Mamata Banerjee: ಮೈಕ್ ಮ್ಯೂಟ್ ಮಾಡಿ ಅವಮಾನ ಆರೋಪ; ನೀತಿ ಆಯೋಗ ಸಭೆಯಿಂದ ಹೊರನಡೆದ ಮಮತಾ ಬ್ಯಾನರ್ಜಿ
ನವದೆಹಲಿ, ಜುಲೈ. 27: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಸಭೆಯಿಂದ ಕೋಪಗೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ. ಐದು ನಿಮಿಷಗಳಿಗಿಂತ ಹೆಚ್ಚು ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಆಡಳಿತದ ರಾಜ್ಯದಿಂದ ಏಕೈಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಸಭೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಅನುದಾನದ ಹಣವನ್ನು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"ನನಗೆ ಕೇವಲ ಐದು ನಿಮಿಷ ಮಾತನಾಡಲು ಅವಕಾಶ ನೀಡಲಾಯಿತು. ಚಂದ್ರಬಾಬು ನಾಯ್ಡುಗೆ ಮಾತನಾಡಲು 20 ನಿಮಿಷ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸ್‌ಗಢದ ಮುಖ್ಯಮಂತ್ರಿಗಳು 10 ರಿಂದ 12 ನಿಮಿಷಗಳ ಕಾಲ ಮಾತನಾಡಿದರು. ನಾನು ನನ್ನ ಪ್ರತಿಭಟನೆಯನ್ನು ದಾಖಲಿಸಿ ಹೊರಬಂದೆ" ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
"ನಾನು ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಹಣ ನೀಡದಿರುವ ಬಗ್ಗೆ ಮಾತನಾಡುತ್ತಿದ್ದೆ, ಅವರು ನನ್ನ ಮೈಕ್ ಅನ್ನು ಮ್ಯೂಟ್ ಮಾಡಿದರು" ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದಾದ ನಂತರ ಸಭೆಯಿಂದ ಹೊರ ಬಂದಿದ್ದಾರೆ. ಸರ್ಕಾರದ ಈ ಕ್ರಮವನ್ನು ಬಂಗಾಳ ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಅವಮಾನ ಎಂದು ಕರೆದ ಮಮತಾ ಬ್ಯಾನರ್ಜಿ, ಎನ್‌ಡಿಎ ಮಿತ್ರಪಕ್ಷಗಳ ಜೊತೆಗೆ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ನನ್ನ ಮಾತನ್ನು ಏಕೆ ತಡೆದಿದ್ದೀರಿ, ಏಕೆ ತಾರತಮ್ಯ ಮಾಡುತ್ತಿದ್ದೀರಿ? ವಿರೋಧ ಪಕ್ಷದಿಂದ ನಾನು ಮಾತ್ರ ಇಲ್ಲಿ ಪ್ರತಿನಿಧಿಸುತ್ತಿದ್ದೇನೆ. ಸಹಕಾರಿ ಒಕ್ಕೂಟವನ್ನು ಬಲಪಡಿಸಬೇಕು ಎಂಬ ಹೆಚ್ಚಿನ ಆಸಕ್ತಿಯಿಂದ ಈ ಸಭೆಗೆ ಹಾಜರಾಗುತ್ತಿದ್ದೇನೆ" ಎಂದು ಪ್ರತಿಭಟನೆ ನಡೆಸಿದ್ದಾರೆ.
ನೀತಿ ಆಯೋಗವನ್ನು ರದ್ದುಪಡಿಸಲು ಮತ್ತು ಯೋಜನಾ ಆಯೋಗವನ್ನು ಪುನಃಸ್ಥಾಪಿಸಲು ಮಮತಾ ಬ್ಯಾನರ್ಜಿ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ನೀತಿ ಆಯೋಗ್‌ಗೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ, ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರಳಿ ತನ್ನಿ" ಎಂದು ಆಗ್ರಹಿಸಿದ್ದಾರೆ.
ಪ್ರತಿಪಕ್ಷಗಳ ಆಡಳಿತವಿರುವ ಹಲವು ರಾಜ್ಯಗಳು ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ಕರ್ನಾಟಕದ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು ಮತ್ತು ತೆಲಂಗಾಣದ ರೇವಂತ್ ರೆಡ್ಡಿ ಅವರು ಕೇಂದ್ರ ಬಜೆಟ್ 2024 ರಲ್ಲಿ ತಮ್ಮ ರಾಜ್ಯಗಳ ವಿರುದ್ಧ ಪಕ್ಷಪಾತ ತೋರಿದ ಆರೋಪದ ಮೇಲೆ ಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ.
ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಸಿದ್ದರಾಮಯ್ಯ, ಎಂಕೆ ಸ್ಟಾಲಿನ್
ಇನ್ನು, ಸಿಎಂ ಸಿದ್ದರಾಮಯ್ಯ, ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಕೂಡ ಇಂದಿನ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದಾರೆ.
ನೀತಿ ಆಯೋಗದ ಸಭೆಯು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ಗಮನಹರಿಸುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿ ಆಡಳಿತ ಮತ್ತು ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸರ್ಕಾರದ ಮಧ್ಯಸ್ಥಿಕೆಗಳ ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.












Click it and Unblock the Notifications