ಮಣಿಪುರದಲ್ಲಿ ಹೊಸದಾಗಿ ಭುಗಿಲೆದ್ದ ಹಿಂಸಾಚಾರ- ಮನೆಗಳಿಗೆ ಬೆಂಕಿ ಹಚ್ಚಿ, ಜನರ ಮೇಲೆ ಗುಂಡು ಹಾರಿಸಿ ಅರಾಜಕತೆ ಮೆರೆದ ಕಿಡಿಗೇಡಿಗಳು
ಇಂಫಾಲ್, ಅಕ್ಟೋಬರ್ 05: ಮಣಿಪುರದ ಇಂಫಾಲದಲ್ಲಿ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿದೆ. ಮೇ ತಿಂಗಳಿಂದ ಶುರುವಾದ ಸಂಘರ್ಷವು ಈ ವರೆಗೂ ಮುಂದುವರಿದಿದೆ. ಮಣಿಪುರ ರಾಜಧಾನಿ ಇಂಫಾಲ್ ನಗರವು ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ.
ಇಂಫಾಲ್‌ನ ಪಶ್ಚಿಮ ಭಾಗದಲ್ಲಿ ಬುಧವಾರ ರಾತ್ರಿ ಕನಿಷ್ಠ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದಾರಿಯಲ್ಲಿ ಹಾದು ಹೋಗುತ್ತಿರುವವರ ಮೇಲೆ ಗುಂಡುಗಳನ್ನು ಹಾರಿಸುವ ವಿಫಲ ಯತ್ನಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ವರದಿಗಳ ಪ್ರಕಾರ, ಈ ಘಟನೆಯು ಪಾಟ್ಸೋಯಿ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಕೀಥೆಲ್ಮಾನ್ಬಿಯಲ್ಲಿ ರಾತ್ರಿ 10 ಗಂಟೆಯ ಸುಮಾರಿಗೆ ಸಂಭವಿಸಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಈಗ ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಮನೆಗಳಿಗೆ ಬೆಂಕಿ ಹಚ್ಚಿ ಜನರ ಮೇಲೆ ಹಲ್ಲೆ ಮಾಡಿದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಿದೆ. ಭದ್ರತಾ ಪಡೆಗಳು ಮತ್ತು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯ ನಂತರ ಆ ಪ್ರದೇಶದಲ್ಲಿ ಮೈತೇಯಿ ಮಹಿಳೆಯರ ಗುಂಪು ಸೇರಿದ್ದಾರೆ. ಅವರನ್ನು ಮುಂದೆ ಸಾಗದಂತೆ ಭದ್ರತಾ ಸಿಬ್ಬಂದಿ ತಡೆದಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಣಿಪುರ ಬಿಜೆಪಿ ಶಾಸಕ ಆರ್‌ಕೆ ಇಮೋ ಸಿಂಗ್ ವಿದೇಶಿ ಭಯೋತ್ಪಾದಕರು ಮಣಿಪುರದಲ್ಲಿ ದಾಂಗುಡಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸುದೀರ್ಘ ಘರ್ಷಣೆಗೆ ವಿದೇಶಿ ಭಯೋತ್ಪಾದಕ ಸಂಘಟನೆಗಳು ಕಾರಣ. ವಿದೇಶಿ ಭಯೋತ್ಪಾದಕರೇ ಮಣಿಪುರ ಮತ್ತು ರಾಷ್ಟ್ರದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಶಾಸಕರು, ದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತ್ಯೇಕತಾವಾದಿ ಉದ್ದೇಶಗಳನ್ನು ಮುನ್ನಡೆಸಲು ಅಂತರರಾಷ್ಟ್ರೀಯ ವೇದಿಕೆಗಳನ್ನು ಬಳಸಿಕೊಳ್ಳುವ ಜನರು ಸಹ ಇದಕ್ಕೆ ಜವಾಬ್ದಾರರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಕಾಂಗ್ರೆಸ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮಣಿಪುರದ ಪರಿಸ್ಥಿತಿಯ ಬಗ್ಗೆ ಅವರ ಮೌನವನ್ನು ಪ್ರಶ್ನಿಸಿದೆ. ಪ್ರಧಾನಿಯೊಬ್ಬರು ರಾಜ್ಯವನ್ನು ಮತ್ತು ಅಲ್ಲಿ ವಾಸಿಸುವ ಜನರನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಇದೇ ಮೊದಲು ಎಂದು ಪಕ್ಷ ಆರೋಪಿಸಿದೆ.
ಮೇ 3 ರಂದು ಜನಾಂಗೀಯ ಘರ್ಷಣೆಗಳು ಮಣಿಪುರದಲ್ಲಿ ಆರಂಭಗೊಂಡಿವೆ. 180 ಕ್ಕೂ ಹೆಚ್ಚು ಜನರು ಈ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ.












Click it and Unblock the Notifications