ಮತ್ತೆ ಭುಗಿಲೆದ್ದ ಮಣಿಪುರ ಹಿಂಸಾಚಾರ: ಗುಂಡಿನ ದಾಳಿಯಲ್ಲಿ 6 ಮಂದಿ ಬಲಿ, ಮುಂದುವರೆದ ಸಂಘರ್ಷ
ಇಂಪಾಲ, ಸೆಪ್ಟೆಂಬರ್ 01: ಮಣಿಪುರದ ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಗಡಿಯಲ್ಲಿ ಮೈತೇಯಿ ಮತ್ತು ಕುಕಿ ಗುಂಪುಗಳ ನಡುವೆ ಭೀಕರ ಗುಂಡಿನ ಕಾಳಗ ನಡೆದಿದೆ. ಈ ಸಂಘರ್ಷವು ಕಳೆದ 24 ಗಂಟೆಗಳಲ್ಲಿ ಕನಿಷ್ಠ ಆರು ಜನರನ್ನು ಬಲಿಪಡೆದುಕೊಂಡಿದೆ.
ಬುಧವಾರ ಮುಂಜಾನೆ ನರನ್ಸೇನಾ ಗ್ರಾಮದ ನಿವಾಸಿ ಸಲಾಂ ಜೋತಿನ್ ಸಿಂಗ್ ಎಂಬುವವರ ಮೇಲೆ ದಾಳಿ ನಡೆಸಲಾಯಿತು. ಸಿಂಗ್ ಅವರಿಗೆ ಬುಲೆಟ್ ಗಾಯವಾಗಿತ್ತು. ಆದರೆ, ಅವರು ಬದುಕುಳಿದರು. ಆ ನಂತರ ಎರಡೂ ಸಮುದಾಯಗಳ ನಡುವೆ ಗುಂಡಿನ ಕಾಳಗ ಪ್ರಾರಂಭವಾಯಿತು. ಈ ಘಟನೆಯಲ್ಲಿ ಆರು ಜನರು ಹತರಾಗಿದ್ದಾರೆ. ಕನಿಷ್ಠ 18 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್‌ನ ಇಬ್ಬರು ಯೋಧರು ಸೇರಿದ್ದಾರೆ.

ಖೋರೆಂಟಾಕ್ ಬೆಟ್ಟದ ಪ್ರದೇಶ ಮತ್ತು ಚುರಾಚಂದ್‌ಪುರ-ಬಿಷ್ಣುಪುರ ಜಿಲ್ಲೆಯ ಗಡಿ ಭಾಗಗಳಲ್ಲಿ ಹಿಂಸಾಚಾರ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ ಮತ್ತು ಗುರುವಾರ ಸಂಜೆ ನಡುವಿನ 24 ಗಂಟೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಚುರಚಂದಪುರ ಮತ್ತು ಬಿಷ್ಣುಪುರದ ಜಿಲ್ಲಾಡಳಿತ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.
'ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಅವರಲ್ಲಿ ಒಬ್ಬರು ಚಿಕಿತ್ಸೆಗಾಗಿ ಮಿಜೋರಾಂನ ಐಜ್ವಾಲ್‌ಗೆ ಕರೆದೊಯ್ಯುತ್ತಿದ್ದಾಗ ಬುಧವಾರ ರಾತ್ರಿ ಮೃತಪಟ್ಟರೆ, ಇನ್ನೊಬ್ಬರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ' ಎಂದು ಚುರಚಂದಪುರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ಮಲ್ಲಾಡಿ ತಿಳಿಸಿದ್ದಾರೆ.

ಸಾವನ್ನಪ್ಪಿದವರನ್ನು ಸ್ಥಳೀಯ ಗೀತರಚನೆಕಾರ ಎಲ್ಎಸ್ ಮಂಗ್ಬೋಯಿ ಲುಂಗ್ಡಿಮ್ ಮತ್ತು ಗ್ರಾಮ ರಕ್ಷಣಾ ಸ್ವಯಂಸೇವಕ ಹೆಮ್ಖೋಲುನ್ ಗೈಟ್ ಎಂದು ಗುರುತಿಸಲಾಗಿದೆ.
ಗುರುವಾರ ಚುರಾಚಂದ್‌ಪುರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಪೋಕಮ್ ಕಿಪ್‌ಗೆಮ್ ಮತ್ತು ಪೌ ಸೋನ್ಲೆಮ್ ಎಂದು ಗುರುತಿಸಲಾಗಿದೆ.
ಬಿಷ್ಣುಪುರ ಜಿಲ್ಲೆಯಲ್ಲಿ ಗುರುವಾರ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ.
'ನಮ್ಮ ಜಿಲ್ಲೆಯಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಾವನ್ನಪ್ಪಿರುವ ವರದಿಗಳಿವೆ. ಬಿಷ್ಣುಪುರದಲ್ಲಿ ಮಂಗಳವಾರ ಒಬ್ಬರು ಮೃತಪಟ್ಟಿದ್ದರು. ಸಾವನ್ನಪ್ಪಿದವರ ಒಟ್ಟು ಸಂಖ್ಯೆ ನಮ್ಮ ಜಿಲ್ಲೆಯಲ್ಲಿ ಮೂರಕ್ಕೆ ಏರಿದೆ' ಎಂದು ಬಿಷ್ಣುಪುರದ ಉಪ ಆಯುಕ್ತ ಲೌರೆನ್‌ಬಾಮ್ ಬಿಕ್ರಮ್ ಹೇಳಿದ್ದಾರೆ.
ಗುರುವಾರ ತಡರಾತ್ರಿವರೆಗೂ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಮಲ್ಲಾಡಿ ಖಚಿತಪಡಿಸಿದ್ದಾರೆ.
'ರಾಜ್ಯ ಪೊಲೀಸರು ಮತ್ತು ಕೇಂದ್ರ ಭದ್ರತಾ ಸಿಬ್ಬಂದಿಯ ನಿಯೋಜನೆಯ ಹೊರತಾಗಿಯೂ, ಗಡಿ ಪ್ರದೇಶಗಳಲ್ಲಿ ಮಧ್ಯಂತರ ಗುಂಡಿನ ಚಕಮಕಿಗಳು ನಡೆಯುತ್ತಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಗಳು ನಡೆಯುತ್ತಿವೆ' ಎಂದು ಹೇಳಿದ್ದಾರೆ.












Click it and Unblock the Notifications