Varun Gandhi: ವರುಣ್ ಗಾಂಧಿಗೆ ಇಲ್ಲ ಟಿಕೆಟ್, ಅಸಮಾಧಾನಗೊಂಡ ಮೇನಕಾ ಗಾಂಧಿ ಮುಂದಿನ ನಡೆಯೇನು?
ಲಕ್ನೋ, ಮಾರ್ಚ್ 25: ತೀವ್ರ ಚಿಂತನ-ಮಂಥನದ ನಂತರ, ಬಿಜೆಪಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ಹಾಲಿ ಸಂಸದರ ಟಿಕೆಟ್‌ಗೆ ಕತ್ತರಿ ಹಾಕಲಾಗಿದೆ. ಅವರ ಜಾಗಕ್ಕೆ ಹೊಸ ಮುಖಗಳನ್ನು ಘೋಷಿಸಿದೆ. ಕೆಲವರು ಇದನ್ನು ಒಪ್ಪಿ ನಡೆದರೇ, ಮತ್ತೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲಿ ಮೇನಕಾ ಗಾಂಧಿ ಕೂಡ ಒಬ್ಬರು.
ಈ ಬಾರಿ ಬಿಜೆಪಿ ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ವರುಣ್ ಗಾಂಧಿ ಅವರಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ಟಿಕೆಟ್ ತಮಗೆ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ವರುಣ್ ಗಾಂಧಿ ಈಗಾಗಲೇ ಈ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದರು. ಆದರೆ ಬಿಜೆಪಿಯ ಐದನೇ ಪಟ್ಟಿಯಲ್ಲಿ ಪಿಲಿಭಿತ್ ಲೋಕಸಭಾ ಸ್ಥಾನಕ್ಕೆ ಉತ್ತರ ಪ್ರದೇಶದ ಸಚಿವ ಜಿತಿನ್ ಪ್ರಸಾದ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.

ಮಗನಿಗೆ ಸಿಗದ ಟಿಕೆಟ್, ಅಸಮಾಧಾನದಲ್ಲಿ ಮೇನಕಾ ಗಾಂಧಿ!
ಇನ್ನು, ಬಿಜೆಪಿಯಲ್ಲಿಯೇ ಇದ್ದು ಪಕ್ಷದ ವಿರುದ್ಧ ಹಲವು ಬಾರಿ ಹೇಳಿಕೆ ನೀಡಿದ್ದ ವರುಣ್ ಗಾಂಧಿಗೆ ಟಿಕೆಟ್ ಸಿಕ್ಕಿಲ್ಲ. ವರುಣ್ ಗಾಂಧಿ ಅವರ ಟಿಕೆಟ್ ಸಿಗದ ಕಾರಣ ಅವರ ತಾಯಿ ಹಾಗೂ ಬಿಜೆಪಿ ಹಿರಿಯ ನಾಯಕಿ ಮೇನಕಾ ಗಾಂಧಿ ಕೋಪಗೊಂಡಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದೆ. ಇಲ್ಲಿ ಗಮನಿಸಬೇಕಾದ ವಿಸಯವೆಂದರೆ, ಮಗನಿಗೆ ಟಿಕೆಟ್ ನೀಡದೇ ಇದ್ದರೂ ಮೇನಕಾ ಗಾಂಧಿ ಅವರನ್ನು ಸುಲ್ತಾನ್‌ಪುರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಬಿಜೆಪಿ ಪಟ್ಟಿ ಬಿಡುಗಡೆಗೂ ಮುನ್ನವೇ ವರುಣ್ ಗಾಂಧಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಊಹಾಪೋಹಗಳು ಎದ್ದಿದ್ದವು. ಅದು ನಿಜವಾಗಿದೆ. ಸದ್ಯ ಬಿಜೆಪಿ ಪಿಲಿಭಿತ್‌ನಿಂದ ಕಾಂಗ್ರೆಸ್‌ನಿಂದ ಜಿತಿನ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದೆ. ಮಗನಿಗೆ ಟಿಕೆಟ್ ಸಿಗದ ಕಾರಣ ಮೇನಕಾ ಗಾಂಧಿ ಈ ಬಗ್ಗೆ ಬಿಜೆಪಿಯ ಹೈಕಮಾಂಡ್ ಬಳಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಗನ ಟಿಕೆಟ್ ಕುರಿತು ಮಾತನಾಡಲು, ಹೈಕಮಾಂಡ್ ಬಳಿ ಮೇನಕಾ ಗಾಂಧಿ ಸಮಯ ಕೋರಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಮತ್ತೊಂದೆಡೆ, ವರುಣ್ ಗಾಂಧಿ ಟಿಕೆಟ್ ಸಿಗದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಗಿಂತ ಮೇನಕಾ ಗಾಂಧಿಗೆ ಹೆಚ್ಚು ಬೇಸರವಾಗಿರುವುದು ಕಂಡು ಬರುತ್ತಿದೆ.
ಪಿಲಿಭಿತ್ ಲೋಕಸಭಾ ಕ್ಷೇತ್ರವನ್ನು ಅನ್ನು ವರುಣ್ ಗಾಂಧಿ ಮತ್ತು ಅವರ ತಾಯಿ ಮೇನಕಾ ಗಾಂಧಿ ಎರಡು ದಶಕಗಳಿಂದ ಪ್ರತಿನಿಧಿಸುತ್ತಿದ್ದಾರೆ. 2009 ರಲ್ಲಿ ಮೊದಲ ಬಾರಿ ಚುನಾವಣೆಗೆ ನಿಂತಿದ್ದ ವರುಣ್ ಗಾಂಧಿ ಅವರು ಚೊಚ್ಚಲ ಸ್ಪರ್ಧೆಯಲ್ಲಿ 4.19 ಲಕ್ಷ ಮತಗಳೊಂದಿಗೆ ಭರ್ಜರಿಯಾಗಿ ಪಿಲಿಭಿತ್ ಅನ್ನು ಗೆದ್ದಿದ್ದರು. 2014 ಮತ್ತು 2019 ರಲ್ಲಿ ಅವರು ಬಹುಮತದೊಂದಿಗೆ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. 44 ವರ್ಷದ ವರುಣದ ಗಾಂಧಿ, ಬರಹಗಾರ ಮತ್ತು ಕವಿ. ಕಳೆದ ಕೆಲವು ವರ್ಷಗಳಿಂದ ತಮ್ಮದೇ ಪಕ್ಷ ಮತ್ತು ಸರ್ಕಾರದ ನೀತಿಗಳ ಮೇಲೆ ಟೀಕೆ ಮಾಡುತ್ತಿದ್ದರು.
ಆದರೆ, ಈ ಬಾರಿ ಬಿಜೆಪಿ ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಉತ್ತರ ಪ್ರದೇಶದ ಸಚಿವ ಜಿತಿನ್ ಪ್ರಸಾದ ಅವರನ್ನು ಪಿಲಿಭಿತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಿಸಿದೆ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ಮತ್ತು ರಾಹುಲ್ ಗಾಂಧಿಯವರ ಪ್ರಮುಖ ಸಹಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಜಿತಿನ್ ಪ್ರಸಾದ ಅವರು ಮೂರು ಚುನಾವಣೆಗಳಲ್ಲಿ ಸತತವಾಗಿ ಸೋಲು ಕಂಡಿದ್ದಾರೆ. 2014 ಮತ್ತು 2019 ರ ರಾಷ್ಟ್ರೀಯ ಚುನಾವಣೆಗಳು ಮತ್ತು 2017 ರಲ್ಲಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.












Click it and Unblock the Notifications