Manipur CM: ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ
ಅಚ್ಚರಿಯ ಬೆಳವಣಿಗೆಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಿದ್ದಾರೆ. ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ರಾಜಭವನದಲ್ಲಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರಕ್ಕೆ ಹೊಸ ಸಿಎಂ ಯಾರು ಎನ್ನುವ ಕುತೂಹಲ ಉಂಟಾಗಿದೆ.
ಇದುವರೆಗೆ ಮಣಿಪುರ ಜನರಿಗೆ ಸೇವೆ ಸಲ್ಲಿಸಿರುವುದು ಗೌರವದ ಸಂಗತಿಯಾಗಿದೆ ಎಂದು ಬಿರೇನ್ ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಸಿದ್ದಾರೆ. ಬಿರೇನ್ ಸಿಂಗ್ ಅವರ ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಎ ಶಾರದಾ, ಬಿಜೆಪಿಯ ಈಶಾನ್ಯ ಮಣಿಪುರದ ಉಸ್ತುವಾರಿ ಸಂಬಿತ್ ಪಾತ್ರ ಮತ್ತು ಕನಿಷ್ಠ 19 ಶಾಸಕರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಹಾಜರಿದ್ದರು.

ಪ್ರತಿಯೊಬ್ಬ ಮಣಿಪುರ ಜನರ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಸರ್ಕಾರವು ಸಕಾಲಿಕ ಕ್ರಮಗಳು, ಮಧ್ಯಸ್ಥಿಕೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಬಿರೇನ್ ಸಿಂಗ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಕಲಹ ಪೀಡಿತ ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ತಮ್ಮ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಒಂದು ಬಿರೇನ್ ಸಿಂಗ್ ಹೇಳಿದ ಒಂದು ದಿನದ ಬಳಿಕ ರಾಜೀನಾಮೆ ನೀಡಿದ್ದಾರೆ.ಮೇ 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು ಇನ್ನೂ ರಾಜ್ಯದಲ್ಲಿ ಸಂಪೂರ್ಣವಾಗಿ ಶಾಂತಿ ಸ್ಥಾಪನೆಯಾಗಿಲ್ಲ. ಜನಾಂಗೀಯ ಹಿಂಸಾಚಾರದಲ್ಲಿ ರಾಜ್ಯದಲ್ಲಿ ಈವರೆಗೂ 250ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದು, ಸಾವಿರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಬಿರೇನ್ ಸಿಂಗ್ ರಾಜೀನಾಮೆ ನೀಡಿದ ದಿನ ಕೂಡ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ. ತೌಬಲ್ ಜಿಲ್ಲೆಯ ಇಂಡಿಯಾ ರಿಸರ್ವ್ ಬೆಟಾಲಿಯನ್ ಔಟ್‌ಪೋಸ್ಟ್‌ನಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಮುಸುಕು ಧರಿಸಿದ್ದ ಬಂದೂಕುಧಾರಿಗಳು ದೋಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ತೌಬಲ್ ಜಿಲ್ಲೆಯ ಕಾಕ್ಮಯೈ ಪ್ರದೇಶದ ಐಆರ್‌ಬಿ ಔಟ್‌ಪೋಸ್ಟ್‌ನಿಂದ ಬಂದೂಕುಧಾರಿಗಳು ವಾಹನಗಳಲ್ಲಿ ಬಂದು ಶಸ್ತ್ರಾಸ್ತ್ರಗಳನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರು ಎಸ್‌ಎಲ್‌ಆರ್‌ಗಳು ಮತ್ತು ಮೂರು ಎಕೆ ರೈಫಲ್‌ಗಳನ್ನು ದೋಚಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 31ರಂದು ಹೊಸ ವರ್ಷಕ್ಕೆ ಮುನ್ನಾದಿನ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಬಿರೇನ್ ಸಿಂಗ್ ಮಣಿಪುರ ಜನರ ಕ್ಷಮೆ ಕೇಳಿದ್ದರು. ರಾಜ್ಯದಲ್ಲಿ ಸುದೀರ್ಘ ಜನಾಂಗೀಯ ಘರ್ಷಣೆಗಾಗಿ ಕ್ಷಮೆ ಕೇಳಿದ್ದ ಅವರು 2025ರಲ್ಲಿ ರಾಜ್ಯ ಸಹಜ ಸ್ಥಿತಿಗೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications