ಮಣಿಪುರ ಹಿಂಸಾಚಾರ: ತನಿಖೆಯಲ್ಲಿ 'ಆಲಸ್ಯ, ವಿಳಂಬ', ಡಿಜಿಪಿಗೆ ಸುಪ್ರೀಂ ಕೋರ್ಟ್ ಸಮನ್ಸ್
ನವದೆಹಲಿ, ಆಗಸ್ಟ್. 02: ಮಣಿಪುರದಲ್ಲಿ ಎರಡು ಸಮುದಾಯಗಳ ಹಿಂಸಾಚಾರದ ಸಂದರ್ಭದಲ್ಲಿ ಮಾನವ ಜೀವಗಳು, ಘನತೆ ಮತ್ತು ಆಸ್ತಿಪಾಸ್ತಿಗಳ ನಷ್ಟದ ಬಗ್ಗೆ ಆಲಸ್ಯ ಮತ್ತು ವಿಳಂಬ ತನಿಖೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ರಾಜ್ಯವು ಎರಡು ತಿಂಗಳಿನಿಂದ ಸಾಂವಿಧಾನಿಕ ಆಡಳಿತ ಸಂಪೂರ್ಣ ಸ್ಥಗಿತವಾಗಿರುವುದನ್ನು ನೋಡಿದೆ ಎಂದು ವಿಷಾದಿಸಿದೆ. ಈ ವಿಳಂಬ ಮತ್ತು ಆಲಸ್ಯದ ಬಗ್ಗೆ ವಿವರಣೆಯನ್ನು ನೀಡಬೇಕು ಎಂದು ಆಗಸ್ಟ್ 7 ಕ್ಕೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಿಗೆ ಸಮನ್ಸ್ ನೀಡಿದೆ.
"ಒಂದು ವಿಷಯ ಸ್ಪಷ್ಟವಾಗಿದೆ. ರಾಜ್ಯ ಪೊಲೀಸರು ತನಿಖೆ ನಡೆಸಲು ಅಸಮರ್ಥರಾಗಿದ್ದಾರೆ. ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಮಣಿಪುರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಉಳಿದಿಲ್ಲ. ತನಿಖೆ ತುಂಬಾ ಜಡವಾಗಿದೆ. ಎರಡು ತಿಂಗಳವರೆಗೆ, ಎಫ್‌ಐಆರ್‌ಗಳನ್ನು ದಾಖಲಿಸುವುದಿಲ್ಲ, ಯಾರನ್ನು ಬಂಧಿಸುವುದಿಲ್ಲ ಮತ್ತು ಘಟನೆ ನಂತರ ಹೇಳಿಕೆಗಳನ್ನು ದಾಖಲಿಸಲಾಗುತ್ತದೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠ ಅಸಮಾಧಾನ ಹೊರಹಾಕಿದೆ.

ಹಿಂಸಾಚಾರದ ಘಟನೆಗಳ ದಿನಾಂಕ, ಎಫ್‌ಐಆರ್‌ಗಳ ದಾಖಲಾತಿ ಸಮಯ, ಎಷ್ಟು ಜನರನ್ನು ಬಂಧಿಸಲಾಗಿದೆ ಮತ್ತು ಸಂತ್ರಸ್ತರ ಹೇಳಿಕೆಗಳ ರೆಕಾರ್ಡಿಂಗ್‌ಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒಂದೆಡೆ ಸೇರಿಸಲು ಸುಪ್ರೀಂ ಕೋರ್ಟ್ ಪೀಠವು ಡಿಜಿಪಿಗೆ ಆದೇಶಿಸಿದೆ.
