ನಗೆ ಬೀರಿದ ಓವೈಸಿ, ರಾಜ್ ಠಾಕ್ರೆಗೆ ಭಾರೀ ಮುಖಭಂಗ
ಮುಂಬೈ, ಅ 20: ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಎರಡು ಅನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಒಂದು ಹೈದರಾಬಾದ್ ಮೂಲದ ಓವೈಸಿ ನೇತೃತ್ವದ ಎಂಐಎಂ ಪಕ್ಷ ಖಾತೆ ತೆರೆದಿದ್ದರೆ, ಇನ್ನೊಂದೆಡೆ ಎಂಎನ್ಎಸ್ ಹೀನಾಯ ಸೋಲು ಕಂಡಿದೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಮಜ್ಲೀಸ್ -ಇ-ಇತ್ತೆಹದಾಲ್-ಮುಸ್ಲಿಮೀನ್ (ಎಂಐಎಂ) ಪಕ್ಷದ ಇಬ್ಬರು ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಪಕ್ಷ ಮಹಾರಾಷ್ಟ್ರದಲ್ಲಿ ಶುಭಾರಂಭ ಮಾಡಿದೆ.
ಇತ್ತ, ರಾಜ್ ಠಾಕ್ರೆಯ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿ ಪಕ್ಷ ಮುಖಭಂಗ ಅನುಭವಿಸುವಂತಾಗಿದೆ. (ಮಕಾಡೆ ಮಲಗಿದ ಕಾಂಗ್ರೆಸ್ː ರಾಹುಲ್ ಎಲ್ಲಿ)

ಮರಾಠಿಪರ ನಿಲುವು ತಾಳಿ, ಮಹಾರಾಷ್ಟ್ರದಲ್ಲಿ ಮರಾಠಿಯೇತರರ ಮೇಲೆ ದಾಳಿ ನಡೆಸುವ ಮೂಲಕ ಮತ್ತು ಟೋಲ್ ಧ್ವಂಸಗೊಳಿಸುವ ಮೂಲಕ ಕಾನೂನನ್ನು ಕೈಗೆತ್ತಿಕೊಂಡಿದ್ದ ಎಂಎನ್ಎಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಇನ್ನಿಲ್ಲದಂತೆ ಹಿನ್ನಡೆ ಅನುಭವಿಸಿದೆ.
ಎಂಐಎಂ ಪಕ್ಷದ ಮತ್ತು ಮಾಜಿ ಪತ್ರಕರ್ತ ಇಮ್ತಿಯಾಜ್ ಜಲೀಲ್, ಔರಂಗಾಬಾದ್ ಸೆಂಟ್ರಲ್ ಕ್ಷೇತ್ರದಲ್ಲಿ ಶಿವಸೇನೆಯ ಅಭ್ಯರ್ಥಿ ಪ್ರದೀಪ್ ಜೈಸ್ವಾಲ್ ಅವರನ್ನು ಇಪ್ಪತ್ತು ಸಾವಿರ ಮತಗಳಿಂದ ಸೋಲಿಸಿದ್ದಾರೆ.
ಪಕ್ಷದ ಇನ್ನೊಬ್ಬ ಅಭ್ಯರ್ಥಿ ವಾರಿಶ್ ಯೂಸಫ್ ಪಠಾಣ್ ಮುಂಬೈ ಮಹಾನಗರ ವ್ಯಾಪ್ತಿಯ 'ಬೈಕುಲಾ' ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಪಠಾಣ್, ಬಿಜೆಪಿಯ ಮಧುಕರ್ ಚವಾಣ್ ಅವರನ್ನು 1357 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬೈಕುಲಾದಲ್ಲಿ ಮಾಜಿ ಭೂಗತ ಲೋಕದ ಡಾನ್ ಅರುಣ್ ಗಾವ್ಲಿ ಪುತ್ರಿ ಮತ್ತು ಅಖಿಲ ಭಾರತೀಯ ಸೇನೆಯ ಗೀತಾ ಗಾವ್ಲಿ ಕೂಡಾ ಕಣದಲ್ಲಿದ್ದರು. ಈ ಕ್ಷೇತ್ರದಲ್ಲಿ ಶಿವಸೇನೆ ತನ್ನ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸಿರಲಿಲ್ಲ.
ಔರಂಗಾಬಾದ್ ಮತ್ತು ಬೈಕುಲಾ ಎರಡೂ ಕ್ಷೇತ್ರಗಳು ಮುಸ್ಲಿಂ ಪ್ರಾಭಲ್ಯವಿರುವ ಕ್ಷೇತ್ರವಾಗಿದೆ. 288 ಶಾಸಕರ ಬಲದ ಅಸೆಂಬ್ಲಿಯಲ್ಲಿ ಎಂಐಎಂ 24 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.

ರಾಜ್ ಠಾಕ್ರೆ ಪಕ್ಷದಿಂದ ಎಸ್ಬಿ ಸೋನಾವಾನೆ ಮಾತ್ರ ಗೆದ್ದ ಅಭ್ಯರ್ಥಿ. ಇವರು ಜುನ್ನರ್ ಕ್ಷೇತ್ರದಲ್ಲಿ ಶಿವಸೇನೆಯ ಅಭ್ಯರ್ಥಿ ಎಡಿ ಬುಚ್ಕೆ ಅವರನ್ನು ಹದಿನೇಳು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕಳೆದ ಅಸೆಂಬ್ಲಿ (2009) ಚುನಾವಣೆಯಲ್ಲಿ ಹದಿಮೂರು ಕ್ಷೇತ್ರ ಗೆದ್ದಿದ್ದ ಎಂಎನ್ಎಸ್ ಈ ಬಾರಿ 219 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು, ಆದರೆ ಗೆದ್ದಿದ್ದು ಒಂದೇ.











Click it and Unblock the Notifications