Meghalaya Election Results 2023; ಯಾರಿಗೆ ಸಿಗಲಿದೆ ಅಧಿಕಾರ?
ಮೇಘಾಲಯ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ಆರಂಭವಾಗಿದೆ. ಯಾವ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಕಾದು ನೋಡಬೇಕಿದೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ಗುರುವಾರ ಬೆಳಗ್ಗೆ ಆರಂಭವಾಗಿದೆ. 60 ಸದಸ್ಯ ಬಲದ ವಿಧಾನಸಭೆಯ ಪೈಕಿ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಮತದಾನ ನಡೆದಿತ್ತು. ಎನ್‌ಪಿಪಿ, ಟಿಎಂಸಿ, ಬಿಜೆಪಿ, ಕಾಂಗ್ರೆಸ್, ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷ ಚುನಾವಣಾ ಕಣದಲ್ಲಿವೆ.
ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಎನ್‌ಪಿಪಿ 28, ಬಿಜೆಪಿ 10, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿವೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಚುನಾವಣೆಯ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ. ಕೆಲವು ಚುನಾವಣೋತ್ತರ ಸಮೀಕ್ಷೆಗಳು ಎನ್‌ಪಿಪಿ ಮತ್ತೆ ಅಧಿಕಾರ ಪಡೆಯಲಿದೆ ಎಂದು ಹೇಳಿವೆ.

ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಲಿದ್ದಾರೆ. ಪೂರ್ವದ ಸ್ಕಾಟ್‌ಲ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ರಾಜ್ಯದಲ್ಲಿ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ವರದಿ ನೋಡಿದಾಗ ಅತಂತ್ರ ಫಲಿತಾಂಶ ಬರಲಿದೆ ಎಂದು ಅಂದಾಜಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದ ಟಿಎಂಸಿ ಎನ್‌ಪಿಪಿ ನಡುವೆ ನೇರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.
ಮೇಘಾಲಯ ರಾಜ್ಯದಲ್ಲಿ 60 ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್. ಡಿ. ಆರ್. ಲಿಂಗ್ಡೊ ಫೆಬ್ರವರಿ 20ರಂದು ಮೃತಪಟ್ಟ ಕಾರಣ ಆ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಆದ್ದರಿಂದ 59 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿದೆ.
ಬುಡಕಟ್ಟು ಮತ್ತು ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ರಾಜ್ಯ ಮೇಘಾಲಯ. ಕಳೆದ ಬಾರಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ಬೆಂಬಲಿಸಿದ್ದ ಎಲ್ಲಾ ಪಕ್ಷಗಳು ಈ ಬಾರಿ ಸ್ವತಂತ್ರವಾಗಿ ಎದುರಾಳಿಗಳು. ಬಿಜೆಪಿ ಎಲ್ಲಾ 60 ಕ್ಷೇತ್ರಗಳಿಗೆ ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2018ರ ತನಕ ರಾಜ್ಯದಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆಡಳಿತ ಅಂತ್ಯಗೊಂಡಿತ್ತು.
ಕಳೆದ ಚುನಾವಣೆ ಫಲಿತಾಂಶದ ಬಳಿಕ ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಕೆ. ಸಂಗ್ಮಾ ಅವರು ಸಣ್ಣಪುಟ್ಟ ಪಕ್ಷಗಳನ್ನು ಒಗ್ಗೂಡಿಸಿ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದರು. ಯುಡಿಎಫ್, ಪಿಡಿಎಫ್, ಎಚ್‌ಎಸ್‌ಪಿಡಿಪಿ ಶಾಸಕರು ಪಕ್ಷೇತರರು ಎಂಡಿಎ ಮೈತ್ರಿಕೂಟ ಬೆಂಬಲಿಸಿದರು. ಬಿಜೆಪಿ ಈ ಮೈತ್ರಿಕೂಟದ ಅತಿ ಚಿಕ್ಕಪಕ್ಷವಾಗಿತ್ತು.
ಐದು ವರ್ಷಗಳ ಕಾಲ ಒಟ್ಟಾಗಿ ಆಡಳಿತ ನಡೆಸಿದರೂ ಸಹ ವಿವಿಧ ಪಕ್ಷಗಳ ನಡುವೆ ಅಸಮಾಧಾನವೇ ಹೆಚ್ಚಿದೆ. ಈಗ 2018ರ ಚುನಾವಣೆಗೂ ಮೊದಲು ಇದ್ದ ಪರಿಸ್ಥಿತಿಗೆ ಪಕ್ಷಗಳು ಬಂದಿವೆ. ಆದ್ದರಿಂದ 2023ರ ವಿಧಾನಸಭೆ ಚುನಾವಣೆಯಲ್ಲಿಯೂ ಎಲ್ಲರೂ ಸ್ವತಂತ್ರವಾಗಿ ಕಣಕ್ಕೆ ಇಳಿಸಿದ್ದು, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿವೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮತ್ತಷ್ಟು ಕುಸಿಯುವ ಭೀತಿ ಇದೆ. ಇದಕ್ಕೆ ಕಾರಣ ಪಕ್ಷದ ಪ್ರಮುಖ ನಾಯಕ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಶಾಸಕರು ಟಿಎಂಸಿಗೆ ವಲಸೆ ಹೋದರು. ಈಗ ರಾಜ್ಯದಲ್ಲಿ ಟಿಎಂಸಿಯನ್ನು ಪ್ರಮುಖ ಪ್ರತಿಪಕ್ಷವಾಗಿ ಗುರುತಿಸಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗಳಿಸಿದ್ದು, ಕೇವಲ 2 ಸ್ಥಾನಗಳು ಮಾತ್ರ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಎರಡಂಕಿಗೆ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸಿದೆ. ಇದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಸದ್ಯದ ಚುನಾವಣಾ ಚಿತ್ರಣದ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಎನ್‌ಪಿಪಿ 18 ಸ್ಥಾನ, ಟಿಎಂಸಿ 14 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.












Click it and Unblock the Notifications