ನರೇಂದ್ರ ಮೋದಿ ಬೆಂಬಲಿಸಿದ ಮಂಗಲ್ ಪಾಂಡೆ ಕುಟುಂಬಸ್ಥರು
ನವದೆಹಲಿ, ಮೇ 16 : ಭಾರತದ ಸ್ವಾತಂತ್ರ್ಯ ಹೋರಾಟದ ಮೊದಲ ಹೆಜ್ಜೆಗೆ ನಾಂದಿ ಹಾಡಿದ ಮಂಗಲ್ ಪಾಂಡೆ ಕುಟುಂಬದವರು ಬಿಜೆಪಿ ಬೆಂಬಲಿಸಿದ್ದಾರೆ. 'ನರೇಂದ್ರ ಮೋದಿ ಅವರಿಂದಾಗಿಯೇ ನಾವು ದೇಶದಲ್ಲಿ ಸುರಕ್ಷಿತವಾಗಿದ್ದೇವೆ' ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಂಗಲ್ ಪಾಂಡೆ ಕುಟುಂಬದ 5ನೇ ತಲೆಮಾರಿನ ಸಂತೋಷ್ ಕುಮಾರ್ ಪಾಂಡೆ ಮತ್ತು ಪ್ರಭುನಾಥ್ ಪಾಂಡೆ ಅವರು ಬಿಜೆಪಿ ಬೆಂಬಲಿಸಿದ್ದಾರೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಬಲಿಯಾ ಎಂಬ ಪ್ರದೇಶದಲ್ಲಿ ಮಂಗಲ್ ಪಾಂಡೆ ಕುಟುಂಬದವರು ವಾಸಮಾಡುತ್ತಿದ್ದಾರೆ. 'ಈ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಬಿಜೆಪಿ ಹಲವು ಕೆಲಸಗಳನ್ನು ಮಾಡಿದೆ. ಉಜ್ವಲ ಯೋಜನೆ ಜಾರಿಗೆ ತಂದಿದೆ. ನಮಗೆ ವಿದ್ಯುತ್ ಶಕ್ತಿ ನೀಡಿದೆ. ಬಡವರಿಗೆ ಮನೆ ನೀಡಿದೆ. ರೈತರಿಗೆ ಹಲವು ಯೋಜನೆ ಜಾರಿಗೊಳಿಸಿದೆ. ನಮ್ಮ ಸೈನಿಕರನ್ನು ಕೊಂದವರಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದೆ. ನಾವು ಭಾರತದಲ್ಲಿ ಸುರಕ್ಷಿತವಾಗಿರಲು ನರೇಂದ್ರ ಮೋದಿ ಸರ್ಕಾರವೇ ಕಾರಣ' ಎಂದು ಸಂತೋಷ್ ಕುಮಾರ್ ಪಾಂಡೆ ಹೇಳಿದ್ದಾರೆ.
ಸಂತೋಷ್ ಕುಮಾರ್ ಪಾಂಡೆ ಅವರು ಪ್ರಸ್ತುತ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. 'ನಮ್ಮ ಕುಟುಂಬ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದಾಗ ಇಂದಿರಾ ಗಾಂಧಿ ವಿರುದ್ಧವಾಗಿ ನಿಂತಿತ್ತು. ನರೇಂದ್ರ ಮೋದಿ ಸರ್ಕಾರ ಹಿಂದಿ ಭಾಷೆ ಪ್ರಚಾರಕ್ಕೆ ಆದ್ಯತೆ ನೀಡಿದೆ' ಎಂದು ತಿಳಿಸಿದ್ದಾರೆ.
'ಹಿಂದೆ ಪ್ರತಿದಿನ 3 ರಿಂದ 4 ಗಂಟೆಗಳ ಕಾಲ ವಿದ್ಯುತ್ ಸಿಗುತ್ತಿತ್ತು. ಈಗ 18 ಗಂಟೆಗಳ ಕಾಲ ನಮಗೆ ವಿದ್ಯುತ್ ಸಿಗುತ್ತಿದೆ. ಈ ಸರ್ಕಾರ ಬಂದ ಮೇಲೆ ರಸ್ತೆ, ರೈಲ್ವೆ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಿದೆ' ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಬಲಿಯಾ ಸಹ ಒಂದು. ಮೇ 19ರಂದು ಕೊನೆಯ ಹಂತದ ಚುನಾವಣೆ ನಡೆಯುವಾಗ ಬಲಿಯಾದಲ್ಲಿ ಮತದಾನ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications