ಸಂಕ್ರಾಂತಿ 2022: ಗಂಗಾನದಿ ಪವಿತ್ರಸ್ನಾನಕ್ಕೆ ನಿರ್ಬಂಧ ಹೇರಿಕೆ
ಹರಿದ್ವಾರ, ಜನವರಿ 11: ವಿಧಾನಸಭೆ ಚುನಾವಣೆ ಎದುರು ನೋಡುತ್ತಿರುವ ದೇವಭೂಮಿ ಉತ್ತರಾಖಂಡದಲ್ಲಿ ಸಂಕ್ರಾಂತಿಗೂ ಮುನ್ನ ಮಾರ್ಗಸೂಚಿ ಹೊರಡಿಸಲಾಗಿದೆ. ಮಂಗಳವಾರ ಹೊರ ಬಂದ ಸರ್ಕಾರಿ ಆದೇಶಗಳ ಪ್ರಕಾರ, ಕೋವಿಡ್ ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಹರಿದ್ವಾರ ಮತ್ತು ಋಷಿಕೇಶದ ಗಂಗಾನದಿಯ ದಡದಲ್ಲಿ ಮಕರ ಸಂಕ್ರಾಂತಿಯಂದು ಭಕ್ತರು ಸ್ನಾನ ಮಾಡದಂತೆ ನಿರ್ಬಂಧ ಹೇರಲಾಗಿದೆ.
ಹರಿದ್ವಾರದ ಹರ್ ಕಿ ಪೌರಿ, ಋಷಿಕೇಶದ ತ್ರಿವೇಣಿ ಘಾಟ್ ಮತ್ತು ಇತರ ಘಾಟ್‌ಗಳಲ್ಲಿ ಮಕರ ಸಂಕ್ರಾಂತಿಯಂದು ಧಾರ್ಮಿಕ ಸ್ನಾನಕ್ಕಾಗಿ ಭಕ್ತರು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಹರಿದ್ವಾರ ಆಡಳಿತ ಮಂದಳಿ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿ ವಿನಯ್ ಶಂಕರ್ ಪಾಂಡೆ ಮತ್ತು ಡೆಹ್ರಾಡೂನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್ ರಾಜೇಶ್ ಕುಮಾರ್ ಈ ಕುರಿತಂತೆ ಪ್ರಕಟಣೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳವಾರ ಒಟ್ಟು 2,127 ಮತ್ತು ಸೋಮವಾರ 1,292 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಉತ್ತರಾಖಂಡ್ ರಾಜ್ಯದಲ್ಲಿ ಜನವರಿ 29ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, 70 ಕ್ಷೇತ್ರಗಳ ಭವಿಷ್ಯ ಮಾರ್ಚ್ 10 ರಂದು ತಿಳಿಯಲಿದೆ. ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ರಾಜ್ಯಗಳ ಚುನಾವಣಾ ಫಲಿತಾಂಶವೂ ಅಂದೇ ಪ್ರಕಟವಾಗಲಿದೆ.
ಕೋಲ್ಕತ್ತಾದಿಂದ ಸುಮಾರು 130 ಕಿಮೀ ದೂರದಲ್ಲಿರುವ ಸಾಗರ್ ದ್ವೀಪಗಳಲ್ಲಿ ಜನವರಿ 8 ಮತ್ತು 16 ರ ನಡುವೆ ವಾರ್ಷಿಕ ಗಂಗಾಸಾಗರ ಮೇಳವನ್ನು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಆಯೋಜಿಸಲು ಅವಕಾಶ ನೀಡುವುದು "ಸೂಪರ್" ಆಗಿ ಹೊರಹೊಮ್ಮಬಹುದು ಎಂದು ತಜ್ಞರು ಎಚ್ಚರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಗಂಗಾ ನದಿಯಲ್ಲಿ 'ಪವಿತ್ರ ಸ್ನಾನ'
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಹರಿದ್ವಾರ ಮತ್ತು ಋಷಿಕೇಶದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಗಂಗಾ ನದಿಯಲ್ಲಿ 'ಪವಿತ್ರ ಸ್ನಾನ' ಮಾಡುತ್ತಾರೆ. ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ ಹೀಗಾಗಿ ಈ ಕಠಿಣ ಕ್ರಮ ಅನಿವಾರ್ಯ ಎಂದು ಜಿಲ್ಲಾಡಳಿತ ಹೇಳಿದೆ. ಇನ್ನು ಒಡಿಶಾದಲ್ಲಿ, ವಿಶೇಷ ಪರಿಹಾರ ಆಯುಕ್ತರ (ಎಸ್‌ಆರ್‌ಸಿ) ಕಚೇರಿಯು ಹೊಸ ಮಾರ್ಗಸೂಚಿಯಂತೆ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಸ್ನಾನ ಮಾಡಲು ನದಿ ದಡಗಳು, ಘಾಟ್‌ಗಳು, ಕೊಳಗಳು, ಸಮುದ್ರ ತೀರಗಳು ಅಥವಾ ಇತರ ಜಲಮೂಲಗಳ ಬಳಿ ಸಾರ್ವಜನಿಕರು ಗುಂಪಾಗಿ ಸೇರದಂತೆ ನಿರ್ಬಂಧ ಹೇರಲಾಗಿದೆ.
Recommended Video
ಹಬ್ಬದ ಸಂದರ್ಭದಲ್ಲಿ ದೇವಾಲಯಗಳಲ್ಲಿ ಹೆಚ್ಚಿನ ಜನರು ಸೇರುವುದರಿಂದ, ಮಕರ ಸಂಕ್ರಾಂತಿ, ಪೊಂಗಲ್, ಪುಣ್ಯಕಾಲದ ಮೇಳದ ದಿನಗಳಲ್ಲಿ ಎಲ್ಲಾ ಧಾರ್ಮಿಕ ಸ್ಥಳಗಳು ಮತ್ತು ಪೂಜಾ ಸ್ಥಳಗಳನ್ನು ಮುಚ್ಚಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಕನಿಷ್ಠ ಸಂಖ್ಯೆಯ ಅರ್ಚಕರು, ಸೇವಕರು ಮತ್ತು ಸಿಬ್ಬಂದಿಗಳೊಂದಿಗೆ ದೈನಂದಿನ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಲು ಅನುಮತಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.












Click it and Unblock the Notifications