Monsoon Updates: ಕೊನೆಯ ಹಂತದಲ್ಲಿ ಮಾನ್ಸೂನ್- ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲಿ ಇನ್ನೆರಡು ದಿನ ಸಾಧಾರಣ ಮಳೆ
ನವದೆಹಲಿ, ಅಕ್ಟೋಬರ್ 03: ಭಾರತದಲ್ಲಿ ಮಾನ್ಸೂನ್ ತನ್ನ ಕೊನೆಯ ಹಂತದಲ್ಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಗಂಗಾ ಜಲನಯನ ಪ್ರದೇಶದ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಒಡಿಶಾ ಮತ್ತು ಬಿಹಾರದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಮಧ್ಯಪ್ರದೇಶ, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ವಿದರ್ಭ, ಛತ್ತೀಸ್‌ಗಢ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕರ್ನಾಟಕ, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಮಿಂಚಿನ ಸಾಧ್ಯತೆಯೊಂದಿಗೆ ಚದುರಿದ ತುಂತುರು ಮಳೆಯಾಗುವ ನಿರೀಕ್ಷೆಯಿದೆ.

ಕೇರಳದಲ್ಲಿ ಯೆಲ್ಲೋ ಅಲರ್ಟ್
ಕೇರಳದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿರುವನಂತಪುರಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ಕೊಲ್ಲಂ, ಪತ್ತನಂತಿಟ್ಟ ಮತ್ತು ಆಲಪ್ಪುಳದಂತಹ ದಕ್ಷಿಣದ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಉಳಿದಂತೆ ಕೇರಳದ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಸೋಮವಾರ ಎರ್ನಾಕುಲಂ ಜಿಲ್ಲೆಯ ಇಡಮಲಯಾರ್ ಅಣೆಕಟ್ಟು ಮತ್ತು ಮಲಪ್ಪುರಂ ಜಿಲ್ಲೆಯ ವಕ್ಕಡ್‌ನಲ್ಲಿ 9 ಸೆಂ ಮೀ ಮಳೆಯಾಗಿದೆ. ಕಣ್ಣೂರು ಜಿಲ್ಲೆಯ ಚೆಂಬೇರಿ (8 ಸೆಂ.ಮೀ), ತಿರುವನಂತಪುರಂ ಮತ್ತು ಪತ್ತನಂತಿಟ್ಟ ಜಿಲ್ಲೆಯ ಲಾಹಾದಲ್ಲಿಯೂ ಸಹ (ತಲಾ 7 ಸೆಂ.ಮೀ) ಮಳೆ ದಾಖಲಾಗಿದೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಚೆರ್ತಾಲ, ಚೆಂಗನ್ನೂರು, ಕೊಟ್ಟಾಯಂ, ವೈಕಂ ಮತ್ತು ಚಂಗನಾಶ್ಶೇರಿ ತಾಲ್ಲೂಕುಗಳಲ್ಲಿ ಶಾಲೆಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿರುವುದರಿಂದ ರಜೆ ಘೋಷಿಸಲಾಗಿದೆ. ಈ ತಾಲ್ಲೂಕುಗಳಲ್ಲಿ ಸುಮಾರು 246 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಕೇರಳದ ವಿವಿಧ ನದಿಗಳ ಸುತ್ತಮುತ್ತಲೂ ವಾಸಿಸುವ ಜನರಿಗೆ ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ. ಅರುವಿಪ್ಪುರಂ ಜಲಾಶಯದಲ್ಲಿ ದಾಖಲಾದ ನೀರಿನ ಮಟ್ಟವು ಹೆಚ್ಚುತ್ತಿರುವ ಕಾರಣ ತಿರುವನಂತಪುರಂನ ನೆಯ್ಯರ್ ನದಿಯ ಸುತ್ತಲೂ ಆರೆಂಜ್ ಅಲರ್ಟ್ ನೀಡಲಾಗಿದೆ. ತಿರುವನಂತಪುರದ ಕರಮಾನ ನದಿ, ಅಚನ್‌ಕೋವಿಲ್ ನದಿ ಮತ್ತು ಪತ್ತನಂತಿಟ್ಟದ ಮಣಿಮಲಾ ನದಿಯ ಜಲಾನಯನ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications