80ರ ವಯಸ್ಸಿನಲ್ಲೂ ಎಐ ಕಲಿತ ಮಹಿಳೆ! ಹಿರಿಯರಿಗೆ ಡಿಜಿಟಲ್ ಪಾಠ ಕಲಿಸುತ್ತಿರುವ ಮಹಿಮಾ ಭಲೋಟಿಯಾ

Mahima Bhalotia: ವಯಸ್ಸಾದಂತೆ ಟೆಕ್ನಾಲಜಿ ಕಲಿಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಆನ್‌ಲೈನ್‌ ಪೇಮೆಂಟ್‌ ಮಾಡೋದು, ಓಲಾ ಅಥವಾ ಉಬರ್‌ನಲ್ಲಿ ಕ್ಯಾಬ್‌ ಬುಕ್‌ ಮಾಡೋದು, ಗೂಗಲ್‌ ಮ್ಯಾಪ್‌ ಬಳಸೋದು ಇವೆಲ್ಲಾ 60, 70ರ ನಂತರದವರು ಕಲಿಯೋದು ಕಷ್ಟ. ಮನೆಯಲ್ಲಿ ಯಾರಾದರೂ ಕಿರಿಯರು ಹೇಳಿಕೊಟ್ಟರೆ ಕಲಿಯುತ್ತಾರೆ. ಆದರೆ ಯಾರಿಗೆ ಸಮಯವಿದೆ? ಹೀಗಾಗಿ ಹಿರಿಯರು ಪಾಡುಪಡೋದು ತಪ್ಪುವುದಿಲ್ಲ.

Mahima Bhalotia Who Has Taught Digital Skills to empower older adults How Social Paathshala working

ಆದ್ರೆ ವಯಸ್ಸು 80 ದಾಟಿದರೂ ಹೊಸ ತಂತ್ರಜ್ಞಾನ ಕಲಿಯಲು ಸಾಧ್ಯ ಎಂಬುದನ್ನು ಒಂದಿಡೀ ಸಮುದಾಯಕ್ಕೆ ಕಲಿಸಿ ತೋರಿಸ್ತಿದಾರೆ ಮಹಿಮಾ ಭಲೋಟಿಯಾ ಎಂಬಾಕೆ. ಹಿರಿಯ ನಾಗರಿಕರಿಗೆ ಡಿಜಿಟಲ್ ಜಗತ್ತಿನ ಪರಿಚಯ ಮಾಡಿಸುತ್ತಿರುವ ಅವರ 'ದಿ ಸೋಶಿಯಲ್ ಪಾಠಶಾಲಾ' ಈಗ ಸಾವಿರಾರು ಜನರಿಗೆ ಹೊಸ ಭರವಸೆ ನೀಡುತ್ತಿದೆ.

ಉದಾಹರಣೆಗೆ 80 ವರ್ಷದ ಮಾಯಾ ಮೇಕರ್ ಎಂಬವರ ಕತೆ ನೋಡಿ. ಇವರಿಗೆ ಎಟಿಎಂನಲ್ಲಿ ಹಣ ತೆಗೆಯುವುದು ಬಿಟ್ಟು ಬೇರಿನ್ನೇನೂ ತಿಳಿದಿರಲಿಲ್ಲ. ಆದ್ರೆ ಇತ್ತೀಚೆಗೆ ಮಹಿಮಾ ಅವರ ಪಾಠಶಾಲಾದಲ್ಲಿ ಕಲಿತ ಬಳಿಕ ಅವರು ಮೆಟಾ ಎಐ ಸೂಚನೆಗಳನ್ನು ಪಾಲಿಸುತ್ತಾ ಕರ್ನಾಟಕ ಪ್ರವಾಸ ಮಾಡಿದರು.

Mahima Bhalotia ಆರಂಭಿಸಿದ ವಿಭಿನ್ನ ಪಾಠಶಾಲೆ

'ದಿ ಸೋಶಿಯಲ್ ಪಾಠಶಾಲಾ'ದ ಸ್ಥಾಪಕಿ ಮಹಿಮಾ ಭಲೋಟಿಯಾ ಅವರ ವೃತ್ತಿಜೀವನ (career) ಆರಂಭದಲ್ಲಿ ತಂತ್ರಜ್ಞಾನ ಶಿಕ್ಷಣಕ್ಕೆ ಸಂಬಂಧಿಸಿರಲಿಲ್ಲ. ಅವರು ಚಾರ್ಟರ್ಡ್ ಅಕೌಂಟೆನ್ಸಿ ಅಧ್ಯಯನ ಮಾಡಿ, ಬಳಿಕ ಇಟಲಿಯ ಮಿಲನ್‌ನಲ್ಲಿ ಐಷಾರಾಮಿ ಉತ್ಪನ್ನಗಳು ಮತ್ತು ಸೇವೆಗಳ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಮುಂಬೈನಲ್ಲಿ ಮ್ಯಾರಿಯಟ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಕೆಲಸ ಮಾಡಿದರು.

ಒಂದು ದಿನ ಕಚೇರಿಯಲ್ಲಿ ನಡೆದ ಸಾಮಾನ್ಯ ಸಂಭಾಷಣೆಯೇ ಅವರ ಮುಂದಿನ ಪ್ರಯತ್ನಕ್ಕೆ ಪ್ರೇರಣೆಯಾಯಿತು. ಕೆಲಸದ ಸಂದರ್ಭದಲ್ಲಿ ಹೋಟೆಲ್ ಉದ್ಯೋಗಿಗಳಿಗೆ ಸಾಮಾಜಿಕ ಮಾಧ್ಯಮ ಬಳಕೆಯ ತರಬೇತಿ ನೀಡುವ ಕಾರ್ಯದಲ್ಲಿ ಮಹಿಮಾ ತೊಡಗಿದ್ದರು. ಆಗ ಅವರ ಮೇಲಧಿಕಾರಿಯ ತಾಯಿ ಉಬರ್ ಕ್ಯಾಬ್ ಬುಕ್ ಮಾಡಲು ಪದೇಪದೇ ಕರೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಮೇಲಧಿಕಾರಿ, ಉದ್ಯೋಗಿಗಳಿಗೆ ತಂತ್ರಜ್ಞಾನ ತರಬೇತಿ ನೀಡುವುದಕ್ಕಿಂತ ಮೊದಲು ನಮ್ಮ ತಂದೆ-ತಾಯಂದಿರಿಗೆ ಇಂತಹ ತರಬೇತಿ ನೀಡಬೇಕಲ್ಲವೇ ಎಂದು ತಮಾಷೆಯಾಗಿ ಹೇಳಿದರು.

ಇತರರು ಅದನ್ನು ಸಾಮಾನ್ಯ ಹಾಸ್ಯವಾಗಿ ಪರಿಗಣಿಸಿದರೂ, ಮಹಿಮಾ ಅದರಲ್ಲಿ ಒಂದು ಮಹತ್ವದ ಅಗತ್ಯವನ್ನು ಕಂಡರು. ಅನೇಕ ಹಿರಿಯರು ಸಣ್ಣಪುಟ್ಟ ಡಿಜಿಟಲ್ ಕೆಲಸಗಳಿಗೂ ಕುಟುಂಬದ ಸದಸ್ಯರನ್ನು ಅವಲಂಬಿಸುತ್ತಿದ್ದಾರೆ ಎಂಬುದನ್ನು ಅವರು ಗಮನಿಸಿದರು.

ಕೋವಿಡ್-19 (COVID19) ಸಾಂಕ್ರಾಮಿಕದ ಸಮಯದಲ್ಲಿ ಈ ಆಲೋಚನೆಗೆ ಮತ್ತೆ ಜೀವ ಸಿಕ್ಕಿತು. ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿಯಲ್ಲಿ ಹಿರಿಯರು ತಂತ್ರಜ್ಞಾನ ಕಲಿಯುವುದು ಹೆಚ್ಚು ಅಗತ್ಯವೆಂದು ಮಹಿಮಾ ಅವರ ತಾಯಿ ಸಲಹೆ ನೀಡಿದರು. ಅದರ ಫಲವಾಗಿ 2020ರ ಆಗಸ್ಟ್‌ನಲ್ಲಿ 'ದಿ ಸೋಶಿಯಲ್ ಪಾಠಶಾಲಾ' ಆರಂಭವಾಯಿತು.

