Manipur violence: ಪ್ರಧಾನಿ ಮೋದಿಗೆ ಪತ್ರ ಬರೆದ 10 ಕುಕಿ ಶಾಸಕರು- ಬೇಡಿಕೆಗಳೇನು?
ಇಂಫಾಲ್ ಆಗಸ್ಟ್ 17: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಮಧ್ಯೆ ಈಶಾನ್ಯ ರಾಜ್ಯದ ಹತ್ತು ಕುಕಿ-ಜೋಮಿ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಸಮುದಾಯಕ್ಕೆ ಉನ್ನತ ಶ್ರೇಣಿಯ ಸರ್ಕಾರಿ ಹುದ್ದೆಗಳ ಸೃಷ್ಟಿ ಮತ್ತು ಆರ್ಥಿಕ ಸಹಾಯಕ್ಕಾಗಿ ತಮ್ಮ ಬೇಡಿಕೆಗಳನ್ನು ವಿವರಿಸಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಆಗಸ್ಟ್ 16 ರಂದು ಪ್ರಧಾನ ಮಂತ್ರಿಯವರಿಗೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ, ಚುರಾಚಂದ್‌ಪುರ, ಕಾಂಗ್‌ಪೋಕ್ಪಿ, ಚಾಂಡೆಲ್, ತೆಂಗನೌಪಾಲ್ ಮತ್ತು ಫರ್ಜಾಲ್‌ಗಳ ಐದು ಗುಡ್ಡಗಾಡು ಜಿಲ್ಲೆಗಳಿಗೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸಮಾನವಾದ ಸ್ಥಾನಗಳನ್ನು ನೀಡಲು ಶಾಸಕರು ವಿನಂತಿಸಿದ್ದಾರೆ.

ಸಂಘರ್ಷದಿಂದಾಗಿ ರಾಜಧಾನಿ ಇಂಫಾಲ್‌ನಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿರುವ ತಮ್ಮ ಸಮುದಾಯದವರು ವಾಸಿಸುವ ಪ್ರದೇಶಗಳ ಸಮರ್ಥ ಆಡಳಿತಕ್ಕಾಗಿ ಈ ಹುದ್ದೆಗಳು ಅಗತ್ಯವೆಂದು ಶಾಸಕರು ವಾದಿಸಿದರು. ಇಂಫಾಲ್ ಕುಕಿ-ಜೋ ಜನರಿಗೆ "ಸಾವು ಮತ್ತು ವಿನಾಶದ ಕಣಿವೆ" ಯಾಗಿ ಮಾರ್ಪಟ್ಟಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಬೆಟ್ಟದ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತಾತ್ಮಕ ಹುದ್ದೆಗಳನ್ನು ರಚಿಸುವ ಅವಶ್ಯಕತೆಯಿದೆ ಎಂದಿದ್ದಾರೆ.
ಮಾತ್ರವಲ್ಲದೆ ಹೆಚ್ಚುವರಿಯಾಗಿ ಕುಕಿ-ಜೋಮಿ ಬುಡಕಟ್ಟು ಜನಾಂಗದವರ ಪುನರ್ವಸತಿಗಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ 500 ಕೋಟಿ ರೂ.ಗಳ ಮಂಜೂರಾತಿಯನ್ನು ಕೋರಿದ್ದಾರೆ ಮತ್ತು ತಿಂಗಳುಗಳ ಕಾಲದ ಹಿಂಸಾಚಾರದ ವಿನಾಶಕಾರಿ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಅವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಬಹುಸಂಖ್ಯಾತ ಮೈಟಿ ಸಮುದಾಯ ಮತ್ತು ಅಲ್ಪಸಂಖ್ಯಾತ ಕುಕಿ-ಜೋ ಬುಡಕಟ್ಟುಗಳ ನಡುವಿನ ಉದ್ವಿಗ್ನತೆ ಮೇ 3 ರಂದು ಆರಂಭವಾಗಿದೆ. ಇದು ವ್ಯಾಪಕ ವಿನಾಶ ಮತ್ತು ಜೀವಹಾನಿಗೆ ಕಾರಣವಾಗಿದೆ.

ಮಣಿಪುರದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಮೈಟಿ ಸಮುದಾಯವು 2012 ರಿಂದ ಎಸ್‌ಟಿ ಸ್ಥಾನಮಾನಕ್ಕೆ ಬೇಡಿಕೆಯಿಡುತ್ತಿದೆ. ಈ ಮಾನ್ಯತೆ ತಮ್ಮ ಸಂಸ್ಕೃತಿ, ಭಾಷೆ ಮತ್ತು ಗುರುತನ್ನು ಸಂರಕ್ಷಿಸಲು ಸಾಂವಿಧಾನಿಕ ಸುರಕ್ಷತೆಗಳನ್ನು ಒದಗಿಸುತ್ತದೆ ಎಂದು ಅವರು ವಾದಿಸುತ್ತಾರೆ. ಆದರೆ, ಈ ಬೇಡಿಕೆಗೆ ಬೆಟ್ಟಗಳಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮೈಟೀಸ್‌ಗೆ ಈ ಪ್ರಯೋಜನಗಳನ್ನು ನೀಡುವುದರಿಂದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ತಮ್ಮ ಪಾಲನ್ನು ದುರ್ಬಲಗೊಳಿಸಬಹುದು ಎಂದು ಕುಕಿ ಸಮುದಾಯದವರು ಭಯಪಡುತ್ತಾರೆ.
ಮಾರ್ಚ್‌ನಲ್ಲಿ ನ್ಯಾಯಾಲಯದ ತೀರ್ಪು ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಿದಾಗ ಇಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಈ ನಿರ್ಧಾರವು ಕುಕಿ-ಜೋ ಬುಡಕಟ್ಟು ಜನಾಂಗದವರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಇದರಿಂದ ಕುಕಿ ಸಮಯದಾಯದವರು ತಮ್ಮ ಅರ್ಹತೆಗಳು ಕಡಿಮೆಯಾಗಬಹುದೆಂದು ಭಯಪಟ್ಟರು. ಪ್ರತಿಭಟನೆಗಳು ಶೀಘ್ರವಾಗಿ ಹಿಂಸಾಚಾರಕ್ಕೆ ತಿರುಗಿದವು. ಇದರಿಂದಾಗಿ ಪ್ರತಿಭಟನಾಕಾರರು ವಾಹನಗಳು ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚಿದರು ಮತ್ತು ಕುಕಿ-ಜೋ ವಸಾಹತುಗಳ ಮೇಲೆ ಮೈಟೆಯಿ ಜನಸಮೂಹ ದಾಳಿ ಮಾಡಿತು.
ಹಿಂಸಾಚಾರದಿಂದಾಗಿ 150 ಜನರು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಜನರು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ. ರಾಜ್ಯವು ಜನಾಂಗೀಯ ರೇಖೆಗಳಲ್ಲಿ ಬಿರುಕು ಬಿಟ್ಟಿದೆ, ಎದುರಾಳಿ ಸಮುದಾಯದ ಸದಸ್ಯರನ್ನು ಹೊರಗಿಡಲು ಪ್ರತಿಸ್ಪರ್ಧಿ ಮೈಟೆಯಿ ಮತ್ತು ಕುಕಿ-ಜೋ ಮಿಲಿಷಿಯಾಗಳು ದಿಗ್ಬಂಧನಗಳನ್ನು ಸ್ಥಾಪಿಸಿದ್ದಾರೆ. ನವದೆಹಲಿಯಿಂದ ಅರೆಸೈನಿಕ ಮತ್ತು ಸೇನಾ ಪಡೆಗಳ ನಿಯೋಜನೆಯ ಹೊರತಾಗಿಯೂ, ವಿರಳ ಹಿಂಸಾಚಾರ ಮತ್ತು ಹತ್ಯೆಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ.












Click it and Unblock the Notifications