Manipur Violence: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ, ಹಲವರಿಗೆ ಗಾಯ, ನಾಪತ್ತೆ, ಪೂರ್ಣ ವಿವರ
ಮಣಿಪುರ, ನವೆಂಬರ್ 08: ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಮಣಿಪುರದಲ್ಲಿನ ಸಾವು-ನೋವು, ಘರ್ಷಣೆ, ಮಕ್ಕಳ ನಾಪತ್ತೆ ಪ್ರಕರಣ ಹಿಂಸಾಚಾರ ಪೂರ್ತಿ ತಣ್ಣಗಾಗಿಲ್ಲ. ಇದರ ಬೆನ್ನಲ್ಲೆ ಮಂಗಳವಾರ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಜಿಲ್ಲೆಯ ಕಾಂಗ್‌ಚುಪ್ ತಪ್ಪಲಿನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ಘಟನೆ ನಡೆದಿದೆ.
ಗುಂಡಿನ ದಾಳಿಯನ್ನು ಪ್ರತ್ಯಕ್ಷವಾಗಿ ಕಂಡವರ ಪ್ರಕಾರ, ಘಟನೆಯಲ್ಲಿ ಇಬ್ಬರು ಮಣಿಪುರ ಪೊಲೀಸರು ಹಾಗೂ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ 09 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ರಾಜ್ಯದ ಮೈತೆಯಿ ಪ್ರದೇಶದಿಂದ ನಿರ್ದಿಷ್ಟ ಸಮುದಾಯದ ಐವರು ಅಪರಿಚಿತ ವ್ಯಕ್ತಿಗಳಿಂದ ಭಯಗೊಂಡ ಫಯೆಂಗ್ ಮಹಿಳೆಯರು ಸೇರಿ ಕೆಲವು ಜನ ಕಾಂಗ್‌ಚುಪ್ ಬೆಟ್ಟದ ಕಡೆಗೆ ತೆರಳಿದ್ದರು. ಈ ವೇಳೆ ಬೆಟ್ಟದಲ್ಲಿದ್ ಶಂಕಿತ ಉಗ್ರಗಾಮಿಗಳು ಇಷ್ಟು ಜನರ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಈ ವೇಳೆ ಗ್ರಾಮ ಸ್ವಯಂಸೇವಕರು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ಬಳಿಕವೂ ಗುಂಡಿನ ಚಕಮಕಿ ಮುಂದುವರೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿ ನಿಯಂತ್ರಣ: ಗಾಯಾಳುಗಳು ಆಸ್ಪತ್ರೆಗೆ
ಸದ್ಯ ಕಾಂಗ್‌ಚುಪ್ ಪ್ರದೇಶದಲ್ಲಿ ಗುಂಡಿನ ದಾಳಿ ಅಂತ್ಯಗೊಂಡಿದೆ. ಇಲ್ಲಿನ ಪರಿಸ್ಥಿತಿ ನಿಯಂತ್ರಿಸಲು ಯಾವುದೇ ಅವಘಡ ಮತ್ತೆ ಜರುಗಂತೆ ತಡೆಯಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಪೈಕಿ ಏಳು ಜನರನ್ನು ರಿಮ್ಸ್‌ಗೆ ದಾಖಲಿಸಲಾಗಿದೆ. ಇಬ್ಬರಿಗೆ ಇಂಫಾಲ್‌ನ ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.

ಘಟನೆ ಬಳಿಕ ನಾಲ್ವರು ಕಣ್ಮರೆಯಾಗಿದ್ದಾರೆ. ಒಬ್ಬರು ಮಾತ್ರ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಭದ್ರತಾ ಸಿಬ್ಬಂದಿಗೆ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಕೌಟ್ರುಕ್ ಮೇಲೂ ಗುಂಡಿನ ದಾಳಿ
ಮಂಗಳವಾರವೇ ರಾಜ್ಯದ ಮತ್ತೊಂದು ಕಡೆಗೆ ಗುಂಡಿನ ದಾಳಿ ನಡೆದಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಕೌಟ್ರುಕ್ ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಪೋಕ್ಪಿ ಜಿಲ್ಲೆಯ ಸಮೀಪದ ಸೆಕ್ಮೈ ಪ್ರದೇಶದಿಂದ ಕಳೆದ ಭಾನುವಾರ ಮಧ್ಯಾಹ್ನ (ನ. 5) ಇಬ್ಬರು ಹದಿಹರೆಯದವರು ನಾಪತ್ತೆ ಆಗಿದ್ದಾರೆ. ಈ ಸಂಬಂಧ ಇಂಫಾಲ್ ಕಣಿವೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ನಾಪತ್ತೆಯಾದವರ ಫೋನ್‌ಗಳು ಸೇನಾಪತಿ ಜಿಲ್ಲೆಯ ತೈಲ ಪಂಪ್‌ನಿಂದ ಕಪ್ಪು ಪಾಲಿಥಿನ್ ಪ್ಯಾಕೆಟ್‌ನಲ್ಲಿ ಪತ್ತೆಯಾಗಿವೆ. ಸದ್ಯ ಪೊಲೀಸರು ಅವುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ನಿಲ್ಲದ ಜನಾಂಗೀಯ ಘರ್ಷಣೆ
ಇದೇ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಆರಂಭವಾಗಿ ಅದು ತೀವ್ರ ಸ್ವರೂಪ ಹಿಂಸಾಚಾರಕ್ಕೆ, ಮಹಿಳೆಯ ಬೆತ್ತಲೆ ಮೆರವಣಿಗೆ ವರೆಗೆ ಬಂದು ತಲುಪಿತು. ದೇಶವ ಈ ನಡೆಯನ್ನು ಖಂಡಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸಿದವು. ಸದ್ಯ ಮಣಿಪುರವು ಹಿಂಸಾಚಾರದ ಪುನರಾವರ್ತಿತ ದಾಳಿಗಳ ಪೀಡಿತ ಪ್ರವೇಶವಾಗಿದೆ. ಈವರೆಗೆ ಮಣಿಪುರದಲ್ಲಿ ಘರ್ಷಣೆಯಿಂದಾಗಿ 180ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಮಣಿಪುರದ ಒಟ್ಟು ಜನಸಂಖ್ಯೆಯ ಶೇಕಡಾ 53ರಷ್ಟು ಮೈತೆಯಿ ಸಮುದಾಯದವರು ಇಂಫಾಲ್ ಕಣಿವೆಯಲ್ಲಿದ್ದಾರೆ. ಆದರೆ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇ.40 ರಷ್ಟು ಇದ್ದಾರೆ. ಇವರು ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ.












Click it and Unblock the Notifications