ಭಾರತ: ಏಪ್ರಿಲ್ ತಿಂಗಳಿನಲ್ಲಿ 56 ಪತ್ರಕರ್ತರು ಕೊರೊನಾದಿಂದ ಸಾವು
ನವದೆಹಲಿ, ಏಪ್ರಿಲ್ 30: ಕೊರೊನಾವೈರಸ್ ಮೊದಲ ಅಲೆಯಾಗಲಿ. ಕೊರೊನಾವೈರಸ್ ಎರಡನೇ ಅಲೆಯಾಗಲಿ. ಭಾರತದಲ್ಲಿ ಕೊವಿಡ್-19 ಮಹಾಮಾರಿಯ ಕರಾಳತೆ ಮತ್ತು ನೈಜ ಚಿತ್ರಣವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲು, ನಿಮ್ಮನ್ನು ಎಚ್ಚರಿಸಲು ಹಾಗೂ ಜಾಗೃತಗೊಳಿಸಲು ಪತ್ರಕರ್ತರು ಅವಿರತವಾಗಿ ಶ್ರಮಿಸಿದ್ದಾರೆ ಹಾಗೂ ಶ್ರಮಿಸುತ್ತಿದ್ದಾರೆ.
ಸಾಂಕ್ರಾಮಿಕ ಪಿಡುಗಿನ ನಡುವೆ ಸಾಮಾಜಿಕ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರನ್ನೂ ಕೊರೊನಾವೈರಸ್ ಮಹಾಮಾರಿ ಬಿಟ್ಟಿಲ್ಲ. ದೇಶದಲ್ಲಿ 100ಕ್ಕೂ ಹೆಚ್ಚು ಪತ್ರಕರ್ತರು ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದಾರೆ.
2020ರ ಏಪ್ರಿಲ್ ತಿಂಗಳಿನಿಂದ 2021ರ ಏಪ್ರಿಲ್ ತಿಂಗಳವರೆಗೆ ಒಟ್ಟು 101 ಮಂದಿ ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ದೇಶದಲ್ಲಿ ಕೊರೊನಾ ಎರಡನೇ ಅಲೆ ಎಷ್ಟೊಂದು ಅಪಾಯಕಾರಿಯಾಗಿ ಹರಡುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಒಂದು ತಿಂಗಳಿನಲ್ಲಿ 50ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಸೋಂಕಿನಿಂದ ಅಸುನೀಗಿದ್ದಾರೆ.

ದೆಹಲಿಯಲ್ಲಿ ಇಬ್ಬರು ಹಿರಿಯ ಪತ್ರಕರ್ತರು ಸಾವು
ಕಳೆದ 4 ತಿಂಗಳಿನಲ್ಲಿ ನವದೆಹಲಿಯೊಂದರಲ್ಲೇ 56 ಮಂದಿ ಪತ್ರಕರ್ತರು ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಶುಕ್ರವಾರ ರಾಷ್ಟ್ರೀಯ ಸುದ್ದಿವಾಹಿನಿ ಆಜ್ ತಕ್ ಖ್ಯಾತ ಪತ್ರಕರ್ತ ರೋಹಿತ್ ಸರ್ದಾನಾ ಅವರು ಕೊವಿಡ್-19 ಸೋಂಕಿನಿಂದಲೇ ವಿಧಿವಶರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತೆ ಮೀನಾಕ್ಷಿ ಭಟ್ಟಾಚಾರ್ಯ ಸಹ ಕೊರೊನಾವೈರಸ್ ಸೋಂಕಿನಿ ಸಾವನ್ನಪ್ಪಿದ್ದಾರೆ.

ಪತ್ರಕರ್ತರ ಪಾಲಿಗೆ ಕರಾಳ ಏಪ್ರಿಲ್
ದೇಶದಲ್ಲಿ ಪತ್ರಕರ್ತರ ಪಾಲಿಗೆ ಏಪ್ರಿಲ್ ತಿಂಗಳು ಕರಾಳವಾಗಿದೆ. ಕಳೆದ 28 ದಿನಗಳಲ್ಲೇ 52 ಮಂದಿ ಪತ್ರಕರ್ತರು ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ, ಒಂದು ದಿನಕ್ಕೆ ಇಬ್ಬರು ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಯಾವ ರಾಜ್ಯದಲ್ಲಿ ಎಷ್ಟು ಪತ್ರಕರ್ತರ ಸಾವು
ರಾಜ್ಯ - ಸಾವಿನ ಸಂಖ್ಯೆ
ಉತ್ತರ ಪ್ರದೇಶ - 19
ತೆಲಂಗಾಣ - 17
ಮಹಾರಾಷ್ಟ್ರ - 13
ಒಡಿಶಾ - 9
ದೆಹಲಿ - 8
ಆಂಧ್ರ ಪ್ರದೇಶ - 6
ತಮಿಳುನಾಡು - 4
ಅಸ್ಸಾಂ - 4

ದೇಶದಲ್ಲಿ ಕೊವಿಡ್-19 ಅಂಕಿ-ಸಂಖ್ಯೆಗಳು
ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೊಸ ದಾಖಲೆ ಬರೆದಿವೆ. ಕಳೆದ 24 ಗಂಟೆಗಳಲ್ಲಿ 3,86,452 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 3498 ಜನರು ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 2,08,330ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,87,62,976ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು 31,70,228 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications