Manipur violence: ನೀವು ಕ್ರಮಕೈಗೊಳ್ಳದಿದ್ದರೆ,ನಾವೇ ನೇರವಾಗಿ ಅಖಾಡಕ್ಕಿಳಿಯುತ್ತೇವೆ- ಮೋದಿ ಸರ್ಕಾರಕ್ಕೆ 'ಸುಪ್ರೀಂ' ಎಚ್ಚರಿಕೆ
ನವದೆಹಲಿ, ಜುಲೈ 20: ಮಣಿಪುರದಲ್ಲಿ ( Manipur ) ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ( Supreme Court of India ) ಗಂಭೀರವಾಗಿ ಪರಿಗಣಿಸಿದೆ. ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮೋದಿ ( Narendra Modi ) ನೇತೃತ್ವದ ಕೇಂದ್ರ ಸರ್ಕಾರಕ್ಕೇ ತಾಕೀತು ಮಾಡಿದೆ. ಮಣಿಪುರ ಘಟನೆ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ದಿನೇದಿನೇ ಪ್ರಕ್ಷುಬ್ದವಾಗುತ್ತಿದೆ. ಬುಧವಾರ ನಡೆದ ಅಮಾನವೀಯ ಘಟನೆಯೊಂದರಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಲಾಗಿದೆ. ಆ ಮಹಿಳೆಯರ ಜೊತೆ ಅಮಾನವೀಯವಾಗಿ ವರ್ತಿಸಲಾಗಿದೆ. ಇದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಈ ವಿಡಿಯೊ ನೋಡಿ ನಿಜಕ್ಕೂ ಬೇಸರವಾಗಿದೆ ಎಂದು ಹೇಳಿದೆ.
ಮಣಿಪುರದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಕೇಂದ್ರ ಮತ್ತು ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಘಟನೆ ಕುರಿತು ಮುಂದಿನ ಶುಕ್ರವಾರದಂದು ಹೆಚ್ಚಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
'ನಾವು ಸರ್ಕಾರಕ್ಕೆ ಕಾರ್ಯನಿರ್ವಹಿಸಲು ಸ್ವಲ್ಪ ಸಮಯ ನೀಡುತ್ತೇವೆ. ಒಂದು ವೇಳೆ, ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾದರೆ, ಅಖಾಡಕ್ಕೆ ನಾವು ಇಳಿಯುತ್ತೇವೆ. ಆ ನಂತರ, ನಾವು ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಸುಪ್ರೀಂ ಕೋರ್ಟ್ ನೇರವಾಗಿ ಎಚ್ಚರಿಕೆ ನೀಡಿದೆ.

ಅಪರಾಧಿಗಳ ಮೇಲೆ ಕಾನೂನು ಕ್ರಮಕ್ಕೆ ತೆಗೆದುಕೊಳ್ಳಿ. ನೀವು ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ನಮಗೆ ತಿಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಮಣಿಪುರ ಸರ್ಕಾರಗಳಿಗೆ ಸೂಚಿಸಿದೆ. ಮಹಿಳೆಯರನ್ನು ದೌರ್ಜನ್ಯಕ್ಕೆ ಒಳಪಡಿಸುವ ಸಾಧನಗಳನ್ನಾಗಿ ಬಳಸಿಕೊಳ್ಳುವುದು ಸಾಂವಿಧಾನಿಕ ಉಲ್ಲಂಘನೆ ಎಂದು ಅದು ಹೇಳಿದೆ.
ಮಾನವ ಹಕ್ಕುಗಳ ಉಲ್ಲಂಘನೆಯನ್ನು ತೋರಿಸುವ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹರಿಹಾಯ್ದಿದೆ.
'ಮಣಿಪುರದಲ್ಲಿ ಸರ್ಕಾರವು ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲದ ಘಟನೆಯಾಗಿದೆ. ಇದು ಆಳವಾದ ನೋವಿನ ಸಂಗತಿಯಾಗಿದೆ' ಎಂದು ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಈ ಘಟನೆಯು ಸ್ವೀಕಾರಾರ್ಹವಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
'ಕೋಮು ಕಲಹದ ಪ್ರದೇಶದಲ್ಲಿ ಮಹಿಳೆಯರನ್ನು ಸಾಧನವಾಗಿ ಬಳಸುವುದು ಒಪ್ಪತಕ್ಕುದಲ್ಲ. ಇದು ಸಾಂವಿಧಾನಿಕ ನಿಂದನೆಯ ಅತ್ಯಂತ ಘೋರ ಘಟನೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ವಿಡಿಯೊಗಳಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
ಸರ್ಕಾರವು ಕ್ರಮ ಕೈಗೊಳ್ಳದಿದ್ದರೆ, ನಾವು ಮುಂದಿನ ಕ್ರಮ ತೆಗೆಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಒಂದು ಸಮುದಾಯದ ಪುರುಷರು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ವಿಡಿಯೊದಲ್ಲಿ ಚಿತ್ರಕರಣವಾಗಿದೆ. ಈ ಘಟನೆ ವಿರೋಧಿಸಿ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಗುರುವಾರ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದೆ.
ಮಣಿಪುರ ರಾಜ್ಯವಲ್ಲಿ ಮೇ 3 ರಿಂದ ಹಿಂಸಾಚಾರ ಭುಗಿಲೆದ್ದಿದೆ. ಇಂಫಾಲದ ಸುತ್ತಲಿನ ಕಣಿವೆಯಲ್ಲಿ ಹೆಚ್ಚಿರುವ ಮೈಟೀಸ್ ಮತ್ತು ಬೆಟ್ಟಗಾಡುಗಳಲ್ಲಿ ಬದುಕುತ್ತಿರುವ ಕುಕಿಗಳ ನಡುವೆ ಜನಾಂಗೀಯ ಘರ್ಷಣೆ ಏರ್ಪಟ್ಟಿದೆ. ಹಿಂಸಾಚಾರದಲ್ಲಿ ಇಲ್ಲಿಯವರೆಗೆ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.












Click it and Unblock the Notifications