ರಾಹುಲ್ ಕಣ್ಣೇಟಿನ ವರ್ತನೆಗೆ ಸುಮಿತ್ರಾ ಮಹಾಜನ್ ತರಾಟೆ
ನವದೆಹಲಿ, ಜುಲೈ 20: ಲೋಕಸಭೆಯಲ್ಲಿ ತಮ್ಮ ಭಾಷಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ನಂತರ ಕಣ್ಣುಮಿಟುಕಿಸಿದ ರಾಹುಲ್ ಗಾಂಧಿ ಅವರ ವರ್ತನೆ ಅನುಚಿತವಾದುದು ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು.
'ಪ್ರಧಾನಿ ಸ್ಥಾನವು ಗೌರವಯುತವಾದುದ್ದಾಗಿದ್ದು, ಮೋದಿ ಅವರು ಆ ಸ್ಥಾನದಲ್ಲಿದ್ದಾರೆ. ಕಣ್ಣು ಮಿಟುಕಿಸುವುದು ಸಂಸತ್‌ನ ಗೌರವಕ್ಕೆ ತಕ್ಕುದಲ್ಲ.
ರಾಹುಲ್ ನನ್ನ ಶತ್ರುವಲ್ಲ. ಅವರು ನನ್ನ ಮಗನಂತೆ. ತಾಯಿಯ ಕೆಲಸ ತಪ್ಪನ್ನು ತಿದ್ದುವುದು. ಅಪ್ಪುಗೆಯನ್ನು ನಾನ್ಯಾಕೆ ವಿರೋಧಿಸಲಿ? ಆದರೆ ಅಪ್ಪಿಕೊಂಡ ಬಳಿಕ ಕಣ್ಣು ಮಿಟುಕಿಸಿದ್ದು ಸರಿಯಾದ ನಡವಳಿಕೆಯಲ್ಲ' ಎಂದು ಸುಮಿತ್ರಾ ಮಹಾಜನ್ ಹೇಳಿದರು.

ಸದಸ್ಯರು ಸದನದ ಶಿಷ್ಟಾಚಾರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
'ಸಂಸತ್‌ನ ಗೌರವವನ್ನು ಕಾಪಾಡಬೇಕಾದವರು ನಾವು ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಬೇರೆ ಯಾರೂ ಹೊರಗಿನಿಂದ ಬಂದು ಅದನ್ನು ಮಾಡುವುದಿಲ್ಲ.
ಸಂಸತ್‌ನ ಸದಸ್ಯರಾಗಿ ಅದರ ಶಿಷ್ಟಾಚಾರಗಳನ್ನು ನಾವು ಕಾಪಾಡಿಕೊಳ್ಳಬೇಕು. ನೀವೆಲ್ಲರೂ (ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ) ಪ್ರೀತಿ ಮತ್ತು ಸ್ನೇಹದಿಂದ ಬದುಕಬೇಕು ಎಂದು ನಾನು ಬಯಸುತ್ತೇನೆ' ಎಂದರು.
ಅವಿಶ್ವಾಸ ನಿರ್ಣಯ ಮಂಡನೆ ಚರ್ಚೆ ವೇಳೆ ತಮ್ಮ ಭಾಷಣ ಮುಗಿದ ಬಳಿಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಅಪ್ಪಿಕೊಂಡು, ಕೈಕುಲುಕಿದ್ದರು.
ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡ ನಂತರ ತಮ್ಮ ಪಕ್ಷದ ಮುಖಂಡರ ಜತೆ ಕುಳಿತು ನಗುತ್ತಾ ಕಣ್ಣು ಮಿಟುಕಿಸಿದ್ದರು.











Click it and Unblock the Notifications