Narendra Modi: ಬಲಿಷ್ಠ ಸರ್ಕಾರ ಇದ್ದರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯ: ನರೇಂದ್ರ ಮೋದಿ
ಶುಕ್ರವಾರ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮಹಿಳೆಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಭಾರತದ ಮಹಿಳೆಯರನ್ನು ಶ್ಲಾಘಿಸಿದರು ಮತ್ತು ಮಸೂದೆಯ ಮಹತ್ವವನ್ನು ಒತ್ತಿ ಹೇಳಿದರು, ಭವಿಷ್ಯದ ಪೀಳಿಗೆಗಳಿಗೆ ಈ ಮಸೂದೆಯಿಂದ ಭಾರಿ ಲಾಭವಾಗಲಿದೆ ಎಂದು ಹೇಳಿದರು.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಸದರು, ಸಚಿವರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ಭಾರತದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಅಭಿನಂದಿಸುತ್ತೇನೆ. ಸೆಪ್ಟೆಂಬರ್ 21 ಮತ್ತು 22 ರಂದು ಹೊಸ ಇತಿಹಾಸವನ್ನು ರಚಿಸುವುದನ್ನು ನಾವು ನೋಡಿದ್ದೇವೆ. ಈ ಇತಿಹಾಸವನ್ನು ರಚಿಸಲು ಜನರು ನಮಗೆ ಈ ಅವಕಾಶವನ್ನು ನೀಡಿರುವುದು ನಮ್ಮ ಸೌಭಾಗ್ಯವಾಗಿದೆ." ಎಂದು ಹೇಳಿದರು.

"ಕೆಲವು ನಿರ್ಧಾರಗಳು ದೇಶದ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅಂತಹ ಒಂದು ನಿರ್ಧಾರಕ್ಕೆ ನಾವು ಸಾಕ್ಷಿಯಾಗಿದ್ದೇವೆ" ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಬಹುಮತದ ಸರ್ಕಾರ ಇರುವುದು ಮುಖ್ಯ
"ಸಂಸತ್ತಿನ ಉಭಯ ಸದನಗಳಲ್ಲಿ ಈ ಮಸೂದೆಯನ್ನು ಅಂಗೀಕರಿಸುವುದು ಬಹುಮತದ ಸರ್ಕಾರವನ್ನು ಹೊಂದಿರುವ ದೇಶದಲ್ಲಿ ಹೇಗೆ ಕೆಲಸ ಆಗುತ್ತದೆ ಎನ್ನುವುದನ್ನು ತೋರಿಸುತ್ತದೆ. ಯಾರ ರಾಜಕೀಯ ಸ್ವಹಿತಾಸಕ್ತಿಗಳೂ ಮಹಿಳಾ ಮೀಸಲಾತಿಗೆ ಅಡ್ಡಿಯಾಗಲು ನಾವು ಎಂದಿಗೂ ಬಿಡುವುದಿಲ್ಲ," ಎಂದು ಅವರು ಹೇಳಿದರು.
ಐತಿಹಾಸಿಕ ಮಸೂದೆಯನ್ನು ಜಾರಿ ಮಾಡಲು ಮತ್ತು ರಾಷ್ಟ್ರಕ್ಕೆ ಮಹಿಳೆಯರ ಕೊಡುಗೆಗಳನ್ನು ಗೌರವಿಸಲು ಮೀಸಲಾಗಿರುವ ಮಹಿಳಾ ಶಕ್ತಿ ವಂದನೆ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಅಭಿಪ್ರಾಯಪಟ್ಟರು. ಸಂಸತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಒಂದು ದಿನದ ನಂತರ ಅವರಿಗೆ ಪಕ್ಷದ ಮಹಿಳಾ ಘಟಕದಿಂದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.
"ನೀವು ನಮಗೆ ನೀಡಿದ ಬಹುಮತವೇ ಈ ಸರ್ಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ, ನಾವು ಎಲ್ಲಾ ಹಂತಗಳಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ, ಯಾರ ರಾಜಕೀಯ ಹಿತಾಸಕ್ತಿಯು ಮಹಿಳಾ ಮೀಸಲಾತಿ (ಮಸೂದೆ)ಗೆ ಅಡ್ಡಿಯಾಗಲು ಬಿಡಲಿಲ್ಲ." ಎಂದು ಹೇಳಿದರು.
"ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಲು ಪೂರ್ಣ ಬಹುಮತದ ಸರ್ಕಾರ, ಬಲಿಷ್ಠ ಸರ್ಕಾರ, ನಿರ್ಣಾಯಕ ಸರ್ಕಾರ ಅತ್ಯಗತ್ಯ ಎಂಬುದನ್ನು ಈ ಕಾನೂನು ಸಾಬೀತುಪಡಿಸಿದೆ" ಎಂದು ಅವರು ಹೇಳಿದರು.
ಸರ್ಕಾರದ ಹಲವಾರು ಯೋಜನೆಗಳ ಫಲಾನುಭವಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಕ್ಷದ ಕಚೇರಿಯಲ್ಲಿ ಪ್ರಧಾನಿ ಮೋದಿಯನ್ನು ಅಭಿನಂದಿಸಿದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಸೇರಿದಂತೆ ಕೇಂದ್ರ ಮಹಿಳಾ ಸಚಿವರು ಮತ್ತು ಪಕ್ಷದ ಇತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications