Priyanka Gandhi: ಪ್ರಿಯಾಂಕಾ ವಾದ್ರಾ ಪರವಾಗಿ ಮಕ್ಕಳ ಭರ್ಜರಿ ಪ್ರಚಾರ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಹಲವು ಪ್ರಮುಖ ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿ ಪರವಾಗಿ ಪ್ರಚಾರ ನಡೆಸಿದ್ದಾರೆ. ನವೆಂಬರ್ 13ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಇಂದು (ನವೆಂಬರ್ 11) ಬಹಿರಂಗ ಪ್ರಚಾರ ಅಂತ್ಯವಾಗಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಪರವಾಗಿ ಮಗಳು ಮಿರಾಯಾ ವಾದ್ರಾ ಮತ್ತು ಮಗ ರೈಹಾನ್ ವಾದ್ರಾ ಪ್ರಚಾರ ನಡೆಸಿದ್ದು ಗಮನ ಸೆಳೆದಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿದೆ. ಅಮ್ಮನ ರಾಜಕೀಯ ಜೀವನಕ್ಕೆ ಮಕ್ಕಳು ಕೂಡ ಬೆಂಬಲ ಕೊಟ್ಟಿದ್ದಾರೆ. ವಯನಾಡ್‌ನಲ್ಲಿ ಪ್ರಚಾರದ ವೇಳೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮಿರಾಯಾ ವಾದ್ರಾ ಯಾರು?
ಪ್ರಿಯಾಂಕಾ ಗಾಂಧಿ ವಾದ್ರಾ ಮಗಳು 22 ವರ್ಷದ ಮಿರಾಯಾ ಡೆಹ್ರಾಡೂನ್‌ನ ವೆಲ್‌ಹ್ಯಾಮ್ ಗರ್ಲ್ಸ್ ಕಾಲೇಜಿನಲ್ಲಿ ಓದುತ್ತಿದ್ದಾರೆ. ಈ ಮೊದಲು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಕೂಡ ಮಿರಾಯಾ ವಾದ್ರಾ ಕಾಣಿಸಿಕೊಂಡಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ದೆಹಿಯಲ್ಲಿ ಮಿರಾಯಾ ವಾದ್ರಾ ಮೊದಲ ಬಾರಿಗೆ ಮತ ಚಲಾಯಿಸಿದ್ದರು. ಮತದಾನ ಮಾಡಿದ ಬಳಿಕ ಮಾತನಾಡಿದ್ದ ಅವರು, ಪ್ರಜಾಪ್ರಭುತ್ವದಲ್ಲಿ ದೊಡ್ದ ಹಬ್ಬದಲ್ಲಿ ಭಾಗವಹಿಸಲು, ಮತ್ತು ಬದಲಾವಣೆ ತರಲು ಸಿಗುವ ಅವಕಾಶ ಇದಾಗಿದ್ದು. ಎಲ್ಲರೂ ಹೊರಬಂದು ಮತ ಚಲಾಯಿಸಬೇಕು ಎಂದು ಹೇಳಿದ್ದರು. 2016ರಲ್ಲಿ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಹರಿಯಾಣ ಬಾಲಕಿಯರ ತಂಡದಲ್ಲಿ ಭಾಗವಹಿಸಿದಾಗ ಗಮನ ಸೆಳೆದಿದ್ದರು.
ರೈಹಾನ್ ವಾದ್ರಾ ಯಾರು?
24 ವರ್ಷದ ರೈಹಾನ್ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ಅವರ ಹಿರಿಯ ಮಗ. ರೈಹಾನ್ ವೃತ್ತಿಯಲ್ಲಿ 'ದೃಶ್ಯ ಕಲಾವಿದ' ಎಂದು ಅವರ ಮಾಧ್ಯಮ ಹ್ಯಾಂಡಲ್‌ನಲ್ಲಿ ತಿಳಿಸಿದ್ದಾರೆ. ಛಾಯಾಗ್ರಹಣದಲ್ಲಿ ಅವರು ಆಸಕ್ತಿ ಹೊಂದಿದ್ದು, ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ರಸ್ತೆ ಮತ್ತು ವನ್ಯಜೀವಿ ಛಾಯಾಗ್ರಹಣ ಮಾಡಿರುವ ಕೆಲವು ಫೋಟಗಳನ್ನು ಹಂಚಿಕೊಂಡಿದ್ದಾರೆ.
ಕೋಲ್ಕತ್ತಾದಲ್ಲಿ "ದಿ ಇಂಡಿಯಾ ಸ್ಟೋರಿ" ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳಲ್ಲಿ ರೈಹಾನ್ ಭಾಗವಹಿಸಿದ್ದಾರೆ. ಈವರೆಗೆ ಎರಡು ಏಕವ್ಯಕ್ತಿ ಕಲಾ ಪ್ರದರ್ಶನಗಳನ್ನು ಕೂಡ ನಡೆಸಿದ್ದಾರೆ.
ವಯನಾಡಿನಲ್ಲಿ ಭರ್ಜರಿ ಪ್ರಚಾರ
ವಯನಾಡ್ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಭದ್ರಕೋಟೆಯಾಗಿದೆ ಮತ್ತು ಚೇಲಕ್ಕರ ವಿಭಾಗವು ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌ನ ಭದ್ರಕೋಟೆಯಾಗಿದೆ. ವಯನಾಡ್ ಮತ್ತು ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕಡೆ ಗೆಲುವು ಸಾಧಿಸಿದ್ದರು, ಬಳಿಕ ವಯನಾಡ್ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಅಲ್ಲಿ ಉಪಚುನಾವಣೆ ನಡೆಯುತ್ತಿದೆ.












Click it and Unblock the Notifications