ಎಚ್ಚರ ಎಚ್ಚರ; 6 ತಿಂಗಳವರೆಗೂ ಬೆನ್ನು ಬಿಡದೇ ಬಾಧಿಸುತ್ತೆ ಕೊರೊನಾವೈರಸ್!
ನವದೆಹಲಿ, ಜನವರಿ.11: ಕೊರೊನಾವೈರಸ್ ಬಂತು. ಕೊರೊನಾವೈರಸ್ ಹೋಯಿತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದೀವಿ, ಮಹಾಮಾರಿ ಚಿಂತೆಯಿಲ್ಲ ಎಂದು ನಿರಾಳರಾಗುವಂತಿಲ್ಲ. ಏಕಂದರೆ ಒಮ್ಮೆ ಅಂಟಿರುವ ಮಹಾಮಾರಿಯ ಪ್ರಭಾವ 6 ತಿಂಗಳು ಬೆನ್ನು ಬಿಡದೇ ಕಾಡುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಕೊರೊನಾವೈರಸ್ ಸೋಂಕಿತರ ಬಗ್ಗೆ ನಡೆಸಿದ ಅಧ್ಯಯನದ ವರದಿಯು "ದಿ ಲ್ಯಾನ್ಸೆಟ್ ಜರ್ನಲ್" ನಲ್ಲಿ ಪ್ರಕಟಿಸಲಾಗಿದೆ. ಒಂದು ಬಾರಿ ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯಲ್ಲಿ 9 ತಿಂಗಳವರೆಗೂ ಕನಿಷ್ಠ ಒಂದು ರೋಗದ ಲಕ್ಷಣವಾದರೂ ಕಂಡು ಬರುತ್ತದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಚೀನಾದ ವುಹಾನ್ ನಗರದಲ್ಲಿ 1733 ಕೊರೊನಾವೈರಸ್ ಸೋಂಕಿತರನ್ನು ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿದೆ. ಜನವರಿಯಿಂದ ಮೇ ಹಾಗೂ ಜೂನ್ ನಿಂದ ಸಪ್ಟೆಂಬರ್ ವರೆಗೆ ಈ ಸೋಂಕಿತರ ಆರೋಗ್ಯದ ಸ್ಥಿತಿಗತಿ ಮತ್ತು ಬದಲಾವಣೆಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ.

ಸಂಶೋಧಕರ ಅಧ್ಯಯನದ ವಿಧಾನ
ಚೀನಾದ 1733 ಕೊರೊನಾವೈರಸ್ ಸೋಂಕಿತರನ್ನು ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು. ರೋಗದ ಲಕ್ಷಣಗಳು, ಆರೋಗ್ಯ ಸ್ಥಿತಿ, ದೈಹಿಕ ಚಟುವಟಿಕೆಗಳಲ್ಲಿ ಆಗಿರುವ ಬದಲಾವಣೆಗೆ ಸಂಬಂಧಿಸಿದಂತೆ ನುರಿತ ಸಂಶೋಧಕರು ಸಿದ್ಧಪಡಿಸಿದ ಪ್ರಶ್ನಾವಳಿಗಳನ್ನು ನೇರವಾಗಿ ಕೇಳಲಾಗಿತ್ತು. ಗುಣಮುಖರಾದ ವ್ಯಕ್ತಿಗಳನ್ನು ಕೂಡಾ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. 400 ರೋಗಿಗಳಿಗೆ ಕೂಡ ಶ್ವಾಸಕೋಶ ಸಮಸ್ಯೆ ಸೇರಿದಂತೆ ಹಲವು ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು.

