ಮಟನ್ ಮಾಡಿಕೊಟ್ಟಿಲ್ಲವೆಂದು ಪತ್ನಿಯನ್ನೇ ಕೊಂದ ಕ್ರೂರ ಪತಿ
ಆಗ್ರಾ, ಜೂನ್ 12: ಪತ್ನಿ ಮಟನ್ ಮಾಡಿಲ್ಲವೆಂದು ಆಕೆಯನ್ನು ಮನೆಯ ಪತಿಯೇ ಕೊಲೆಗೈದ ಘಟನೆ ಆಗ್ರಾದ ಫಿರೋಜಾಬಾದ್ ನಲ್ಲಿ ನಡೆದಿದೆ.
ಕುಡಿದು ಮನೆಗೆ ಬಂದ ಪತಿ ಮಟನ್ ಮಾಡಿಕೊಡುವಂತೆ ಪತ್ನಿಯನ್ನು ಕೇಳಿದ್ದಾನೆ. ಆದರೆ ಪತ್ನಿ ನಿರಾಕರಿಸಿದ್ದಾಳೆ. ಕುಡಿತ ಮತ್ತಿನಲ್ಲಿದ್ದ ಪತಿ ಇದರಿಂದ ಕುಪಿತಗೊಂಡು, ಕಬ್ಬಿಣದ ಸಲಾಕೆಯಿಂದ ಪತ್ನಿಗೆ ಹೊಡೆದಿದ್ದಾನೆ. ನಂತರ ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು ಎಂದು ಅನ್ನಿಸಲಿ ಎಂದು ಆಕೆಯನ್ನು ಮೂರನೇ ಮಹಡಿಯಲ್ಲಿರುವ ತನ್ನ ಮನೆಯಿಂದ ನೂಕಿದ್ದಾನೆ.
ಈ ಘಟನೆ ಜೂನ್ 8, ಶುಕ್ರವಾರ ಬೆಳಗ್ಗಿನ ಜಾವವೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೂರನೇ ಮಹಡಿಯಿಂದ ಬಿದ್ದು, ರಕ್ತದ ಮಡುವಿನಲ್ಲೇ ಹಲವು ಕಾಲ ಕಳೆದರೂ ಮಹಿಳೆ ಬದುಕಿದ್ದರು. ಆಕೆಯ ಸಂಬಂಧಿಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಆಕೆಯನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಮರಣೋತ್ತರ ಪರೀಕ್ಷೆಯಿಂದಾಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು ಎಂಬುದು ತಿಳಿದುಬಂದಿತ್ತು. ಆರೋಪಿಯನ್ನು ಮನೋಜ್ ಕುಮಾರ್ ಮತ್ತು ಮೃತ ಮಹಿಳೆಯನ್ನು ರಾಣಿ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ರಾಣಿ ಅವರ ಸಹೋದರ ನೀದಿದ ವಿವರದ ಆಧಾರದ ಮೇಲೆ ಮನೋಜ್ ಕುಮಾರನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆದರೆ ಆತ ನಾಪತ್ತೆಯಾಗಿದ್ದು, ಅವನನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.












Click it and Unblock the Notifications