ಬೈಕ್ ಹಾಗೂ ಟ್ರ್ಯಾಕ್ಟರ್ ಓಡಿಸುವ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆದ 82ರ ಅಜ್ಜಿ ಸುಖ್ಮಾ!
ಸಾಮಾನ್ಯವಾಗಿ ಎಪ್ಪತ್ತು ಅಥವಾ ಎಂಬತ್ತು ವರ್ಷ ವಯಸ್ಸಾಯಿತು ಎಂದರೆ ಸಾಕು, ಮನುಷ್ಯನ ದೇಹ ಮತ್ತು ಮನಸ್ಸು ಎರಡೂ ದಣಿದಿರುತ್ತದೆ. ಕೈಯಲ್ಲಿ ಒಂದು ಊರುಗೋಲು ಹಿಡಿದು, ಮನೆಯ ಒಂದು ಮೂಲೆಯಲ್ಲಿ ಕುಳಿತು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದೇ ವೃದ್ಧಾಪ್ಯದ ದಿನಚರಿ ಎಂಬುದು ಸಮಾಜದದಲ್ಲಿ ಸಾಮಾನ್ಯವಾಗಿ ಎಲ್ಲರೂ ನಂಬಿರುವ ನಂಬಿಕೆ ಅಲ್ಲವೇ?.
ಆದರೆ, ಈ ಎಲ್ಲಾ ಸಾಂಪ್ರದಾಯಿಕ ನಂಬಿಕೆಗಳನ್ನ ಮತ್ತು ವಯಸ್ಸಿನ ಮಿತಿಗಳನ್ನ ಹುಸಿಗೊಳಿಸಿರುವ 82ರ ಅಜ್ಜಿ ಸುಖ್ಮಾ ಅವರು ಇಂದಿನ ಯುವಪೀಳಿಗೆಗೆ, ಅದರಲ್ಲೂ ವಿಶೇಷವಾಗಿ 'ಜೆನ್ ಝೀ'ಪೀಳಿಗೆಯ ಮಕ್ಕಳಿಗೆ ದೊಡ್ಡ ಸ್ಫೂರ್ತಿಯಾಗಿ ಹೊರಹೊಮ್ಮಿದ್ದಾರೆ.

ಬೈಕ್ ರೈಡಿಂಗ್ ಹಾಗೂ ಟ್ರ್ಯಾಕ್ಟರ್ ಚಾಲನೆಯಂತಹ ಸಾಹಸಮಯ ಹವ್ಯಾಸಗಳನ್ನ ಮೈಗೂಡಿಸಿಕೊಂಡಿರುವ ಈ ಅಜ್ಜಿಯ ಕಥೆ ನಿಜಕ್ಕೂ ರೋಚಕವಾಗಿದೆ ನೋಡಿ.
ಮೊಮ್ಮಗನ ಮಾಡಿದ ತಮಾಷೆಯಿಂದ ಶುರುವಾಯ್ತು ಹೊಸ ಹವ್ಯಾಸ
ಸುಖ್ಮಾ ಅವರಿಗೆ 74 ವರ್ಷ ವಯಸ್ಸಾಗಿದ್ದಾಗ ನಡೆದ ಒಂದು ಸಣ್ಣ ಘಟನೆ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಆಕೆಯ ಮೊಮ್ಮಗ ಒಮ್ಮೆ ತಮಾಷೆಗೆ, "ಅಜ್ಜಿ, ನೀನು ಬೈಕ್ ಓಡಿಸಲು ಕಲಿಯಬಾರದೇಕೆ?" ಎಂದು ಕೇಳಿದ್ದನು.
ಮೊಮ್ಮಗ ಕೇವಲ ತಮಾಷೆಗಾಗಿ ಕೇಳಿದ ಈ ಮಾತನ್ನ ಸುಖ್ಮಾ ಅಜ್ಜಿ ಬಹಳ ಗಂಭೀರವಾಗಿ ತೆಗೆದುಕೊಂಡರು. ಕಲಿಯುವ ಉತ್ಸಾಹಕ್ಕೆ ವಯಸ್ಸಿನ ಹಂಗೇಕೆ ಎಂದು ನಿರ್ಧರಿಸಿದ ಅವರು, ಮೊದಲು ದ್ವಿಚಕ್ರ ವಾಹನ ಕಲಿಯಲು ಮುಂದಾದರು. ಮೊಮ್ಮಗನಿಗೂ ಅಜ್ಜಿಯ ಈ ನಿರ್ಧಾರ ಅಚ್ಚರಿ ತರಿಸಿತ್ತು.
