ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ, ರಾಜಸ್ಥಾನವನ್ನು ಮಣಿಪುರಕ್ಕೆ ಹೋಲಿಸಿದ ಪ್ರಧಾನಿ! ಇಂತಹ ಸಮಯದಲ್ಲೂ ರಾಜಕೀಯ ತರವೇ?
ದೇಶದ ಈಶಾನ್ಯ ರಾಜ್ಯ ಮಣಿಪುರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ. ಸುಮಾರು ಮೂರು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ ನಲುಗುತ್ತಿರುವ ಮಣಿಪುರ, ಮೂರು ದಿನದಿಂದ ಮತ್ತೆ ಮಾನವ ಸಮಾಜ ತಲೆತಗ್ಗಿಸುವ ಕಾರಣಕ್ಕಾಗಿ ಮುನ್ನಲೆಯಲ್ಲಿದೆ. ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೀದಿಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅವರ ಮೇಲೆ ಲೈಂಗಿಕ ದೌರ್ಜನ್ಯದಿಂದಾಗಿ ದೇಶ ತಲೆತಗ್ಗಿಸುವಂತಾಗಿದೆ.
ವೈರಲ್ ಆದ ಆ ವಿಡಿಯೋದಿಂದ ದೇಶವೇ ಬೆಚ್ಚಿಬಿದ್ದರೆ, ಅಮಾನುಷ ಕೃತ್ಯ ಎಸಗಿದವರ ಭಯಾನಕ ಮನಸ್ಥಿತಿ ಇಲ್ಲಿ ಜಾಹೀರಾಗಿದೆ. ಜನಾಂಗೀಯ ಹಿಂಸಾಚಾರ, ಮಹಿಳೆಯರ ಅವಮಾನ, ದಾಳಿಕೋರರ ನಿರ್ಭಯತೆ, ಪೊಲೀಸ್ ಮತ್ತು ಆಡಳಿತದ ಉದಾಸೀನತೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಮಧ್ಯಪ್ರವೇಶಿಸುವಲ್ಲಿ ಸರ್ಕಾರದ ವೈಫಲ್ಯತೆ, ಎಲ್ಲದ್ದಕಿಂತ ಹೆಚ್ಚಾಗಿ ಇಲ್ಲದ ಮಾನವೀಯತೆಗೆ ಕನ್ನಡಿ ಹಿಡಿದಂತಾಗಿದೆ.

ವಾಹನ, ಮನೆ ಸುಟ್ಟು ಹೋಗುತ್ತಿರುವ ದೃಶ್ಯ, ಹಿಂಸಾಚಾರ, ಒಂದು ಕಡೆ ಪ್ರತಿಭಟನಾಕಾರು ಇನ್ನೊಂದು ಕಡೆ ಶಸ್ತ್ರಸಜ್ಜಿತ ಸೇನಾಪಡೆಗಳ ಪರೇಡ್ ನಡೆಸುತ್ತಿರುವ ಫೋಟೋಗಳು ಪ್ರತೀದಿನ ಮಣಿಪುರದಿಂದ ನೋಡುವಂತಾಗಿದೆ. ಎಲ್ಲಕ್ಕಿಂತ ಹೆಚ್ಚು, ಇಡೀ ರಾಜ್ಯ ಹೊತ್ತಿ ಉರಿಯುತ್ತಿದ್ದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಮೌನ ವಹಿಸಿದ್ದು. ಮಣಿಪುರ ಹಿಂಸಾಚಾರ ಆರಂಭವಾದ ಸುಮಾರು 75ದಿನಗಳ ನಂತರ ಪ್ರಧಾನಿಯವರು ಈ ಸಂಬಂಧ ಹೇಳಿಕೆಯನ್ನು ನೀಡಿದರು.
ಯಾವುದೇ ಸುಸಂಸ್ಕೃತ ಸಮಾಜದಲ್ಲಿ ಎಲ್ಲಿ ಕಟ್ಟುನಿಟ್ಟಿನ ಕಾನೂನು ಮತ್ತು ಆಡಳಿತವಿದೆಯೋ, ಅಪರಾಧಿಗಳ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಲಾಗುತ್ತದೆ, ಆದರೆ ಇಲ್ಲಿ? ಲೈಂಗಿನ ದೌರ್ಜನ್ಯ ಘಟನೆಯ ವಿವರಣೆ ಮತ್ತು ಅದರ ವೀಡಿಯೊವನ್ನು ಹೊಂದಿರುವ ಎಫ್‌ಐಆರ್ ಅನ್ನು ಮೇ ತಿಂಗಳಲ್ಲಿ ದಾಖಲಿಸಲಾಗಿತ್ತು. ಆದರೆ, ಈ ವಿಡಿಯೋ ವೈರಲ್ ಆಗುವವರೆಗೂ ಯಾವುದೇ ತನಿಖೆ ಮತ್ತು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್
ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ, ಆದರೆ ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ ಎಂದು ಹೇಳುವ ಮೂಲಕ ತಮ್ಮ ವೈಫಲ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಹಾಗಾದರೆ, ಕಳೆದ ಮೂರು ತಿಂಗಳಲ್ಲಿ ಮಣಿಪುರದ ಈ ಪರಿಸ್ಥಿತಿ, ಹಿಂಸಾಚಾರ, ಅಮಾನುಷ ಕೃತ್ಯ, ಅಪರಾಧಕ್ಕೆ ಬಿರೇನ್ ಸಿಂಗ್ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕಲ್ಲವೇ?
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರ್ಕಾರ ಅದನ್ನು ನಿಭಾಯಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಸಾಬೀತಾಗುತ್ತಿದೆ. ರಾಜ್ಯದಲ್ಲಿನ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿದೆ ಮತ್ತು ಗಂಭೀರವಾದ ರಾಜಕೀಯ, ಸಾಮಾಜಿಕ ಮತ್ತು ಮಾನವ ಹಕ್ಕುಗಳ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಘಟನೆಯ ಬಗ್ಗೆ ತೀವ್ರವಾದ ಕಳವಳ ವ್ಯಕ್ತ ಪಡಿಸಿ, ನಿಮ್ಮಿಂದ ಆಗದಿದ್ದರೆ ನಾವು ಮಧ್ಯಪ್ರವೇಶಿಸ ಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇಂತಹ ಸಮಯದಲ್ಲೂ ಕೀಳು ರಾಜಕೀಯ ಬೇಕೇ?
ಲೋಕಸಭಾ ಅಧಿವೇಶನ ಆರಂಭವಾಗಿದ್ದು, ಸಿಜೆಐ ಎಚ್ಚರಿಕೆಯ ನಂತರ ಪ್ರಧಾನಿ ಮೋದಿ ಘಟನೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ದೇಶದ ಪ್ರಧಾನಿಯೊಬ್ಬರು ಹೇಳಿಕೆಯನ್ನು ನೀಡಲು ಯಾಕೆ ಇಷ್ಟೊಂದು ಸಮಯವನ್ನು ತೆಗೆದುಕೊಂಡರು ಎನ್ನುವುದೇ ದಿಗಿಲು ಹುಟ್ಟಿಸುವ ಪ್ರಶ್ನೆಯಾಗಿದೆ. ಪ್ರಧಾನಿಯವರು ಮಣಿಪುರವನ್ನು ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ ಮತ್ತು ರಾಜಸ್ಥಾನದೊಂದಿಗೆ ಹೋಲಿಸಿದ್ದಾರೆ. ಇಂತಹ ಸಮಯದಲ್ಲೂ ಕೀಳು ರಾಜಕೀಯ ಬೇಕೇ ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ನೆ..












Click it and Unblock the Notifications