ಮಣಿಪುರ ಹಿಂಸಾಚಾರ: ನಿನ್ನೇಯಷ್ಟೇ ಶಾಲೆ ಆರಂಭ, ಇಂದು ಶಾಲೆಯ ಹೊರಗೆ ಮಹಿಳೆಯ ಹತ್ಯೆ
ಇಂಫಾಲ, ಜುಲೈ. 06: ಹಿಂಸಾಚಾರ ಪೀಡಿತ ಮಣಿಪುರದಾದ್ಯಂತ ಶಾಲೆಗಳು ಪುನರಾರಂಭಗೊಂಡ ಕೇವಲ ಒಂದು ದಿನದ ನಂತರ, ಗುರುವಾರ ಇಂಫಾಲ್ ವೆಸ್ಟ್‌ನಲ್ಲಿ ಶಾಲೆಯ ಹೊರಗೆ ಅಪರಿಚಿತ ವ್ಯಕ್ತಿಗಳು ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತೆಯ ಗುರುತು ಮತ್ತು ಸಮುದಾಯವನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಇಂಫಾಲ್ ವೆಸ್ಟ್‌ನ ಶಿಶು ನಿಷ್ಠ ನಿಕೇತನ ಶಾಲೆಯ ಹೊರಗೆ ಈ ಘಟನೆ ನಡೆದಿದೆ. ಒಂದು ದಿನದ ಹಿಂದೆ ಶಾಲೆಗಳು ಪುನರಾರಂಭಗೊಂಡ ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ. ಎರಡು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ಮಧ್ಯೆ ಶೂಟಿಂಗ್ ನಡೆದಿದೆ.

ಹಿಂದಿನ ದಿನ, ಮಾಪಾವೊ ಮತ್ತು ಅವಾಂಗ್ ಸೆಕ್ಮೈ ಪ್ರದೇಶದ ಎರಡು ಸಶಸ್ತ್ರ ಗುಂಪುಗಳ ನಡುವೆ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷನೆಗಳು ನಡೆದಿವೆ ಎಂದು ಪಿಟಿಐ ವರದಿ ಮಾಡಿದೆ. ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ, ಪೊಲೀಸ್ ಶಸ್ತ್ರಾಗಾರದಿಂದ ಬಂದೂಕುಗಳನ್ನು ಲೂಟಿ ಮಾಡಲು ಗಲಭೆಕೋರರ ಪ್ರಯತ್ನ ವಿಫಲಗೊಳಿಸಲಾಗಿದೆ.
ಇದಾದ ನಂತರ ಭಾರತೀಯ ರಿಸರ್ವ್ ಬೆಟಾಲಿಯನ್ (IRB) ಸಿಬ್ಬಂದಿಯ ಮನೆಗೆ ಜನಸಮೂಹವು ತೌಬಲ್ ಜಿಲ್ಲೆಯಲ್ಲಿ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಮಾರಣಾಂತಿಕ ಘರ್ಷಣೆಯಲ್ಲಿ 27 ವರ್ಷದ ರೊನಾಲ್ಡೊ ಎಂಬುವವರು ಮೃತಪಟ್ಟಿದ್ದಾರೆ. ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಇಂಫಾಲ್‌ನ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಘರ್ಷಣೆಯಲ್ಲಿ 10 ಮಂದಿಗೆ ಗಾಯಗಳಾಗಿದ್ದು, ಆರು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಟರ್ನೆಟ್ ನಿಷೇಧ ವಿಸ್ತರಣೆ
ಹಿಂಸಾಚಾರದ ಘಟನೆಗಳನ್ನು, ಸಂಶಯಾಸ್ಪದ ವಿಷಯಗಳ ಪ್ರಸರಣ ತಡೆಯಲು, ಮಣಿಪುರ ಸರ್ಕಾರವು "ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಭಂಗವನ್ನು ತಡೆಗಟ್ಟಲು" ಜುಲೈ 10 ರ ಮಧ್ಯಾಹ್ನ 3 ರವರೆಗೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಅಮಾನತುವನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸಿದೆ ಎಂದು ಬುಧವಾರ ಹೇಳಿದೆ.
ಮೇ 3 ರಂದು ಮೈತೀಯಿ ಮತ್ತು ಕುಕಿ ಜನಾಂಗೀಯ ಸಮುದಾಯಗಳ ನಡುವೆ ಘರ್ಷಣೆ ಪ್ರಾರಂಭವಾದಾಗ ಅಧಿಕಾರಿಗಳು ಮೊದಲ ಬಾರಿಗೆ ಈಶಾನ್ಯ ರಾಜ್ಯದಾದ್ಯಂತ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿದರು. ಕಾಲಕಾಲಕ್ಕೆ ಅದನ್ನು ವಿಸ್ತರಿಸಲಾಗುತ್ತಿದೆ. ಮೇ 3 ರಂದು ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೀಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ರಾಜ್ಯದಲ್ಲಿ ಮೊದಲು ಹಿಂಸಾಚಾರ ಪ್ರಾರಂಭವಾಯಿತು.
ಹಿಂಸಾಚಾರದಲ್ಲಿ ಇಲ್ಲಿಯವರೆಗೆ, 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೀಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದು, ಇವರು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.












Click it and Unblock the Notifications