"ಮೇ 3 ರಿಂದ ಎರಡು ತಿಂಗಳವರೆಗೆ ಎಫ್‌ಐಆರ್‌ಗಳನ್ನು ಸಹ ದಾಖಲಿಸಲು ಸಾಧ್ಯವಾಗದಿದ್ದರೆ, ಯಾವುದೇ ಕಾನೂನನ್ನು ಪಾಲಿಸುತ್ತಿಲ್ಲ ಎಂಬುದನ್ನು ಬಹಿರಂಗಪಡಿಸುತ್ತದೆ. ಬಹುಶಃ ಪೊಲೀಸರು ಸ್ಥಳೀಯರನ್ನು ತಲುಪಲು ಸಾಧ್ಯವಾಗದ ಕಾರಣ ಬಂಧಿಸಲು ಸಾಧ್ಯವಾಗಲಿಲ್ಲ ಎಂಬುದು ಸರಿ. ಆದರೆ, ಅದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಯಂತ್ರದ ಸಂಪೂರ್ಣ ಹದಗೆಟ್ಟಿರುವುದನ್ನು ಎತ್ತಿ ತೋರಿಸುವುದಿಲ್ಲವೇ..? ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ಅವರಿಗೆ ಪ್ರಶ್ನಿಸಿದೆ.
ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಸರ್ಕಾರವನ್ನು ಪ್ರತಿನಿಧಿಸಿದ ತುಷಾರ್ ಮೆಹ್ತಾ, ರಾಜ್ಯದಲ್ಲಿ ಸಾಂವಿಧಾನಿಕ ಆಡಳಿತ ಯಂತ್ರಗಳು ಸಂಪೂರ್ಣ ಸ್ಥಗಿತವಾಗಿಲ್ಲ. ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೋಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆಗೆ ಆದೇಶಿಸಿದ ನಂತರ ಯಾವುದೇ ಆಲಸ್ಯ ಕಂಡುಬಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಆದರೆ ರಾಜ್ಯದಲ್ಲಿ ವಾಸಿಸುತ್ತಿರುವ ಜನರು, ಕಾನೂನು ಮತ್ತು ಸುವ್ಯವಸ್ಥೆ ಯಂತ್ರಗಳು ಅವರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಜನರ ಗತಿಯೇನು ಎಂದು ಪೀಠವು ಪ್ರಶ್ನಿಸಿದೆ. ಮೇ 4 ರಂದು ವೈರಲ್ ಆಗಿರುವ ವಿಡಿಯೋ ಪ್ರಕರಣವನ್ನು ಉದ್ದೇಶಿಸಿ, ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಲಾಯಿತು ಮತ್ತು ಅವರಲ್ಲಿ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಆಕೆಯ ಸಹೋದರ ಮತ್ತು ತಂದೆಯನ್ನು ಹತ್ಯೆ ಮಾಡಲಾಗಿದೆ. ಇವರನ್ನು ಪೊಲೀಸರೇ ಉದ್ರಿಕ್ತ ಗುಂಪಿಗೆ ಹಸ್ತಾಂತರಿಸಿದ್ದಾರೆ ಎಂದು ಸಂತ್ರಸ್ತರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಪೀಠ ಹೇಳಿದೆ.
"ಸಂತ್ರಸ್ತರ ಹೇಳಿಕೆಯ ನಂತರ ಏನಾಯಿತು..? ಆ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಲಾಗಿದೆಯೇ ಅಥವಾ ಬಂಧಿಸಲಾಗಿದೆಯೇ? ಆ ಪೊಲೀಸರು ಯಾರು ಎಂದು ಪತ್ತೆ ಹಚ್ಚಲು ಡಿಜಿಪಿ ಪ್ರಯತ್ನಿಸಿದ್ದಾರಾ..? ಅವರನ್ನು ವಿಚಾರಣೆ ಮಾಡಲಾಗಿದೆಯೇ..? ಡಿಜಿಪಿ ಇಲ್ಲಿಯವರೆಗೆ ಏನು ಮಾಡಿದ್ದಾರೆ..? ಇದೆಲ್ಲಾ ಅವರ ಕರ್ತವ್ಯವಲ್ಲವೇ?" ಎಂದು ಸುಪ್ರೀಂ ಕೋರ್ಟ್ ತುಷಾರ್ ಮೆಹ್ತಾ ಅವರನ್ನು ಕಟುವಾಗಿ ಪ್ರಶ್ನಿಸಿದೆ. ಈ ವೇಳೆ ಸರ್ಕಾರಿ ವಕೀಲರು ಪ್ರಕರಣದ ಕುರಿತು ಸಿಬಿಐನ ಪ್ರಾಥಮಿಕ ತನಿಖೆಯ ಫಲಿತಾಂಶಕ್ಕಾಗಿ ಕಾಯುವಂತೆ ಪೀಠಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications