ಸಂಪ್ರದಾಯ ಮುರಿದ ಮಮತಾ ಬ್ಯಾನರ್ಜಿ: ಬೂತ್‌ಗಳಿಗೆ ದಿಢೀರ್ ಭೇಟಿ, ದೀದಿ ಸೋಲಲಿದ್ದಾರೆ ಎಂದ ಸುವೇಂದು ಅಧಿಕಾರಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೈ-ವೋಲ್ಟೇಜ್ ಕ್ಷೇತ್ರವಾದ ಭವಾನಿಪುರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಮೊದಲ ಬಾರಿಗೆ ತಮ್ಮ ಸಂಪ್ರದಾಯವನ್ನು ಮುರಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಮತದಾನದ ದಿನದಂದು ತಮ್ಮ ಹರೀಶ್ ಚಟರ್ಜಿ ರಸ್ತೆಯ ನಿವಾಸದಲ್ಲೇ ಉಳಿದು ಮಾಹಿತಿ ಪಡೆಯುತ್ತಿದ್ದ ಮಮತಾ, ಈ ಬಾರಿ ಸ್ವತಃ ಬೂತ್‌ಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ದಶಕಗಳ ಪದ್ಧತಿ ಬದಲಿಸಿದ ದೀದಿ
ಈ ಹಿಂದೆ ಎಡರಂಗ ಅಧಿಕಾರದಲ್ಲಿದ್ದಾಗ ಅಥವಾ 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಾಗಲೂ ಮಮತಾ ಬ್ಯಾನರ್ಜಿ ಅವರು ಮತದಾನದ ದಿನ ಮನೆಯಿಂದ ಹೊರಬರುತ್ತಿರಲಿಲ್ಲ. ಫಿರ್ಹಾದ್ ಹಕೀಮ್ ಮತ್ತು ಅರೂಪ್ ಬಿಸ್ವಾಸ್ ಅವರಂತಹ ಆಪ್ತರು ಅವರಿಗೆ ಅಪ್‌ಡೇಟ್ ನೀಡುತ್ತಿದ್ದರು. ಕಳೆದ ಬಾರಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದಾಗಲೂ ಅವರು ತಮ್ಮ ಈ ದಿನಚರಿಯನ್ನು ಬದಲಿಸಿರಲಿಲ್ಲ. ಆದರೆ ಈ ಬಾರಿ ಭವಾನಿಪುರದಲ್ಲಿ ತಮ್ಮ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ವಿರುದ್ಧದ ಪೈಪೋಟಿಯ ನಡುವೆ ಅವರು ರಣತಂತ್ರ ಬದಲಿಸಿ, ಬೆಳ್ಳಂಬೆಳಗ್ಗೆಯೇ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ.

ಕೇಂದ್ರ ಪಡೆಗಳ ವಿರುದ್ಧ ಕಿಡಿ
ತಮ್ಮ ಪ್ರವಾಸದ ವೇಳೆ ಚೆಟ್ಲಾ ಮತ್ತು ಚಕ್ರಬೇರಿಯಾ ಬೂತ್‌ಗಳಿಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ, ಕೇಂದ್ರ ಪಡೆಗಳು ಮತ್ತು ಚುನಾವಣಾ ವೀಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಜನರು ಮತದಾನ ಮಾಡಬೇಕು, ಆದರೆ ಈ ರೀತಿ ಮತದಾನ ನಡೆಯಲು ಸಾಧ್ಯವೇ? ನಮ್ಮ ಧ್ವಜಗಳನ್ನು ತೆಗೆಯಲಾಗಿದೆ, ವಾರ್ಡ್ 70ರ ಕೌನ್ಸಿಲರ್ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ" ಎಂದು ಮಮತಾ ದೂರಿದ್ದಾರೆ. ಹೊರಗಿನಿಂದ ಬಂದ ಅಧಿಕಾರಿಗಳು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಸುವೇಂದು ಅಧಿಕಾರಿ ತಿರುಗೇಟು
ಮಮತಾ ಬ್ಯಾನರ್ಜಿ ಅವರು ಬೂತ್‌ಗಳಿಗೆ ಭೇಟಿ ನೀಡುತ್ತಿದ್ದಂತೆಯೇ ಅವರ ಎದುರಾಳಿ ಬಿಜೆಪಿಯ ಸುವೇಂದು ಅಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಿ ಟೀಕಿಸಿದ್ದಾರೆ. "ಮಮತಾ ಬ್ಯಾನರ್ಜಿ ಈ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಯಾರೂ ಅವರಿಗೆ ಮತ ಹಾಕುತ್ತಿಲ್ಲ, ಆ ಕಾರಣಕ್ಕಾಗಿಯೇ ಅವರು ತೀವ್ರ ಹತಾಶೆಗೊಂಡಿದ್ದಾರೆ" ಎಂದು ಸುವೇಂದು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿ, ಯಾವ ತಂತ್ರಗಳೂ ಕೆಲಸ ಮಾಡುವುದಿಲ್ಲ. ಇವಿಎಂ ತೆರೆದಾಗ ಟಿಎಂಸಿ ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಭವಾನಿಪುರದಲ್ಲಿ ಬಿಗುವಿನ ವಾತಾವರಣವಿದ್ದು, ಎರಡೂ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ.
ಪೊಲೀಸರಿಂದ ಲಾಠಿ ಚಾರ್ಜ್
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನದ ವೇಳೆ ಭವಾನಿಪುರ ಕ್ಷೇತ್ರದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ. ಮತಗಟ್ಟೆಯ ಹೊರಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಆಗಮಿಸುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು "ಚೋರ್ ಚೋರ್" (ಕಳ್ಳ ಕಳ್ಳ) ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಬೆಂಬಲಿಗರು "ಜೈ ಶ್ರೀರಾಮ್" ಘೋಷಣೆಗಳನ್ನು ಕೂಗಿದ್ದರಿಂದ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮತ್ತು ಸಂಘರ್ಷ ಏರ್ಪಟ್ಟಿತು.
ಕ್ಷೇತ್ರದಲ್ಲಿ ಉಂಟಾದ ಪರಿಸ್ಥಿತಿಯ ವಿರುದ್ಧ ಸುವೇಂದು ಅಧಿಕಾರಿ ಅವರು ತಕ್ಷಣವೇ ಚುನಾವಣಾ ಆಯೋಗಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ, ಸುವೇಂದು ಅಧಿಕಾರಿ ಅವರು ಮತದಾನಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ನಾಯಕತ್ವ ಗಂಭೀರ ಆರೋಪ ಮಾಡಿದೆ. ಪರಿಸ್ಥಿತಿಯು ಹತೋಟಿ ಮೀರುತ್ತಿದ್ದಂತೆ ಕೇಂದ್ರ ಪಡೆಗಳು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದವು. ಸದ್ಯ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.













Click it and Unblock the Notifications