Manmohan Singh: ಪಂಚಭೂತಗಳಲ್ಲಿ ಲೀನರಾದ ಮನಮೋಹನ್ ಸಿಂಗ್: ಗಣ್ಯರಿಂದ ಅಂತಿಮ ನಮನ, ವಿದಾಯ
ನವದೆಹಲಿ, ಡಿಸೆಂಬರ್ 28: ಭಾರತದ ಮಾಜಿ ಪ್ರಧಾನಮಂತ್ರಿ, ಕಾಂಗ್ರೆಸ್ ಹಿರಿಯ ಮುತ್ಸದ್ಧಿ ಮನಮೋಹನ್ ಸಿಂಗ್ ಅವರು ಅಂತ್ಯಕ್ರಿಯೆ ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳಿಂದ ನೆರವೇರಿತು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸಿದರು. ಮನಮೋಹನ್ ಸಿಂಗ್ ಅವರಿಗೆ ಅಂತಿಮ ವಿದಾಯ ಹೇಳಲಾಯಿತು.

ಗುರುವಾರ ರಾತ್ರಿ ನಿಧನರಾದ ಮನಮೋಹನ್ ಸಿಂಗ್ (92) ಅವರ ಅಂತ್ಯ ಸಂಸ್ಕಾರವನ್ನು ಸಿಖ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮೂರು ಸೇನಾಪಡೆಗಳಿಂದ ಅಂತಿಮ ಗೌರವ ನೀಡಿ, ಸರ್ಕಾರಿ ಗೌರವದೊಂದಿಗೆ ಅವರನ್ನು ಕಳುಹಿಸಿಕೊಡಲಾಯಿತು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಕೇಂದ್ರ ಸಚಿವರುಗಳು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು, ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ರಾಹುಲ್ ಗಾಂಧಿ
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತಿತರರು ಪುಷ್ಪ ಗುಚ್ಛನೀಡಿ ಅಂತಿಮ ನಮನ ಸಲ್ಲಿಸಿದರು. ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನೀರವ ಮೌನ ಆವರಿಸಿತ್ತು. ಅಂತಿಮ ಕಾರ್ಯಕ್ಕೆ ಪಾರ್ಥಿವ ಶರೀರಕ್ಕೆ ರಾಹುಲ್ ಗಾಂಧಿ ಅವರು ಹೆಗಲು ಕೊಟ್ಟರು.
ದೇಶ, ವಿದೇಶಕ್ಕೆ ಆರ್ಥಿಕ ಶಕ್ತಿಗೆ ಕಾರಣರಾದ, ದೇಶದ ಆರ್ಥಿ ಸುಧಾರಕರಾಗಿ ಕಾರ್ಯ ನಿರ್ವಹಿಸಿದ ಮನಮೋಹನ್ ಸಿಂಗ್ ಅವರು ಇನ್ನು ನೆನಪಾಗಿ ಉಳಿಯಲಿದ್ದಾರೆ. ಭೌತಿಕವಾಗಿ ಅವರು ನಮ್ಮೊಂದಿಗೆ ಇರದಿದ್ದರು, ಅವರು ಕಾರ್ಯ, ಸರಳ ವ್ಯಕ್ತಿತ್ವ, ಕಾರ್ಯಗಳು, ರಾಜಕೀಯ ನಡೆಗಳು ಸದಾ ಜೀವಂತವಾಗಿವೆ.
ಅಧಿಕಾರಕ್ಕೆ ಅಂಟಿಕೊಳ್ಳದ ವ್ಯಕ್ತಿ: ಉತ್ತಮ ಆಡಳಿತ
ಯಾವತ್ತು ರಾಜಕೀಯ ಅಧಿಕಾರಕ್ಕೆ ಅಂಟಿಕೊಳ್ಳದ ವ್ಯಕ್ತಿಯಾಗಿದ್ದ ಮನಮೋಹನ್ ಸಿಂಗ್ ಅವರು, ಅಧಿಕಾರ ಸಿಕ್ಕಾಗ ವಿಮುಖರಾಗದೇ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಪ್ರಚಾರ ರಾಜಕಾರಣ ಮಾಡಿದವರಲ್ಲ. ಹೆಚ್ಚು ಮಾತನಾಡದೇ, ಮೌನವಾಗಿದ್ದುಕೊಂಡೇ ದೇಶದ ಏಳಿಗೆಗಾಗಿ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ನಾಡಿನಲ್ಲಿ ಚಿರಸ್ಥಾಯಿ ಆದರು.
2004ರಿಂದ 2014ರವರೆಗೆ ಎರಡು ಭಾರಿ ಪೂರ್ಣಾವಧಿಗೆ ಪ್ರಧಾನಿ ಆಗಿ ಸಮರ್ಪಕ ಆಡಳಿತ ನೀಡಿದ್ದರು. ಹಲವು ಹುದ್ದೆಗಳನ್ನು ನಿಭಾಯಿಸಿದ್ದವರು. ಕಡು ಬಡತನದಲ್ಲಿ ಹುಟ್ಟಿ ಬೆಳೆದ ಅವರು ಪ್ರಧಾನಿ ಹುದ್ದೆಗೇರಿದ್ದ ರೋಚಕ ಯಶೋಗಾಥೆ ಎಂದರೆ ತಪ್ಪಾಗಲಾರದು.
ದಿವಂಗತ ಮನಮೋಹನ್ ಸಿಂಗ್ ಅವರಿಗೆ ಮೂರು ಮಕ್ಕಳನ್ನು, ಆಪ್ತರನ್ನು, ನಾಡನ್ನು ಅಗಲಿದ್ದಾರೆ. ಅವರ ನಿಧನ ಹಿನ್ನೆಲೆ ಕೇಂದ್ರ ಸರ್ಕಾರ ಏಳು ದಿನ ಶೋಕಾಚರಣೆಗೆ ಘೋಷಿಸಿದೆ. ಅವರ ನಿಧನ ಹಿನ್ನೆಲೆಯಲ್ಲಿ ಶುಕ್ರವಾರ (ಡಿ.27) ರಂದು ದೇಶದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.












Click it and Unblock the Notifications