ಮನೆಯ ಇತರ ಸದಸ್ಯರಿಗೆ ಈ ವಿಷಯ ತಿಳಿದರೆ ಆಕ್ಷೇಪ ವ್ಯಕ್ತಪಡಿಸಬಹುದು ಎಂಬ ಕಾರಣಕ್ಕೆ, ಅಜ್ಜಿ ಮತ್ತು ಮೊಮ್ಮಗ ಇಬ್ಬರೂ ಸೇರಿ ಕುಟುಂಬದ ಇತರ ಸದಸ್ಯರಿಗೆ ತಿಳಿಯದಂತೆ ಗುಟ್ಟಾಗಿ ಬೈಕ್ ಕಲಿಯಲು ಆರಂಭಿಸಿದರು.
ಬೈಕ್ ರೈಡಿಂಗ್: ಬ್ಯಾಲೆನ್ಸ್ ನಿಂದ ಹಿಡಿದು ವೇಗದವರೆಗೆ
ಯಾವುದೇ ಹೊಸ ವಾಹನ ಕಲಿಯುವಾಗ ಆರಂಭದಲ್ಲಿ ಭಯ, ಆತಂಕ ಇರುವುದು ಸಹಜ. ಅದರಲ್ಲೂ 74ನೇ ವಯಸ್ಸಿನಲ್ಲಿ ದ್ವಿಚಕ್ರ ವಾಹನ ಕಲಿಯುವುದು ಸುಲಭದ ಮಾತಲ್ಲ. ಆದರೆ ಸುಖ್ಮಾ ಅಜ್ಜಿ ಛಲ ಬಿಡಲಿಲ್ಲ. ಮೊಮ್ಮಗನ ಮಾರ್ಗದರ್ಶನದಲ್ಲಿ ನಿಧಾನವಾಗಿ ಬೈಕ್ ಬ್ಯಾಲೆನ್ಸ್ ಮಾಡುವುದನ್ನ ಕಲಿತರು.
ಆನಂತರ ಆಕ್ಸಿಲರೇಟರ್ ನಿಯಂತ್ರಣ, ಬ್ರೇಕ್ ಹಾಕುವುದು ಹಾಗೂ ರಸ್ತೆಯಲ್ಲಿ ಏಕಾಂಗಿಯಾಗಿ ವಾಹನ ಚಲಾಯಿಸುವ ಕೌಶಲಗಳನ್ನ ಕರಗತ ಮಾಡಿಕೊಂಡರು. ಒಮ್ಮೆ ಬೈಕ್ ಬ್ಯಾಲೆನ್ಸ್ ಸಿಕ್ಕ ಮೇಲೆ ಅಜ್ಜಿಯ ಆತ್ಮವಿಶ್ವಾಸ ದುಪ್ಪಟ್ಟಾಯಿತು. ಯುವಕರೇ ನಾಚುವಂತೆ ಅತ್ಯಂತ ಸರಾಗವಾಗಿ ಬುಲೆಟ್, ಸ್ಕೂಟರ್ ಸೇರಿ ಎಲ್ಲಾ ದ್ವಿಚಕ್ರ ವಾಹನ ಓಡಿಸಲು ಆರಂಭಿಸಿದರು.
