ನಿದ್ರಾ ಭಂಗಕ್ಕೆ 50 ಲಕ್ಷ ಪರಿಹಾರ ಕೇಳಿದ ಮಲಯಾಳಿ ಮಹಿಳೆ
ತಿರುವನಂತಪುರ, ಜೂ. 03: ಸಿನಿಮಾವೇನೋ ಚೆನ್ನಾಗಿದೆ. ಆದರೆ ಅದರ ಮೇಲೆ 50 ಲಕ್ಷ ರೂ. ಪರಿಹಾರ ನೀಡುವಂತೆ ಕೇಸು ಬಿದ್ದಿದೆ. ಇಲ್ಲಿ ಯಾವ ಶೀರ್ಷಿಕೆ ವಿವಾದಗಳಿಲ್ಲ, ಕತೆ ಕದ್ದ ಆರೋಪವಿಲ್ಲ.
ಡ್ರೈವಿಂಗ್ ಸ್ಕೂಲ್ ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಮಲಯಾಳಂ ಸಿನಿಮಾ 'ಚಂದ್ರಟಾನ್ ಎವಿಡಿಯಾ' ದ ಮೇಲೆ ಪ್ರಕರಣ ದಾಖಲಿಸಿದ್ದು 50 ಲಕ್ಷ ರು ಪರಿಹಾರ ನೀಡುವಂತೆ ಕೇಳಿದ್ದಾರೆ. ಅಲ್ಲದೇ ಸಿನಿಮಾ ಪ್ರದರ್ಶನ ರದ್ದು ಮಾಡುವಂತೆ ಕೇಳಿಕೊಂಡಿದ್ದಾರೆ. ಆಕೆ ನಿದ್ರಾ ಭಂಗ ಮಾಡಿದ್ದಕ್ಕೆ ಸಿನಿಮಾ ತಂಡ ಪರಿಹಾರ ನೀಡಬೇಕಂತೆ![ಕನ್ನಡದಲ್ಲಿ ನಟಿ ಶಕೀಲಾ ಆತ್ಮಕಥೆ]

ಅಷ್ಟಕ್ಕೂ ಆಗಿದ್ದೇನು?
ಮಲಯಾಳಂ ಸಿನಿಮಾದಲ್ಲಿ ದೂರವಾಣಿ ಸಂಖ್ಯೆಯೊಂದನ್ನು ತೋರಿಸಲಾಗುತ್ತದೆ. ಅಲ್ಲದೇ ಇಡೀ ಸಿನಿಮಾ ಫೋನ್ ಕಾಲ್ ಗಳ ಸುತ್ತವೇ ಗಿರಕಿ ಹೊಡೆಯುತ್ತದೆ. ಆದರೆ ಎಡವಟ್ಟಾಗಿದ್ದೇ ಇಲ್ಲಿ. ಸಿನಿಮಾದಲ್ಲಿ ತೋರಿಸಿದ ದೂರವಾಣಿ ಸಂಖ್ಯೆ ಮತ್ತು ಪರಿಹಾರ ಕೋರಿ ದೂರು ದಾಖಲಿಸಿರುವ 39 ವರ್ಷದ ಮಹಿಳೆ ಬಳಕೆಮಾಡುತ್ತಿದ್ದ ನಂಬರ್ ಒಂದೇ.
ಸಿನಿಮಾ ನೋಡಿದ ಸಾವಿರಾರು ಮಂದಿ ಹಗಲು, ರಾತ್ರಿ, ಮಧ್ಯರಾತ್ರಿ ಎಂಬ ತಾರತಮ್ಯವಿಲ್ಲದೇ ಕರೆ ಮಾಡತೊಡಗಿದ್ದಾರೆ. ಕರೆ ಮಹಿಳೆಗೆ ಕನೆಕ್ಟ್ ಆಗಿದೆ. ಒಮ್ಮೆ ಸಿಹಿ ಸ್ವರ ಕೇಳಿದವರು ಮತ್ತೆ ಮತ್ತೆ ಕರೆ ಮಾಡತೊಡಗಿದ್ದಾರೆ. ಅಲ್ಲದೇ ಅಶ್ಲೀಲ ರೀತಿಯಲ್ಲೂ ಮಾತನಾಡಲು ಆರಂಭಿಸಿದ್ದಾರೆ.[ಸಿಬಿಐ ಬಲೆಗೆ ಸಿಕ್ಕಿ ಬಿದ್ದ ಮಲ್ಲು ಸುಂದರಿ]
ಇದರಿಂದ ಬೇಸತ್ತ ಮಹಿಳೆ ಸ್ಥಳೀಯ ನ್ಯಾಯಾಲಯದಲ್ಲಿ 50 ಲಕ್ಷ ಪರಿಹಾರ ಕೋರಿ ಸಿನಿಮಾ ತಂಡದ ವಿರುದ್ಧ ದೂರು ದಾಖಲಿ ಮಾಡಿದ್ದಾರೆ. ಹಿಂದೆ ಅಮೀರ್ ಖಾನ್ ಅಭಿನಯದ ಗಜನಿ ಚಿತ್ರದ ಸಂದರ್ಭದಲ್ಲಿ ಇಂಥದ್ದೇ ಸಮಸ್ಯೆ ಎದುರಾಗಿತ್ತು. ಅಮೀರ್ ಖಾನ್ ದೇಹದ ಮೇಲೆ ಬರೆದುಕೊಂಡಿದ್ದ ನಂಬರ್ ಗಳಿಗೆ ಕರೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಮಲಯಾಳಿ ಚಿತ್ರರಂಗದ ಖ್ಯಾತ ತಾರೆಗಳಾದ ದಿಲೀಪ್ ಮತ್ತು ಅನುಶ್ರೀ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನಾದರೂ ಚಿತ್ರತಂಡದವರು ಈ ಬಗೆಯ ನಂಬರ್ ಬಳಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಈ ಬಗೆಯ ಎಡವಟ್ಟುಗಳು ಆಗಬಹುದು.












Click it and Unblock the Notifications