Mettur Dam: 1.5 ಲಕ್ಷ ಕ್ಯೂಸೆಕ್ ಒಳಹರಿವು; ಮೆಟ್ಟೂರು ಜಲಾಶಯ ತುಂಬಲು 8 ಅಡಿ ಮಾತ್ರ ಬಾಕಿ
ಕಾವೇರಿ ನದಿಯ ಅಬ್ಬರಕ್ಕೆ ಕರ್ನಾಟಕ, ತಮಿಳುನಾಡು ನಡುವಿನ ಜಲವಿವಾದ ಈ ತಣ್ಣಗಾಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿದ್ದರೆ, ಈಗ ಜುಲೈ ಅಂತ್ಯದಲ್ಲೇ ಎರಡೂ ರಾಜ್ಯಗಳ ಕಾವೇರಿ ನದಿಪಾತ್ರದ ಜಲಾಶಯಗಳು ಭರ್ತಿಯಾಗಿವೆ.
ಕರ್ನಾಟಕ, ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ರಾಜ್ಯದ ಕಾವೇರಿ ಕೊಳ್ಳದ ಜಲಾಶಯಗಳಿಂದ ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಸುತ್ತಿರುವ ಕಾರಣ, ಮೆಟ್ಟೂರು ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಭರ್ತಿಯಾಗುವ ಹಂತ ತಲುಪಿದೆ.

ಕೇವಲ 12 ದಿನಗಳ ಹಿಂದೆ ನೀರಿಲ್ಲದೆ ಬಣಗುಡುತ್ತಿದ್ದ ಮೆಟ್ಟೂರು ಜಲಾಶಯ, ಈಗ ಭರ್ತಿಯಾಗಲು 10 ಅಡಿ ಮಾತ್ರ ಬಾಕಿ ಇದೆ. ಜುಲೈ 16 ರಂದು 45 ಅಡಿ ಇದ್ದ ಜಲಾಶಯದ ನೀರಿನ ಮಟ್ಟ ಈಗ 110 ಅಡಿಗೆ ಏರಿಕೆಯಾಗಿದ್ದು, ಜಲಾಶಯದ ತುಂಬಲು ಇನ್ನು 10 ಅಡಿ ಮಾತ್ರ ಬಾಕಿದೆ.
1.50 ಲಕ್ಷ ಕ್ಯೂಸೆಕ್ಸ್ ಒಳಹರಿವು
ರಾಜ್ಯದಿಂದ ಅಪಾರ ಪ್ರಮಾಣದ ನೀರು ಹೊರಬಿಡುತ್ತಿರುವ ಕಾರಣ ಮೆಟ್ಟೂರು ಜಲಾಶಯದ ಇಂದಿನ ಒಳಹರಿವು 1,52,903 ಕ್ಯೂಸೆಕ್ಸ್‌ಗೆ ತಲುಪಿದ್ದು, ಭಾರಿ ಪ್ರಮಾಣದ ನೀರು ಜಲಾಶಯವನ್ನು ಸೇರುತ್ತಿದೆ. ಇದೇ ಪ್ರಮಾಣದಲ್ಲಿ ಇನ್ನೊಂದು ದಿನ ಒಳಹರಿವು ಇದ್ದರೂ ಜಲಾಶಯ ಭರ್ತಿಯಾಗುವುದು ಖಚಿತವಾಗಿದೆ. ಒಳಹರಿವು ಕಡಿಮೆಯಾದರೂ ಇನ್ನೆರಡು ದಿನಗಳಲ್ಲಿ ಮೆಟ್ಟೂರು ಜಲಾಶಯ ತುಂಬುತ್ತದೆ.
ಜಲಾಶಯ ಭರ್ತಿಯಾಗುವ ಹಂತ ತಲುಪುತ್ತಿದ್ದಂತೆ ನದಿಗೆ ನೀರು ಹರಿಸಲು ಮೆಟ್ಟೂರು ಜಲಾಶಯದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇಂದು ಮಧ್ಯಾಹ್ನದಿಂದ ಜಲಾಶದಿಂದ ನದಿಗೆ 12,000 ಕ್ಯೂಸೆಕ್ಸ್ ನೀರನ್ನು ಹರಿಸುವುದಾಗಿ ಮಾಹಿತಿ ನೀಡಲಾಗಿದೆ.
ಕಾವೇರಿ ನದಿಯ ಅಬ್ಬರ ಜೋರಾಗಿದ್ದು, ಗಗನಚುಕ್ಕಿ, ಭರಚುಕ್ಕಿ ಮತ್ತು ಹೊಗೆನಕಲ್ ಜಲಪಾತಗಳು ಅಬ್ಬರಿಸುತ್ತಿವೆ. ರುದ್ರ ರಮಣೀಯ ದೃಶ್ಯಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಕಾವೇರಿಯ ಆರ್ಭಟಕ್ಕೆ ಹೊಗೆನಕಲ್ ಜಲಾಶಯವೇ ಕಾಣೆಯಾಗಿದ್ದು, ತುಂಬಿಹರಿಯುತ್ತದೆ.
ಮಳೆ ಪ್ರಮಾಣದ ಕಡಿಮೆಯಾದ ಕಾರಣ ಕೆಆರ್ ಎಸ್ ಜಲಾಶಯದಿಂದ ಬಿಡುತ್ತಿದ್ದ 90,000 ಕ್ಯೂಸೆಕ್ಸ್ ನೀರನ್ನು 50,000 ಕ್ಯೂಸೆಕ್ಸ್‌ಗೆ ಕಡಿಮೆ ಮಾಡಲಾಗಿದೆ. ನುಗು ಜಲಾಶಯದಿಂದ 2289 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, ಕಬಿನಿ ಜಲಾಶಯದಿಂದ 35,000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತದೆ.












Click it and Unblock the Notifications