Maharashtra Assembly Election 2024: ಶಿವಸೇನೆ ಮತದಾರರ ಚಿತ್ತ ಎತ್ತ, ಸಿಎಂ ಹೇಳಿದ್ದೇನು?
ಮುಂಬೈ, ನವೆಂಬರ್ 18: ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರ ಶನಿವಾರ ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆಯಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ), ಶಿವಸೇನೆ (ಉದ್ಧವ್ ಠಾಕ್ರೆ ಬಣ)ಕ್ಕೆ ಎಷ್ಟು ಸೀಟು ಸಿಗಲಿದೆ? ಎಂದು ಲೆಕ್ಕಾಚಾರ ಆರಂಭವಾಗಿದೆ. ಏಕನಾಥ್ ಶಿಂಧೆ ಹಾಲಿ ಮುಖ್ಯಮಂತ್ರಿಯಾಗಿದ್ದು, ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
2019ರಲ್ಲಿ ಶಿವಸೇನೆ ಒಗ್ಗಟ್ಟಾಗಿತ್ತು. ಬಿಜೆಪಿ ಜೊತೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಚುನಾವಣೆ ಬಳಿಕ ನಡೆದ ರಾಜಕೀಯ ಬೆಳವಣಿಗೆ ಕಾರಣಕ್ಕೆ ಉದ್ಧವ್ ಠಾಕ್ರೆ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಮುಖ್ಯಮಂತ್ರಿಯಾದರು. ಏಕನಾಥ್ ಶಿಂಧೆ ಶಿವಸೇನೆಯಿಂದ ಸಿಡಿದೆದ್ದು ಹೊರಬಂದರು.

ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ: ಇಂಡಿಯಾ ಟುಡೇ ಟಿವಿ ಜೊತೆಗೆ ಮಾತನಾಡಿದ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಟೀಕೆಗಳನ್ನು ಮಾಡಿದರು. "ಉದ್ಧವ್ ಠಾಕ್ರೆ ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಆಗಿದ್ದಾರೆ. ಶಿವಸೇನೆಯ ಮತದಾರರು ನಮ್ಮ ಜೊತೆಗಿದ್ದಾರೆ" ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.
"2024ರ ಲೋಕಸಭೆ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಣದ ಯಶಸ್ಸು ಅದು ಕಾಂಗ್ರೆಸ್‌ನ ಪರಿಣಾಮದಿಂದ ಆಗಿದ್ದು, ಅದರಲ್ಲಿ ಅವರ ಸ್ವಂತ ಪಾತ್ರವೇನು ಇಲ್ಲ. ಅವರು ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಆಗಿದ್ದಾರೆ. ಶಿವಸೇನೆಯ ನಿಜವಾದ ಮತದಾರರು ತಮ್ಮ ಜೊತೆ ಇದ್ದಾರೆ" ಎಂದು ಏಕನಾಥ್ ಶಿಂಧೆ ತಿಳಿಸಿದರು.
"ಲೋಕಸಭೆ ಚುನಾವಣೆಯಲ್ಲಿಯೇ ರಾಜ್ಯದ ಮತದಾರರು ತಮ್ಮ ನಿರ್ಣಯವನ್ನು ಸ್ಪಷ್ಟಪಡಿಸಿದ್ದಾರೆ. ಉದ್ಧವ್ ಠಾಕ್ರೆ ಬಣ ಶೇ 42, ನಾವು ಶೇ 48ರಷ್ಟು ಮತವನ್ನು ಪಡೆದಿದ್ದೇವೆ. ಶಿವಸೇನೆಯ ಶೇ 19ರಷ್ಟು ಮತಗಳಲ್ಲಿ ಶೇ 13ರಷ್ಟು ಮತವನ್ನು ನಾವು ಪಡೆದಿದ್ದೇವೆ. ಇದೇ ಮಾದರಿಯ ಫಲಿತಾಂಶ ವಿಧಾನಸಭೆ ಚುನಾವಣೆಯಲ್ಲಿ ಬರಲಿದೆ" ಎಂದು ಏಕನಾಥ್ ಶಿಂಧೆ ಭರವಸೆ ವ್ಯಕ್ತಪಡಿಸಿದರು.
"ಬಾಳಾಸಾಹೇಬ್ ಠಾಕ್ರೆ ಅವರು ಮಹಾರಾಷ್ಟ್ರ ಪರವಾದ ತತ್ವ, ಸಿದ್ದಾಂತವನ್ನು ಹೊಂದಿದ್ದರು. ಆದರೆ ಬಿಜೆಪಿ-ಶಿವಸೇನೆಗೆ ಜನರು ನೀಡಿದ ತೀರ್ಪನ್ನು ಧಿಕ್ಕರಿಸಿದರು. ಕಾಂಗ್ರೆಸ್ ಜೊತೆ ಕೈ ಜೋಡಿಸುವ ಮೂಲಕ ಉದ್ಧವ್ ಠಾಕ್ರೆ ತಾವು ಜನರ ಪರವಲ್ಲ ಎಂಬುದನ್ನು ಸಾಬೀತು ಮಾಡಿದರು" ಎಂದರು.
'ಮಹಾಯತಿ' ಮೈತ್ರಿಕೂಟದಲ್ಲಿ ಒಗ್ಗಟ್ಟಿಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆಯನ್ನು ಏಕನಾಥ್ ಶಿಂಧೆ ತಳ್ಳಿ ಹಾಕಿದರು. "ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮಹಾರಾಷ್ಟ್ರದ ಚುನಾವಣೆಯಲ್ಲಿ ಗೆಲ್ಲಲಿದೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಮೈತ್ರಿಕೂಟದಲ್ಲಿ ಯಾವುದೇ ಸ್ಪರ್ಧೆ ನಡೆಯುತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.
ನವೆಂಬರ್ 20ರಂದು ಒಂದೇ ಹಂತದಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ನಡುವೆ ನೇರ ಪೈಪೋಟಿ ಇದೆ.












Click it and Unblock the Notifications