ವಾಟ್ಸ್‌ಆ್ಯಪ್‌ನಿಂದ ಎಐವರೆಗೆ ತರಬೇತಿ

ಮೊದಲಿಗೆ ಮಹಿಮಾ ತಮ್ಮ ತಾಯಿ ಮತ್ತು ಚಿಕ್ಕಮ್ಮಂದಿರಿಗೆ ವಾಟ್ಸ್‌ಆ್ಯಪ್ ಬಳಸುವುದನ್ನು ಕಲಿಸಿದರು. ಸಂದೇಶ ಕಳುಹಿಸುವುದು, ವಿಡಿಯೊ ಕರೆ ಮಾಡುವುದು, ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವುದು ಮುಂತಾದ ಮೂಲಭೂತ ವಿಷಯಗಳಿಂದ ತರಬೇತಿ ಆರಂಭವಾಯಿತು.

ಹಿರಿಯರಿಗೆ ತಂತ್ರಜ್ಞಾನ ಕಲಿಸುವಾಗ ಅತ್ಯಂತ ಸರಳವಾದ ವಿಷಯಗಳನ್ನೂ ವಿವರಿಸಬೇಕಾಗುತ್ತದೆ ಎಂಬುದು ಅವರಿಗೆ ಅರ್ಥವಾಯಿತು. ಯುವಜನರಿಗೆ ಸುಲಭವೆನಿಸುವ ಕೆಲವು ಆಯ್ಕೆಗಳು ಹಿರಿಯರಿಗೆ ಹೊಸದಾಗಿರಬಹುದು. ಆದ್ದರಿಂದ ಯಾವುದನ್ನೂ ಚಿಕ್ಕ ವಿಷಯವೆಂದು ನಿರ್ಲಕ್ಷಿಸದೆ ಪಾಠಗಳನ್ನು ರೂಪಿಸಿದರು.

ಇಂದು ಈ ತರಬೇತಿಯಲ್ಲಿ ಸ್ಮಾರ್ಟ್‌ಫೋನ್ (smartphone) ಬಳಕೆ, ವಾಟ್ಸ್‌ಆ್ಯಪ್, ವಿಡಿಯೊ ಕರೆ, ಡಿಜಿಟಲ್ ಪಾವತಿ, ಸಾಮಾಜಿಕ ಮಾಧ್ಯಮ, ಆನ್‌ಲೈನ್ ಸುರಕ್ಷತೆ, ಜೂಮ್, ಗೂಗಲ್ ಸೇವೆಗಳು ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಹಲವು ವಿಷಯಗಳನ್ನು ಕಲಿಸಲಾಗುತ್ತದೆ.

ಪ್ರತಿ ತರಗತಿಯಲ್ಲಿ ಸುಮಾರು 15ರಿಂದ 20 ಮಂದಿ ಭಾಗವಹಿಸುತ್ತಾರೆ. ಜೂಮ್ ಮೂಲಕ ನಡೆಯುವ ತರಗತಿಗಳಲ್ಲಿ ಮಹಿಮಾ ತಮ್ಮ ಮೊಬೈಲ್ ಪರದೆಯನ್ನು ಹಂಚಿಕೊಂಡು, ಪ್ರತಿಯೊಂದು ಆಯ್ಕೆಯನ್ನು ಪ್ರಾಯೋಗಿಕವಾಗಿ ತೋರಿಸುತ್ತಾರೆ. ತರಗತಿಯ ಕೊನೆಯಲ್ಲಿ ಪುನರಾವರ್ತನೆ ನಡೆಸಲಾಗುತ್ತದೆ. ಬಳಿಕ ಪಾಠದ ದಾಖಲಿತ ವಿಡಿಯೊವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ತರಗತಿ ಮುಗಿದ ನಂತರವೂ ನೆರವು ಮುಂದುವರಿಯುತ್ತದೆ. ಆನ್‌ಲೈನ್ ತರಗತಿಗೆ ಸೇರುವುದು, ಆ್ಯಪ್‌ಗಳ ನಡುವೆ ಬದಲಾಯಿಸುವುದು ಅಥವಾ ಮೊಬೈಲ್ ಸೆಟ್ಟಿಂಗ್‌ಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದರೆ ವೈಯಕ್ತಿಕ ಮಾರ್ಗದರ್ಶನ ಮತ್ತು ವಾಟ್ಸ್‌ಆ್ಯಪ್ ಮೂಲಕ ಸಹಾಯ ನೀಡಲಾಗುತ್ತದೆ.