ಟ್ರ್ಯಾಕ್ಟರ್ ಚಾಲನೆ: ಅಚ್ಚರಿ ಮೂಡಿಸಿದ ಸಾಹಸಮಯ ಹೆಜ್ಜೆ
ಕೇವಲ ಬೈಕ್ ಓಡಿಸಲು ಕಲಿತದ್ದಕ್ಕೆ ಸುಖ್ಮಾ ಅವರ ಉತ್ಸಾಹ ಅಲ್ಲಿಗೆ ಮುಗಿಲಿಲ್ಲ. ದ್ವಿಚಕ್ರ ವಾಹನವನ್ನ ಯಶಸ್ವಿಯಾಗಿ ಕಲಿತುಕೊಂಡ ನಂತರ ಅವರ ಕಣ್ಣು ನಾಲ್ಕು ಚಕ್ರದ ವಾಹನದ ಮೇಲೆ ಬಿತ್ತು. ಹೌದು, ಕೃಷಿ ಚಟುವಟಿಕೆಗಳಿಗೆ ಬಳಸುವ 'ಟ್ರ್ಯಾಕ್ಟರ್ʼ ಓಡಿಸುವ ನಿರ್ಧಾರ ಮಾಡಿದರು.
ಗೇರ್, ಕ್ಲಚ್, ಬ್ರೇಕ್ ಹಾಗೂ ಸ್ಟೇರಿಂಗ್ ನಿಯಂತ್ರಣವನ್ನ ಅಚ್ಚುಕಟ್ಟಾಗಿ ಅರಿತುಕೊಂಡು, ಗದ್ದೆ ಹಾಗೂ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದರು. ವಯಸ್ಸಾದ ಕಾಲದಲ್ಲಿ ಮಹಿಳೆಯೊಬ್ಬರು ಟ್ರ್ಯಾಕ್ಟರ್ ಚಲಾಯಿಸುವುದನ್ನ ನೋಡಿ ನೆರೆಹೊರೆಯವರು ಬೆರಗಾದರು.
ಸೋಶಿಯಲ್ ಮೀಡಿಯಾ ಸ್ಟಾರ್ ಆದ 82ರ ಅಜ್ಜಿ
ಇಂದು 82 ವರ್ಷದ ಸುಖ್ಮಾ ಅವರು ಯಾವುದೇ ಅಂಜಿಕೆ ಇಲ್ಲದೆ, ಅತ್ಯಂತ ಆತ್ಮವಿಶ್ವಾಸದಿಂದ ವಾಹನಗಳನ್ನ ಚಲಾಯಿಸುತ್ತಾರೆ. ಕೇವಲ ವಾಹನ ಚಲಾಯಿಸುವುದು ಮಾತ್ರವಲ್ಲದೆ, ಇಂದಿನ ಟ್ರೆಂಡ್‌ಗೆ ತಕ್ಕಂತೆ ತಮ್ಮ ಸಾಹಸದ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅವರದೇ ಆದ ಪ್ರತ್ಯೇಕ ಸೋಶಿಯಲ್ ಮೀಡಿಯಾ ಪೇಜ್ ಇದ್ದು, ಅಲ್ಲಿ ಅವರು ಪೋಸ್ಟ್ ಮಾಡುವ ಬೈಕ್ ಹಾಗೂ ಟ್ರ್ಯಾಕ್ಟರ್ ರೈಡಿಂಗ್ ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆಯುತ್ತಿವೆ. ನೆಟ್ಟಿಗರು ಈ ಅಜ್ಜಿಯ ಉತ್ಸಾಹವನ್ನ ಕಂಡು ನಿಬ್ಬೆರಗಾಗಿದ್ದು, ಪ್ರತಿದಿನ ಸಾವಿರಾರು ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸುಖ್ಮಾ ಅಜ್ಜಿ ಈ ವಾಹನಗಳನ್ನ ಕಲಿಯಲೇಬೇಕು ಎಂಬ ಯಾವುದೇ ಅನಿವಾರ್ಯತೆ ಇರಲಿಲ್ಲ. ಆದರೆ, ಕಲಿಯಬೇಕೆಂಬ ಅವರ ತುಡಿತ ಮತ್ತು ಇಚ್ಛಾಶಕ್ತಿ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. 'ಕಲಿಯುವ ಆಸಕ್ತಿ ಮತ್ತು ಕುತೂಹಲಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ' ಎಂಬ ದೊಡ್ಡ ಜೀವನ ಪಾಠವನ್ನು ಈ ಅಜ್ಜಿ ಇಡೀ ಜಗತ್ತಿಗೆ ಸಾರಿ ಹೇಳಿದ್ದಾರೆ.


Click it and Unblock the Notifications
