Mann Ki Baat: ಕನ್ನಡ ಹಾಡು ಹಾಡಿದ್ದ ಜರ್ಮನಿ ಗಾಯಕಿ ಬಣ್ಣಿಸಿದ ಪ್ರಧಾನಿ ಮೋದಿ
ನವದೆಹಲಿ, ಸೆಪ್ಟಂಬರ್ 24: ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಖ್ಯಾತಿ ಪಡೆದಿರುವ 'ಮನ್ ಕಿ ಬಾತ್'ನ 105ನೇ ಸಂಚಿಕೆಯನ್ನು ಭಾನುವಾರ ನಡೆಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರು 'ಕನ್ನಡ' ಹಾಡು ಹಾಡಿದ್ದ ವಿದೇಶಿ ಗಾಯಕಿಯೊಬ್ಬರ ಹೆಸರು ಪ್ರಸ್ತಾಪಿಸಿ ಅವರ ವಿಶಿಷ್ಟ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ಭಾರತೀಯ ಸಂಸ್ಕೃತಿ ಮತ್ತು ಸಂಗೀತ ಸೇರಿದಂತೆ ಕರ್ನಾಟಕದ ಸಂಗೀತವು ಇಂದು ಜಾಗತಿಕವಾಗಿದೆ. ಮನ್ ಕಿ ಬಾತ್ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗಿದೆ. ಅದರಲ್ಲಿ ಪ್ರಸ್ತಾಪಿಸಿದ ವಿಚಾರಗಳು ಹೆಚ್ಚು ಚರ್ಚೆ ಆಗುತ್ತಿವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಜರ್ಮನ್ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ಳ ಕುರಿತು ಮಾತನಾಡಿದ್ದಾರೆ.

ಜರ್ಮನಿಯ ಕ್ಯಾಸಂಡ್ರ ಮೇ ಸ್ಪಿಟ್‌ಮನ್ ಅವರು ತನ್ನ ಮಧುರ ಕಂಠದ ಮೂಲಕ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಹಾಡಿನಿಂದಲೇ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಸಂಸ್ಕೃತ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡುವ ಈ ಗಾಯಕಿ ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಹಾಡು ಹಾಡಿದ್ದರು.
ಗಾಯಕಿಯ ವಿಶೇಷ ಪ್ರತಿಭೆ ಮೋದಿ ಶ್ಲಾಘನೆ
ಈವರೆಗೆ ಭಾರತವನ್ನು ನೋಡಿರದ ಅಂಧ ಗಾಯಕಿಯಾಗಿರುವ ಈ 21 ವರ್ಷ ವಯಸ್ಸಿನ ಕ್ಯಾಸಂಡ್ರ ಮೇ ಸ್ಪಿಟ್‌ಮನ್ ಅವರಿಗೆ ಇಲ್ಲಿನ ಸಂಸ್ಕೃತಿ, ಸಂಗೀತದ ಬಗ್ಗೆ ಅರಿವಿಲ್ಲ. ಅಂಧೆಯಾದರೂ ಸಹಿತ ಅವರು ಒಳಗಣ್ಣಿನಿಂದ ಸಂಗೀತ ಆಹ್ವಾದಿಸಿದವರು.
ಗಾಯಕಿ ಕ್ಯಾಸಂಡ್ರ ಅವರು ಹಾಡಿದ ಕನ್ನಡದ 'ನಮ್ಮ ವಚನ ಬಹುವಚನ' ಗೀತೆ ಹಾಗೂ ವಿಷ್ಣು ದೇವರನ್ನು ಸ್ಮರಿಸುವ 'ಜಗನ್ ಜಾನ ಪಾಲಂ' ಸಂಸ್ಕೃತ ಶ್ಲೋಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಭಾಷಣದ ವೇಳೆ ಹಂಚಿಕೊಂಡಿದ್ದಾರೆ. ಭಾರತದ ಸಂಗೀತ ಬಗ್ಗೆ ಗಾಯಕಿಗೆ ಇರುವ ಆಸಕ್ತಿ, ಅವರ ವಿಶೇಷ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಈ ಗಾಯಕಿಯ ಹೆಸರನ್ನು 'ಕ್ಯಾಸಮಿ' ಎಂದು ಪ್ರಧಾನಿಗಳು ಹೆಸರಿಸಿದ್ದಾರೆ. ಅತ್ಯಂತ ಸುಮಧುರ ಕಂಠದಿಂದ ಹಾಡಿದ ಅವರ ಹಾಡಿನ ಸಾಲುಗಳಲ್ಲಿ ಭಾವನೆಗಳು ಪ್ರತಿಫಲಿಸುತ್ತವೆ ಅವರಿಗೆ ಧನ್ಯವಾದಗಳು ಎಂದು ಅವರು ವಿವರಿಸಿದ್ದಾರೆ.

ಗಾಯಕಿಯ ಬಗೆಗಿನ ಮಾಹಿತಿ
ಗಾಯಕಿ ಕ್ಯಾಸಂಡ್ರ ಅವರು ಕೇವಲ ಮೂರನೇ ವಯಸ್ಸಿನಲ್ಲಿಯೇ ಆಫ್ರಿಕನ್ ಡ್ರಮ್ ಕಲಿಕೆ ಆರಂಭಿಸಿದ್ದರು. ನಂತರ ಸಂಗೀತದ ಕಡೆ ಅಪಾರ ಆಸಕ್ತಿ ಬೆಳೆಸಿಕೊಂಡ ಅವರು ಇಂದು ಸೃಜನಶೀಲ ಹಾಡುಗಳನ್ನು ಹಾಡುವ ಮೂಲಕ ಜನಪ್ರೀಯತೆ ಗಳಿಸಿದ್ದಾರೆ.
ಕಳೆದ 5- 6 ವರ್ಷಗಳ ಹಿಂದೆ ಭಾರತೀಯ ಸಂಗೀತದ ಬಗ್ಗೆ ಅರಿತಿದ್ದರು. ಈವರೆಗೆ ಅವರು 'ಕ್ಯಾಸಮಿ ಅಫಿಷಿಯಲ್' ಎಂಬ ಇನ್‌ಸ್ಟಾಗ್ರಾಂ ಖಾತೆ, ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡ, ಸಂಸ್ಕೃತ, ಹಿಂದಿ, ತಮಿಳು ಮುಂತಾದ ಗೀತೆಗಳನ್ನು ಹಾಡಿದ್ದಾಳೆ.












Click it and Unblock the Notifications