ಮಣಿಪುರ ಹಿಂಸಾಚಾರ: ರಾಜ್ಯದಲ್ಲಿ ಗುಂಡಿನ ದಾಳಿ ಆದೇಶಕ್ಕೆ ರಾಜ್ಯಪಾಲರ ಸಮ್ಮತಿ
ಇಂಫಾಲ ಮೇ 4: ಮಣಿಪುರ ಹಿಂಸಾಚಾರ ಭುಗಿಲೆದ್ದಿದ್ದು ಗುಂಡಿನ ದಾಳಿ ಆದೇಶಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಮಣಿಪುರದಲ್ಲಿ ಬುಧವಾರ (ಮೇ 3) ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಬುಡಕಟ್ಟು ಗುಂಪುಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ಈ ವೇಳೆ ಹಿಂಸಾಚಾರ ಭುಗಿಲೆದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿರುವುದು ವರದಿಗಳಾಗಿವೆ.
ಕಳೆದ ರಾತ್ರಿ ಎಲ್ಲೆಡೆ ವಾಹನ, ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಅಪಾರ ಆಸ್ತಿ ನಾಶವಾಗಿದೆ. ಚುರಾಚಂದ್‌ಪುರದಲ್ಲಿ ಉದ್ವಿಗ್ನತೆ ಬೆಳಿಗ್ಗೆಗೆ ಶಾಂತಗೊಳಿಸಲಾಗಿತ್ತು. ಮಣಿಪುರದಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸೇನೆಯು ಇಂದು ಧ್ವಜ ಮೆರವಣಿಗೆ ನಡೆಸಿತು. ಇಂಫಾಲ್, ಚುರಾಚಂದ್‌ಪುರ ಮತ್ತು ಕಾಂಗ್‌ಪೋಕ್ಪಿಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಿನ್ನೆ ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಮಣಿಪುರ ಸರ್ಕಾರವು ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಿದೆ. ಆದರೂ ಇಂಫಾಲದ ಕೆಲವು ಭಾಗಗಳಲ್ಲಿ ಇಂದು ಹಿಂಸಾಚಾರದ ಘಟನೆಗಳು ವರದಿಯಾಗಿವೆ.

ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ಪ್ರತಿಭಟನೆ ನಡೆಸುತ್ತಿವೆ. ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೇಟಿ ಸಮುದಾಯದ ನಡುವೆ ರಾಜ್ಯಾದ್ಯಂತ ವ್ಯಾಪಕ ಗಲಭೆಗಳು ಭುಗಿಲೆದ್ದಿವೆ. ಹೀಗಾಗಿ ಮಣಿಪುರ ರಾಜ್ಯಪಾಲರು ಗುರುವಾರ ರಾಜ್ಯ ಗೃಹ ಇಲಾಖೆಯ ಶೂಟ್-ಎಟ್-ಸೈಟ್ ಆದೇಶವನ್ನು ಅನುಮೋದಿಸಿದ್ದಾರೆ.
ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳನ್ನು ಕರೆಸಲಾಗಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಸಶಸ್ತ್ರ ಪಡೆಗಳಿಂದ ಇಂದು ಧ್ವಜ ಮೆರವಣಿಗೆ ಕೂಡ ನಡೆಸಲಾಯಿತು. ಹಿಂಸಾಚಾರದ ನಂತರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸುಮಾರು 9,000 ಜನರನ್ನು ರಕ್ಷಿಸಲಾಗಿದೆ ಮತ್ತು ಸೇನಾ ಶಿಬಿರಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಶ್ರಯ ನೀಡಲಾಗಿದೆ.

"ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಎಲ್ಲಾ ಸಮುದಾಯಗಳ 7,500 ಕ್ಕೂ ಹೆಚ್ಚು ನಾಗರಿಕರನ್ನು ರಾತ್ರಿಯಿಡೀ ಪಟ್ಟುಬಿಡದೆ ಸ್ಥಳಾಂತರಿಸಲು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪ್ರಮುಖ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡವು. ಭಾರತೀಯ ಸೇನೆಯು ಮಣಿಪುರದ ಜನಸಂಖ್ಯೆಯ ಯೋಗಕ್ಷೇಮ ಮತ್ತು ಸುರಕ್ಷತೆ ಕಾಪಾಡುವಲ್ಲಿ ಸೇನೆ ಹಗಲು ರಾತ್ರಿ ಕಷ್ಟಪಡುತ್ತಿದೆ' ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಬುಡಕಟ್ಟು ಜನಾಂಗದವರಲ್ಲದ ಮೀಟೈಸ್ ಸಮುದಾಯದ ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಯನ್ನು ವಿರೋಧಿಸಿ ಬುಧವಾರದಂದು, ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ (ATSUM) ಚುರಾಚಂದ್‌ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ 'ಬುಡಕಟ್ಟು ಐಕ್ಯತಾ ಮೆರವಣಿಗೆ'ಗೆ ಕರೆ ನೀಡಿತ್ತು. ಪೊಲೀಸರ ಪ್ರಕಾರ, ಸಾವಿರಾರು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ನಡೆಯಿತು.
ಮೇಟಿ ಸಮುದಾಯ ಮಣಿಪುರದ ಜನಸಂಖ್ಯೆಯ 53% ರಷ್ಟಿದೆ ಮತ್ತು ಪ್ರಾಥಮಿಕವಾಗಿ ಮಣಿಪುರ ಕಣಿವೆಯಲ್ಲಿ ವಾಸಿಸುತ್ತಿದೆ. "ಮ್ಯಾನ್ಮಾರೀಸ್ ಮತ್ತು ಬಾಂಗ್ಲಾದೇಶೀಯರಿಂದ ದೊಡ್ಡ ಪ್ರಮಾಣದ ಅಕ್ರಮ ವಲಸೆ" ದೃಷ್ಟಿಯಿಂದ ಅವರು ಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಮೇಟಿಯ ಹೇಳಿಕೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಬೇಕಿದ್ದ ಸ್ಥಳವನ್ನು ಧ್ವಂಸಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯದ ಇತರ ಭಾಗಗಳಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮುಖ್ಯಮಂತ್ರಿ ಸಿಂಗ್ ಅವರೊಂದಿಗೆ ಪ್ರತಿಭಟನೆಯ ನಂತರದ ಹಿಂಸಾಚಾರದ ಕುರಿತು ಚರ್ಚಿಸಿದರು. ಕೇಂದ್ರವು ಈಶಾನ್ಯ ರಾಜ್ಯದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ತಂಡಗಳನ್ನು ರವಾನಿಸಿದೆ.
"ರಾಜ್ಯ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಹೆಚ್ಚುವರಿ ಅರೆ ಮಿಲಿಟರಿ ಪಡೆಗಳನ್ನು ಕೋರಲಾಗಿದೆ. ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ"ಎಂದು ಮುಖ್ಯಮಂತ್ರಿ ಸಿಂಗ್ ಅವರು ಹೇಳಿದರು.












Click it and Unblock the Notifications