Manish Sisodia : ಸಿಬಿಐ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಿಸೋಡಿಯಾ
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಬಂಧಿಸಿದ ಕ್ರಮವನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ನವದೆಹಲಿ, ಫೆಬ್ರವರಿ 28; ಸಿಬಿಐ ದೆಹಲಿಯ ಹೊಸ ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಬಂಧಿಸಿದೆ. ಕೋರ್ಟ್ ಸೋಮವಾರ ಅವರನ್ನು ಮಾರ್ಚ್ 4ರ ತನಕ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಮನೀಶ್ ಸಿಸೋಡಿಯಾ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಮನೀಶ್ ಸಿಸೋಡಿಯಾ ಪರ ವಕೀಲರು ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಬಂಧಿಸಿದ ಕ್ರಮವನ್ನು ಪ್ರಶ್ನೆ ಮಾಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಪೀಠದ ಮುಂದೆ ಈ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಲಾಗಿದೆ.

ದೆಹಲಿಯ ಹೊಸ ಅಬಕಾರಿ ನೀತಿಯನ್ನು ಲೆಫ್ಟಿನೆಂಟ್ ಗೌರ್ನರ್ ವಿ. ಕೆ. ಸಕ್ಸೇನಾ ತಿರಸ್ಕಾರ ಮಾಡಿದ್ದಾರೆ. ಈ ನೀತಿ ರೂಪಿಸುವಲ್ಲಿ ಮನೀಶ್ ಸಿಸೋಡಿಯಾ ಅವರ ಪಾತ್ರವಿದೆ. ಈ ಹಗರಣದಲ್ಲಿ ಅವರ ಪಾತ್ರವಿದ್ದು, ಈ ಕುರಿತು ತನಿಖೆ ನಡೆಸಲು ಮನೀಶ್ ಸಿಸೋಡಿಯಾ ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ಅವರನ್ನು ಸಿಬಿಐ ವಶಕ್ಕೆ ನೀಡಬೇಕು ಎಂದು ವಿಶೇಷ ನ್ಯಾಯಾಲಯದಲ್ಲಿ ಮನವಿ ಮಾಡಲಾಗಿತ್ತು.
ಸಿಬಿಐ ವಾದ ಪುರಸ್ಕರಿಸಿದ ನ್ಯಾಯಾಲಯ ಮಾರ್ಚ್ 4ರ ತನಕ ಮನೀಶ್ ಸಿಸೋಡಿಯಾರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿತು. ಮನೀಶ್ ಸಿಸೋಡಿಯಾ ಬಂಧನ ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಎಎಪಿ ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಸೋಮವಾರ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಮನೀಶ್ ಸಿಸೋಡಿಯಾ ತಮ್ಮನ್ನು ಬಂಧಿಸಿದ ಸಿಬಿಐ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಇಂದೇ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಗೆ ನೀಡಿದೆ. ಮಧ್ಯಾಹ್ನ 3.50ಕ್ಕೆ ಈ ಅರ್ಜಿ ವಿಚಾರಣೆ ನಡೆಯಲಿದೆ.
ಸರ್ವಾಧಿಕಾರ ಎಂದು ಆರೋಪ; ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ ಮಾಡಿರುವುದು ಸರ್ವಾಧಿಕಾರದ ಪರಮಾವಾಧಿ ಎಂದು ಆಮ್ ಆದ್ಮಿ ಪಕ್ಷ ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಎಎಪಿ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನಪ್ರಿಯತೆಯಿಂದ ಬಿಜೆಪಿ ದಿಗಿಲುಗೊಂಡಿದೆ. ಕೇಂದ್ರದ ಬಿಜೆಪಿ ಸರ್ಕಾರವು ಆಯ್ದ ಜನರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಪಕ್ಷ ಆರೋಪ ಮಾಡಿದೆ.
ಅರವಿಂದ ಕೇಜ್ರಿವಾಲ್ ಅವರ ದೆಹಲಿಯ ಮಾದರಿ ಆಡಳಿತ ನೋಡಿರುವ ಬಿಜೆಪಿ ದೆಹಲಿಯ ಶಿಕ್ಷಣ ನೀತಿಯನ್ನು ದುರ್ಬಲಗೊಳಿಸಲು ಮುಂದಾಗಿದೆ. ಅದಕ್ಕಾಗಿ ಅತ್ಯುತ್ತಮ ವ್ಯಕ್ತಿ, ಉತ್ತಮ ಶಿಕ್ಷಣ ಸಚಿವರೂ ಆಗಿರುವ ಮನೀಶ್ ಸಿಸೋಡಿಯಾರನ್ನು ಬಂಧಿಸುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ದೂರಿದೆ.
ಸಿಬಿಐ ಮನೀಶ್ ಸಿಸೋಡಿಯಾ ಬಂಧಿಸಿದ ಬಳಿಕ ಟ್ವೀಟ್ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, "ಸಿಸೋಡಿಯಾ ಅವರು ಪ್ರಮಾಣಿಕರಾಗಿದ್ದು, ಅವರನ್ನು ಬಂಧಿಸಿರುವುದು ಕೊಳಕು ರಾಜಕೀಯವನ್ನು ತೋರಿಸುತ್ತದೆ. ಅವರ ಬಂಧನದಿಂದ ಜನರಲ್ಲಿ ಆಕ್ರೋಶ ಮನೆ ಮಾಡಿದೆ. ಜನರು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ" ಎಂದು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಮನೀಶ್ ಸಿಸೋಡಿಯಾ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಮನೀಶ್ ಅವರೇ ಸತ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೀರಿ. ಇಡೀ ದೇಶ ನಿಮ್ಮ ಜೊತೆಗಿದೆ. ಶಿಕ್ಷಣದಲ್ಲಿ ಕ್ರಾಂತಿ ತಂದ ವ್ಯಕ್ತಿಯ ಜೊತೆ ನಾವಿದ್ದೇವೆ" ಎಂದು ಹೇಳಿದ್ದಾರೆ. ಸೋಮವಾರ ಮನೀಶ್ ಸಿಸೋಡಿಯಾ ಬೆಂಬಲಿಸಲು ರಾಜ್‌ಘಾಟ್‌ಗೆ ಹೊರಟಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.












Click it and Unblock the Notifications