ಎರಡು ದಿನಗಳ ಬಳಿಕ ವಿರಾಮಕ್ಕೆ ಜಾರಲಿದೆ ಮುಂಗಾರು
Recommended Video

ಬೆಂಗಳೂರು, ಜೂನ್ 12: ಈಗ ದೇಶದಾದ್ಯಂತ ಸುರಿಯುತ್ತಿರುವ ಮುಂಗಾರು ಮಳೆ ಇನ್ನೆರಡು ದಿನ ಸುರಿಯಲಿದ್ದು ನಂತರ ಒಂದು ವಾರಗಳ ಕಾಲ ಮಳೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಗುರುವಾರದಿಂದ ಮುಂಗಾರು ಮಳೆ ದುರ್ಬಲವಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಆದರೆ ಇದೇ ವೇಳೆ ಮುಂದಿನ 48 ಗಂಟೆಗಳಲ್ಲಿ ಈಶಾನ್ಯ ಭಾರತದಲ್ಲಿ ಹೆಚ್ಚಿನ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ನೈರುತ್ಯ ಮುಂಗಾರು ಮಾರುತಗಳು ಮರಾಠವಾಡ, ವಿಧರ್ಭ, ಛತ್ತೀಸ್ ಗಢ ಪ್ರದೇಶಗಳಿಗೂ ವಿಸ್ತರಿಸಿದ್ದು, ಮುಂಬೈನ ಥಾಣೆ, ಅಹ್ಮದ್ ನಗರ, ಬುಲ್ಧಾನಾ, ಅಮ್ರೋಟಿ, ಗೋಂಡಿಯಾ, ಭವಾನಿಪಟ್ನ, ಪುರಿ, ಕೊಲ್ಕತ್ತಾ, ಸೊಹ್ರಾ, ಉತ್ತರ ಲಖಿಂಪುರದ ಮೂಲಕ ಹಾದುಹೋಗಿವೆ.

ಮುಂದಿನ 48 ಗಂಟೆಗಳಲ್ಲಿ ಇದೇ ಮುಂಗಾರು ಮಾರುತಗಳು ಒಡಿಶಾದ ಇನ್ನೂ ಹೆಚ್ಚಿನ ಪ್ರದೇಶಗಳು, ಈಶಾನ್ಯ ಭಾರತದ ರಾಜ್ಯಗಳು, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಿಗೆ ವಿಸ್ತರಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ ಸೇರಿದಂತೆ ಮುಂದಿನ 24 ಗಂಟೆಗಳಲ್ಲಿ ಕೇರಳದ ಹಲವು ಭಾಗಗಳು, ಛತ್ತೀಸ್ ಗಢ, ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ವಿದರ್ಭ, ದಕ್ಷಿಣ ಕೊಂಕಣ್, ಗೋವಾ ಮತ್ತು ಉತ್ತರ ಆಂಧ್ರ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಪೂರ್ವ ಉತ್ತರ ಪ್ರದೇಶ, ವಿದರ್ಭ, ಮಧ್ಯ ಮಹಾರಾಷ್ಟ್ರ, ಛತ್ತಿಸ್ ಗಢ, ಜಾರ್ಖಂಡ್, ಬಿಹಾರ, ತೆಲಂಗಾಣ, ರಾಯಲಸೀಮಾ ಮತ್ತು ಉತ್ತರ ಒಳನಾಡು ಕರ್ನಾಟಕದಲ್ಲಿ ಬಿರುಗಾಳಿ, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಗೋವಾ, ಕರ್ನಾಟಕ, ಕೇರಳ ಕರಾವಳಿ ಇದೇ ಅವಧಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳಲಿದ್ದು ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಈಗಾಗಲೇ ಕೇರಳ, ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಪ್ರವೇಶಿಸಿರುವ ನೈರುತ್ಯ ಮುಂಗಾರು ಇದೀಗ ಮಹಾರಾಷ್ಟ್ರದಿಂದ ಉತ್ತರದತ್ತ ತೆರಳಲಿದೆ.












Click it and Unblock the Notifications