Maharashtra Election 2024: ಮಹಾರಾಷ್ಟ್ರ ಸಿಎಂ ಆಯ್ಕೆ, ಮಹತ್ವದ ಸಭೆ ಮೇಲೆ ಎಲ್ಲರ ಕಣ್ಣು
ಮುಂಬೈ, ನವೆಂಬರ್ 28: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರು? ಎಂಬುದು ಗುರುವಾರ ಘೋಷಣೆ ಆಗುವುದು ಬಹುತೇಕ ಖಚಿತವಾಗಿದೆ. 2024ರ ವಿಧಾನಸಭೆ ಚುನಾವಣೆಯಲ್ಲಿ 230 ಸ್ಥಾನಗಳಲ್ಲಿ ಗೆದ್ದಿರುವ 'ಮಹಾಯತಿ' ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. 132 ಸೀಟು ಗೆದ್ದಿರುವ ಬಿಜೆಪಿ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಲು ಇದ್ದ ಅಡೆತಡೆಗಳು ಬುಧವಾರ ನಿವಾರಣೆಯಾಗಿವೆ.
ದೇವೇಂದ್ರ ಫಡ್ನವೀಸ್ ಬುಧವಾರ ಸಂಜೆಯೇ ದೆಹಲಿ ತಲುಪಿದ್ದಾರೆ. ಗುರುವಾರ ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸಭೆಯ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ನಿರೀಕ್ಷೆ ಇದೆ.

ಅಮಿತ್ ಶಾ ನಡೆಸುವ ಸಭೆಯಲ್ಲಿ ದೇವೇಂದ್ರ ಫಡ್ನವೀಸ್, ಎನ್‌ಸಿಪಿ ನಾಯಕ ಅಜಿತ್ ಪವಾರ್, ಮಹಾರಾಷ್ಟ್ರದ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿಯೇ ಮುಖ್ಯಮಂತ್ರಿ ಅಭ್ಯರ್ಥಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್) ಬಣಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ತೀರ್ಮಾನವಾಗಲಿದೆ.
230 ಸೀಟುಗಳಲ್ಲಿ ಗೆಲುವು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿದೆ. ಆದರೆ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಅತಿ ಹೆಚ್ಚು ಸೀಟು ಗೆದ್ದಿರುವ ಕಾರಣ ಮುಖ್ಯಮಂತ್ರಿ ಹುದ್ದೆಯೂ ಬಿಜೆಪಿ ಪಾಲಾಗಲಿದೆ.
ಆದ್ದರಿಂದ ಚುನಾವಣಾ ಪೂರ್ವ ಮೈತ್ರಿಯಂತೆ ಬಿಜೆಪಿ 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಸರ್ಕಾರವನ್ನು ರಚಿಸಲಿದೆ. ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಹೊಂದಿದ್ದು, ಸರ್ಕಾರ ರಚನೆಗೆ ಸ್ಪಷ್ಟವಾದ ಬಹುಮತವಿದೆ.
ಬುಧವಾರವೇ ಪತ್ರಿಕಾಗೋಷ್ಠಿ ನಡೆಸಿ ಏಕನಾಥ್ ಶಿಂಧೆ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪಿದ್ದಾರೆ. ತಾವು ಉಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಎನ್‌ಸಿಪಿ (ಅಜಿತ್ ಪವಾರ್ ಬಣ) ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲು ಈಗಾಗಲೇ ಒಪ್ಪಿಗೆಯನ್ನು ಕೊಟ್ಟಿದೆ.
ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಗುರುವಾರ ಬೆಳಗ್ಗೆ ದೆಹಲಿ ತಲುಪಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಒಂದು ಮುಖ್ಯಮಂತ್ರಿ, ಎರಡು ಡಿಸಿಎಂ ಹುದ್ದೆ ರಚನೆಯಾಗಲಿದೆ. ಏಕನಾಥ್ ಶಿಂಧೆ, ಅಜಿತ್ ಪವಾರ್ ಸೂಚಿಸಿದ ನಾಯಕರನ್ನು ಉಪ ಮುಖ್ಯಮಂತ್ರಿ ಮಾಡಲು ಬಿಜೆಪಿ ಒಪ್ಪಿಗೆ ನೀಡಲಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಅಂತಿಮವಾಗುತ್ತಿದ್ದಂತೆಯೇ 'ಮಹಾಯತಿ' ಮೈತ್ರಿಕೂಟದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಅವಧಿ ಮಂಗಳವಾರವೇ ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ರಾಜೀನಾಮೆ ನೀಡಿದ್ದಾರೆ. ಹಂಗಾಮಿ ಸಿಎಂ ಆಗಿ ಮುಂದುವರೆಯಲು ರಾಜ್ಯಪಾಲರು ಅವರಿಗೆ ಸೂಚನೆ ಕೊಟ್ಟಿದ್ದಾರೆ.
ನವೆಂಬರ್ 30 ಅಥವ ಡಿಸೆಂಬರ್ 1ರಂದು ನೂತನ ಸರ್ಕಾರ ರಚನೆಯಾಗಲಿದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಯಾರಾಗಬೇಕು? ಎನ್ನುವ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
2022ರ ಬಳಿಕ ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟದ ಸರ್ಕಾರವೇ ಅಸ್ತಿತ್ವದಲ್ಲಿತ್ತು. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದರು. 2024ರ ವಿಧಾನಸಭೆ ಚುನಾವಣೆಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ ಮೈತ್ರಿಕೂಟ ಎದುರಿಸಿತ್ತು. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಏಕನಾಥ್ ಶಿಂಧೆ ಇನ್ನೂ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಬೇಕು ಎಂದು ಶಿವಸೇನೆ ಬೇಡಿಕೆ ಇಟ್ಟಿತ್ತು.












Click it and Unblock the Notifications