಾಷ್ಟ್ರದ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಸ್ಥಳೀಯ ಸಂಸ್ಥೆಗಳಲ್ಲಿ ಬಿಎಂಸಿ ಮುಂದಿದೆ.
ಇದರ ಮುಖ್ಯ ಆದಾಯವೆಂದರೆ ಆಸ್ತಿ ತೆರಿಗೆ. ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಆಸ್ತಿಗಳ ಮೇಲೆ ವಿಧಿಸಲಾಗುವ ತೆರಿಗೆಯಿಂದ ಈ ಪಾಲಿಕೆಗೆ ಬೃಹತ್ ಪ್ರಮಾಣದ ಆದಾಯ ಸಂಗ್ರಹವಾಗುತ್ತದೆ. ಅಲ್ಲದೇ ಹೆಚ್ಚುವರಿಯಾಗಿ ನೀರಿನ ಶುಲ್ಕಗಳು, ಒಳಚರಂಡಿ ಶುಲ್ಕಗಳು, ಪರವಾನಗಿಗಳು, ನಿರ್ಮಾಣ ಶುಲ್ಕಗಳು ಹಾಗೂ ಜಾಹೀರಾತು ತೆರಿಗೆ ಸೇರಿದಂತೆ ಹಲವು ಮೂಲಗಳಿಂದ ಆದಾಯ ಸಂಗ್ರಹವಾಗುತ್ತಿದೆ.
ಪಾಲಿಕೆಯ ಜವಾಬ್ದಾರಿ ಹೇಗಿದೆ
ಅತಿ ದೊಡ್ಡ ಪಾಲಿಕೆ ಎನ್ನುವ ಹೆಗ್ಗಳಿಕೆಯೊಂದಿಗೆ ಪಾಲಿಕೆಗೆ ತನ್ನದೇ ಆದ ದೊಡ್ಡ ಜವಾಬ್ದಾರಿಗಳು ಸಹ ಇವೆ. ಮುಂಬೈ ನಗರದಲ್ಲಿ ರಸ್ತೆಗಳು, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆಗಳು, ಆರೋಗ್ಯ ಸೇವೆಗಳು, ಶಿಕ್ಷಣ, ಸಾರ್ವಜನಿಕ ಸಾರಿಗೆ ಹಾಗೂ ವಿಪತ್ತು ನಿರ್ವಹಣೆಯಂತಹ ಅಗತ್ಯ ಮತ್ತು ಪ್ರಮುಖ ಜವಾಬ್ದಾರಿಗಳು ಬಿಎಂಸಿಯ ಮೇಲಿದೆ.
ಮಹಾರಾಷ್ಟ್ರ ರಾಜಕೀಯದ ಮೇಲೆ ಪ್ರಭಾವ
ಇನ್ನು ಬಿಎಂಸಿ - ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಕೇವಲ ಸ್ಥಳೀಯ ಪಾಲಿಕೆ ಮಾತ್ರವಲ್ಲ. ಈ ಪಾಲಿಕೆಯ ಹಂತದಲ್ಲಿ ನಡೆಯುವ ವಿಷಯಗಳು ಹಾಗೂ ನಿರ್ಧಾರಗಳು ಇಡೀ ಮಹಾರಾಷ್ಟ್ರದ ಮೇಲೆ ಪ್ರಭಾವ ಬೀರುತ್ತದೆ. ಮಹಾರಾಷ್ಟ್ರದ ರಾಜಕೀಯದ ಮೇಲೂ ಸಹ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರಗಳು ಮತ್ತು ಆಡಳಿತ ಪ್ರಭಾವ ಬೀರುವುದು ಇದೆ. ಇದೇ ಕಾರಣಕ್ಕಾಗಿಯೇ ಬಿಎಂಸಿ - ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯು ಭಾರೀ ಮಹತ್ವವನ್ನು ಪಡೆದುಕೊಂಡಿದೆ.












Click it and Unblock the Notifications