69ರ ವಯಸ್ಸಿನಲ್ಲೂ ಹೊಸ ವಿಷಯಗಳ ಕಲಿಕೆ

ಕೇಂದ್ರ ಸರ್ಕಾರದ ವೈದ್ಯಕೀಯ ಸೇವೆಯಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ, ಬೋಧನೆ ಮತ್ತು ಆಡಳಿತ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದ 69 ವರ್ಷದ ಡಾ. ವಿನೀತಾ ಕೌಶಿಕ್ ಕೂಡ ಈ ತರಬೇತಿಯಿಂದ ಪ್ರಯೋಜನ ಪಡೆದಿದ್ದಾರೆ.

ವಾಟ್ಸ್‌ಆ್ಯಪ್, ಯೂಟ್ಯೂಬ್ ಮತ್ತು ಆನ್‌ಲೈನ್ ಸೇವೆಗಳನ್ನು ಅವರು ಮೊದಲಿನಿಂದಲೂ ಬಳಸುತ್ತಿದ್ದರು. ಆದರೆ ಗೂಗಲ್ ಮ್ಯಾಪ್ಸ್, ಗೂಗಲ್ ಫೋಟೋಸ್, ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯಂತಹ ವಿಷಯಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಆಸಕ್ತಿ ಅವರಿಗಿತ್ತು.

ಹೊಸ ವಿಷಯಗಳನ್ನು ಕಲಿಸುವಾಗ ಮಹಿಮಾ ತಾಳ್ಮೆಯಿಂದ ವಿವರಿಸುತ್ತಿದ್ದರು. ಐಫೋನ್ ಮತ್ತು ಆಂಡ್ರಾಯ್ಡ್ ಬಳಸುವವರ ಅಗತ್ಯಗಳು ಬೇರೆಬೇರೆ ಆಗಿರುವುದನ್ನು ಗಮನಿಸಿ, ಎರಡೂ ರೀತಿಯ ಮೊಬೈಲ್‌ಗಳ ಬಳಕೆದಾರರಿಗೆ ಪ್ರತ್ಯೇಕವಾಗಿ ವಿವರಿಸುತ್ತಿದ್ದರು. ಒಮ್ಮೆ ಹೇಳಿದ ವಿಷಯ ಅರ್ಥವಾಗದಿದ್ದರೆ ಮತ್ತೆ ವಿವರಿಸಲು ಅವರು ಹಿಂಜರಿಯುತ್ತಿರಲಿಲ್ಲ. ಇದರಿಂದ ಹಿರಿಯರಿಗೆ ಆತ್ಮವಿಶ್ವಾಸ ಹೆಚ್ಚಾಯಿತು. ಇಂದು ಈ ತರಬೇತಿಯ ಅನೇಕ ವಿದ್ಯಾರ್ಥಿಗಳು ಡಿಜಿಟಲ್ ಪಾವತಿ, ಜೂಮ್, ಯೂಟ್ಯೂಬ್ ಮತ್ತು ಆನ್‌ಲೈನ್ ಕಲಿಕಾ ವೇದಿಕೆಗಳನ್ನು ಹೆಚ್ಚು ವಿಶ್ವಾಸದಿಂದ ಬಳಸುತ್ತಿದ್ದಾರೆ.

10 ಸಾವಿರಕ್ಕೂ ಹೆಚ್ಚು ಹಿರಿಯರಿಗೆ ಡಿಜಿಟಲ್ ಶಿಕ್ಷಣ

2020ರಲ್ಲಿ ಆರಂಭವಾದ 'ದಿ ಸೋಶಿಯಲ್ ಪಾಠಶಾಲಾ' ಆರು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಿರಿಯರಿಗೆ ತರಬೇತಿ ನೀಡಿದೆ. ವಿವಿಧ ದೇಶಗಳ ಹಿರಿಯರು ಇದರ ಆನ್‌ಲೈನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ಕೆಲವರು ಪ್ರಕೃತಿ ನಡಿಗೆಯ ಸಂದರ್ಭದಲ್ಲಿ ಪಕ್ಷಿಗಳು ಮತ್ತು ಇತರ ವಸ್ತುಗಳನ್ನು ಗುರುತಿಸಲು ಗೂಗಲ್ ಲೆನ್ಸ್ ಬಳಸುವುದನ್ನು ಕಲಿತಿದ್ದಾರೆ. ಇನ್ನು ಕೆಲವರು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಕ್ಕೆ ನೆರವಾಗುವ ಡಿಜಿಯಾತ್ರಾ ಸೇವೆಯನ್ನು ಬಳಸಲು ಕಲಿತಿದ್ದಾರೆ.

