Maharashtra Election 2024: ಗೆದ್ದಿರುವ 57 ಸೀಟಿಗೆ ಮತ್ತೊಂದು ಕ್ಯಾತೆ ತೆಗೆದ ಶಿಂಧೆಯ ಶಿವಸೇನೆ!
ಮುಂಬೈ, ನವೆಂಬರ್ 27: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ 2024ರಲ್ಲಿ 57 ಸೀಟು ಗೆದ್ದಿರುವ ಹಂಗಾಮಿ ಸಿಎಂ ಏಕನಾಥ್ ಶಿಂಧೆಯ ಶಿವಸೇನೆ ಬಣ ಮತ್ತೊಂದು ಕ್ಯಾತೆ ತೆಗೆದಿದೆ. ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಮಹಾಯತಿ ಮೈತ್ರಿಕೂಟದ ಶಿವಸೇನೆಯ ಕಾರಣದಿಂದಲೇ ಸಿಎಂ ಆಯ್ಕೆ ಕಗ್ಗಂಟಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ರಾಜ್ಯದ ವಿಧಾನಸಭೆ ಅವಧಿ ಮುಗಿದಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜೀನಾಮೆ ನೀಡಿದ್ದಾರೆ, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ.
ಬಿಜೆಪಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 132 ಸೀಟುಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಸರ್ಕಾರ ರಚಿಸಲಿದೆ. ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಹೊಂದಿದ್ದು, ಸರ್ಕಾರ ರಚನೆ ಮಾತ್ರ ವಿಳಂಬವಾಗುತ್ತಿದೆ.

ಶಿವಸೇನೆಯ ಹೊಸ ಕ್ಯಾತೆ: ರಾಜ್ಯಪಾಲ ಸಿ. ಪಿ. ರಾಧಾಕೃಷ್ಣ ಅವರಿಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಆದರೆ ಶಿವಸೇನೆ ಹೊಸ ಸರ್ಕಾರ ರಚನೆ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದೆ.
ಬುಧವಾರ ಮಾತನಾಡಿದ ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕ ಸಂಜಯ್ ಶಿರ್ಸಾಟ್, "ಏಕನಾಥ್ ಶಿಂಧೆ ಮಹಾಯತಿ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಒಪ್ಪಿಕೊಳ್ಳುವುದಿಲ್ಲ. ನವೆಂಬರ್ 20ರ ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟ ಗೆಲುವಿಗೆ ಶಿಂಧೆಯೇ ಕಾರಣ" ಎಂದು ಹೇಳಿದ್ದಾರೆ.
"ವಿಧಾನಸಭೆ ಚುನಾವಣೆಯನ್ನು ಏಕನಾಥ್ ಶಿಂಧೆ ಹೆಸರಿನ ಮೂಲಕವೇ ಎದುರಿಸಲಾಯಿತು. ಅವರು ಮತ್ತೆ ಮುಖ್ಯಮಂತ್ರಿಯಾಗಲು ಅರ್ಹತೆ ಹೊಂದಿದ್ದಾರೆ. ಆದ್ದರಿಂದ ಅವರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ತಿಳಿಸಿದ್ದಾರೆ.
ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ ಆಠವಲೆ, "ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು. ಏಕಾನಾಥ್ ಶಿಂಧೆ ಕೇಂದ್ರ ಸಚಿವ ಸಂಪುಟ ಸೇರಬೇಕು" ಎಂದು ಹೇಳಿದ್ದರು. ಸಂಜಯ್ ಶಿರ್ಸಾಟ್, "ನಾವು ರಾಮದಾಸ ಆಠವಲೆ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಮಹಾಯತಿ ಮೈತ್ರಿಕೂಟದ ಎನ್‌ಸಿಪಿ (ಅಜಿತ್ ಪವಾರ್ ಬಣ) ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲು ಬೆಂಬಲ ವ್ಯಕ್ತಪಡಿಸಿದೆ. ಆದರೆ ಶಿವಸೇನೆ (ಏಕನಾಥ್ ಶಿಂಧೆ ಬಣ) ಕೇವಲ ಎರಡೂವರೆ ವರ್ಷ ಶಿಂಧೆ ಮುಖ್ಯಮಂತ್ರಿಯಾಗಿದ್ದು, ಚುನಾವಣೆಯನ್ನು ಅವರ ಹೆಸರಿನಲ್ಲೇ ಎದುರಿಸಿದ್ದು, ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಲು ಅವಕಾಶ ನೀಡಿ ಎಂದು ಪಟ್ಟು ಹಿಡಿದಿದೆ.
'ಮಹಾಯತಿ' ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ ಚುನಾವಣೆ ಎದುರಿಸಿತು. ಮೈತ್ರಿಕೂಟದಲ್ಲಿ ಹೆಚ್ಚು ಸೀಟು ಬಂದ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟ ಎಂಬ ನಿರ್ಣಯವಾಗಿತ್ತು ಎಂಬುದು ಮಾಹಿತಿ. ಅದರಂತೆ 132 ಸೀಟು ಗೆದ್ದಿರುವ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎಂಬುದು ಬಿಜೆಪಿ, ಆರ್‌ಎಸ್‌ಎಸ್ ನಾಯಕರ ಬೇಡಿಕೆ. ಶಿವಸೇನೆಗೆ ಸಿಎಂ ಹುದ್ದೆ ನೀಡಲು ವಿರೋಧಿಸಲಾಗುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆಯ ಕುರಿತು ಕ್ಷಣ ಕ್ಷಣದ ಬೆಳವಣಿಗೆ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಡೆಯುತ್ತಿದ್ದಾರೆ. ಎರಡು ದಿನದಲ್ಲಿ ಎಲ್ಲಾ ಗೊಂದಲ ಬಗೆಹರಿಸಿ ಹೊಸ ಸರ್ಕಾರ ರಚನೆ ಮಾಡಲು ಅವರು ಸೂಚನೆ ನೀಡಿದ್ದು, ಮಾತುಕತೆಗಳು ನಡೆಯುತ್ತಲೇ ಇವೆ.












Click it and Unblock the Notifications