ಸ್ನಾಯು ಸೆಳೆತ ಸಮಸ್ಯೆ ಎದುರಿಸುವವರೇ ಹೆಚ್ಚು!
ಕೊರೊನಾವೈರಸ್ ಸೋಂಕಿತರಲ್ಲಿ ಸ್ನಾಯು ಸೆಳೆತ ಸಮಸ್ಯೆಯು ಸರ್ವೇ ಸಾಮಾನ್ಯವಾಗಿ ಬಾಧಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಶೇ.63ರಷ್ಟು ಕೊವಿಡ್-19 ಸೋಂಕಿತರಲ್ಲಿ ಗುಣಮುಖರಾದ ಬಳಿಕವೂ ಸ್ನಾಯು ಸೆಳೆತದ ಸಮಸ್ಯೆ ಕಾಡುತ್ತದೆ. ಶೇ.26ರಷ್ಟು ಸೋಂಕಿತರಿಗೆ ನಿದ್ರಾ ಸಮಸ್ಯೆ ಕಾಡಲಿದ್ದು, ಶೇ.23ರಷ್ಟು ಜನರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿ ಕಂಡು ಬಂದಿದೆ ಎಂದು ಅಧ್ಯಯನವು ತಿಳಿಸಿದೆ.

ಕೊವಿಡ್-19 ಸೋಂಕಿತರಲ್ಲಿ ಅಂಗಾಂಗ ಸಮಸ್ಯೆ
ಕೊವಿಡ್-19 ಸೋಂಕಿನಿಂದ ತೀವ್ರವಾಗಿ ಬಳಲಿದ ಜನರು ಚಿಕಿತ್ಸೆ ನಂತರದಲ್ಲಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಾರೆ. ತದನಂತರ ಅಂಥ ವ್ಯಕ್ತಿಗಳ ಶ್ವಾಸಕೋಶ ಪ್ರಕ್ರಿಯೆಗಳು ದುರ್ಬಲಗೊಂಡಿರುತ್ತವೆ. ಅಲ್ಲದೇ, ಎದೆನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುವುದರ ಜೊತೆಗೆ ದೀರ್ಘಾವಧಿಯ ಬಳಿಕ ಅಂಗಾಂಗ ಸಮಸ್ಯೆಗೆ ತುತ್ತಾಗುವ ಅಪಾಯವಿರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸಂಶೋಧಕರು ಅಧ್ಯಯಮದ ಬಗ್ಗೆ ಹೇಳುವುದೇನು?
ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾದ ನಂತರದಲ್ಲೂ ಕೆಲವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದು ವಿಶ್ಲೇಷಣೆಯಿಂದ ಗೊತ್ತಾಗಿದೆ. ಹೀಗಾಗಿ ಡಿಸ್ಚಾರ್ಜ್ ಆದ ಬಳಿಕವೂ ಸೋಂಕಿತರು ತಮ್ಮ ಆರೋಗ್ಯ ಸ್ಥಿತಿಯ ಮೇಲೆ ಗಮನ ಹರಿಸಬೇಕಾಗಿದೆ. ಅದರಲ್ಲೂ ಸೋಂಕಿನ ಲಕ್ಷಣಗಳನ್ನು ಹೊಂದಿರುವವರು ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಉಸಿರಾಟ ಔಷಧೀಯ ರಾಷ್ಟ್ರೀಯ ಕೇಂದ್ರದ ಸಹ-ಲೇಖಕ ಬಿನ್ ಕ್ಯಾವೋ ತಿಳಿಸಿದ್ದಾರೆ.

ಕನಿಷ್ಠ ಶೇ.76ರಷ್ಟು ಜನರಲ್ಲಿ ಒಂದು ಲಕ್ಷಣ
ಕೊರೊನಾವೈರಸ್ ಸೋಂಕಿನಿಂದ ತೀವ್ರವಾಗಿ ಬಳಲಿದ ಶೇ.76ರಷ್ಟು ರೋಗಿಗಳು ಗುಣಮುಖರಾದ ನಂತರವೂ ಕನಿಷ್ಠ ಒಂದು ರೋಗದ ಲಕ್ಷಣವನ್ನು ಹೊಂದಿರುವುದು ಗೊತ್ತಾಗಿದೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಗಳ ಪೈಕಿ ಶೇ.56ರಷ್ಟು ಜನರಲ್ಲಿ ಶ್ವಾಸಕೋಶ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 6 ನಿಮಿಷಗಳ ನಡಿಗೆಯಲ್ಲಿ ಸೋಂಕಿತರು ಹೆಚ್ಚು ನಿತ್ರಾಣರಾಗುವುದು ಕಂಡು ಬಂದಿದೆ. ಇನ್ನು, ಶೇ.13ರಷ್ಟು ಜನರ ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.












Click it and Unblock the Notifications