ಕೆಲವರು ಕೃತಕ ಬುದ್ಧಿಮತ್ತೆಯ ನೆರವಿನಿಂದ ಇಮೇಲ್ ಬರೆಯುವುದು, ಅಡುಗೆ ವಿಧಾನಗಳನ್ನು ವ್ಯವಸ್ಥಿತಗೊಳಿಸುವುದು ಮತ್ತು ಪ್ರವಾಸದ ಯೋಜನೆ ರೂಪಿಸುವುದನ್ನು ಕಲಿಯುತ್ತಿದ್ದಾರೆ. ಹಿರಿಯರಿಗೆ ಎಐ ಪರಿಚಯಿಸುವಾಗ ಮಹಿಮಾ ಧ್ವನಿ ಮೂಲಕ ಪ್ರಶ್ನೆ ಕೇಳುವ ವಿಧಾನಕ್ಕೆ ಆದ್ಯತೆ ನೀಡುತ್ತಾರೆ. ಟೈಪ್ ಮಾಡಲು ಕಷ್ಟವಾಗುವವರಿಗೆ ಮಾತನಾಡುವ ಮೂಲಕವೇ ಎಐ ಜೊತೆ ಸಂವಹನ ನಡೆಸುವುದು ಸುಲಭವಾಗುತ್ತದೆ.

ಈ ತರಬೇತಿ ಕೇವಲ ತಂತ್ರಜ್ಞಾನದ ಬಳಕೆಗೆ ಸೀಮಿತವಾಗಿಲ್ಲ. ಹೊಸ ಜನರನ್ನು ಭೇಟಿಯಾಗುವುದು, ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಪರಸ್ಪರ ನೆರವಾಗುವುದಕ್ಕೂ ಇದು ಅವಕಾಶ ಕಲ್ಪಿಸಿದೆ.

ಆತ್ಮವಿಶ್ವಾಸದ ಪಾಠವೂ ಹೌದು

ಅನೇಕ ಹಿರಿಯರು ಮೊಬೈಲ್‌ನಲ್ಲಿ ತಪ್ಪು ಆಯ್ಕೆಯನ್ನು ಒತ್ತಿಬಿಡುತ್ತೇವೆ, ಹಣ ಪಾವತಿಸುವಾಗ ಸಮಸ್ಯೆಯಾಗಬಹುದು ಅಥವಾ ಆನ್‌ಲೈನ್ ವಂಚನೆಗೆ ಸಿಲುಕಬಹುದು ಎಂಬ ಆತಂಕ ಹೊಂದಿರುತ್ತಾರೆ. ಹೀಗಾಗಿ ಅವರಿಗೆ ಯಾವ ಬಟನ್ ಒತ್ತಬೇಕು ಎಂಬುದನ್ನು ಕಲಿಸುವುದಷ್ಟೇ ಸಾಕಾಗುವುದಿಲ್ಲ. ತಮ್ಮ ಕೆಲಸಗಳನ್ನು ತಾವೇ ನಿರ್ವಹಿಸಬಲ್ಲೆವು ಎಂಬ ವಿಶ್ವಾಸವನ್ನೂ ಬೆಳೆಸಬೇಕಾಗುತ್ತದೆ.

ಮಹಿಮಾ ಅವರ ತರಬೇತಿಯ ಪ್ರಮುಖ ಉದ್ದೇಶವೂ ಇದೇ. ತಂತ್ರಜ್ಞಾನವನ್ನು ಭಯದಿಂದ ನೋಡುವ ಬದಲು, ಅದನ್ನು ಎಚ್ಚರಿಕೆಯಿಂದ ಮತ್ತು ಸ್ವತಂತ್ರವಾಗಿ ಬಳಸಲು ಹಿರಿಯರನ್ನು ಸಿದ್ಧಗೊಳಿಸುವುದು. ಅವರ ಪ್ರಕಾರ, ಈ ತರಗತಿಗಳು ಕ್ರಮೇಣ ಒಂದು ಸಮುದಾಯದ ಸ್ವರೂಪವನ್ನೂ ಪಡೆದುಕೊಂಡಿವೆ. ವಿದ್ಯಾರ್ಥಿಗಳು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ, ಪರಸ್ಪರ ಮಾತನಾಡುತ್ತಾರೆ ಮತ್ತು ಹೊಸ ಸ್ನೇಹಗಳನ್ನು ಬೆಳೆಸಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+