Maharashtra Assembly Election 2024: ಮಹಾರಾಷ್ಟ್ರ ಸೀಟು ಹಂಚಿಕೆ, ಎಂವಿಎ ಮೈತ್ರಿಕೂಟದ ಲೆಕ್ಕಾಚಾರ
ಮುಂಬೈ, ಅಕ್ಟೋಬರ್ 27: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ಕ್ಕೆ ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮವಾಗಿದೆ. ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತಿದೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಎಂವಿಎ ಮೈತ್ರಿಕೂಟ ಚುನಾವಣೆಯನ್ನು ಎದುರಿಸುತ್ತಿದೆ. ಮೈತ್ರಿಕೂಟದ ಮೂರು ಪಕ್ಷಗಳಿಗೆ ಮೊದಲ ಹಂತದಲ್ಲಿ ತಲಾ 85 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಶಿವಸೇನೆ ನಾಯಕ ಸಂಜಯ್ ರಾವ್ ಜಂಟಿಯಾಗಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳು ತಲಾ 85 ಸೀಟುಗಳಲ್ಲಿ ಕಣಕ್ಕಿಳಿಯಲಿವೆ ಎಂದು ಘೋಷಣೆ ಮಾಡಿದ್ದಾರೆ. ಈಗ ಸೀಟು ಹಂಚಿಕೆಯ ಲೆಕ್ಕಾಚಾರ ನೋಡಿದರೆ ತಮ್ಮ ಪ್ರಾಬಲ್ಯದ ಪ್ರದೇಶಗಳನ್ನು ಉಳಿಸಿಕೊಳ್ಳಲು ಮೂರು ಪಕ್ಷಗಳು ಯಶಸ್ವಿಯಾಗಿವೆ.

ಸೀಟು ಹಂಚಿಕೆ ಲೆಕ್ಕಾಚಾರ: ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) 83 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇವುಗಳಲ್ಲಿ ಮುಂಬೈ ಮೆಟ್ರೋಪಾಲಿಟನ್ ಮತ್ತು ಕೊಂಕಣ ಪ್ರದೇಶದ ಕ್ಷೇತ್ರಗಳು ಅಧಿಕವಾಗಿದೆ. ಕಾಂಗ್ರೆಸ್ ವಿದರ್ಭ ಪ್ರಾಂತ್ಯದ ಕಡೆ ಹೆಚ್ಚಿನ ಗಮನವನ್ನು ನೀಡಿ 71 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಶ್ಚಿಮ ಮಹಾರಾಷ್ಟ್ರದ ಕಡೆ ಗಮನವನ್ನು ಹೆಚ್ಚು ನೀಡಿ ಎನ್‌ಸಿಪಿ (ಶರದ್ ಪವಾರ್) ಪಕ್ಷ 67 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಸೀಟು ಹಂಚಿಕೆಯಲ್ಲಿ ಕಗ್ಗಂಟು ಉಂಟಾಗಿದ್ದರೂ ಸಹ ಅಂತಿಮವಾಗಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ತಮ್ಮ ತಮ್ಮ ಪ್ರಾಬಲ್ಯದ ಪ್ರದೇಶಗಳನ್ನು ಪಡೆಯುವಲ್ಲಿ ಸಫಲವಾಗಿವೆ. ಸೀಟು ಹಂಚಿಕೆಯಲ್ಲಿ ಮೂರು ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ ಎಂಬುದು ಇದರಿಂದಾಗಿ ತಿಳಿಯುತ್ತಿದೆ.
ಶಿವಸೇನೆ (ಉದ್ಧವ್ ಠಾಕ್ರೆ ಬಣ) 83 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ 38 ಅಭ್ಯರ್ಥಿಗಳನ್ನು ಮುಂಬೈ ಮೆಟ್ರೋಪಾಲಿಟನ್, ಕೊಂಕಣದ ವ್ಯಾಪ್ತಿಗೆ ಸೇರಿದ ಕ್ಷೇತ್ರಗಳಿಗೆ ಹೆಸರಿಸಲಾಗಿದೆ. 2019ರ ಚುನಾವಣೆಯಲ್ಲಿ ಒಗ್ಗಟಾಗಿದ್ದ ಶಿವಸೇನೆ ಈ ಭಾಗದ ಶೇ 65ರಷ್ಟು ಸೀಟುಗಳನ್ನು ಗೆದ್ದಿತ್ತು. 13 ಅಭ್ಯರ್ಥಿಗಳನ್ನು ಮರಾಠವಾಡ, 11 ಅಭ್ಯರ್ಥಿಗಳನ್ನು ಉತ್ತರ ಮಹಾರಾಷ್ಟ್ರ, 9 ಅಭ್ಯರ್ಥಿಗಳನ್ನು ವಿದರ್ಭ ಮತ್ತು 7 ಅಭ್ಯರ್ಥಿಗಳನ್ನು ಪಶ್ಚಿಮ ಮಹಾರಾಷ್ಟ್ರ ಭಾಗದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕಣಕ್ಕಿಳಿಸಿದೆ.
71 ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷ ವಿದರ್ಭ ಪ್ರಾಂತ್ಯದ ಮೇಲೆ ಹೆಚ್ಚಿನ ಗಮನ ನೀಡಿದೆ. ಈ ಪ್ರಾಂತ್ಯಕ್ಕೆ ಪಕ್ಷ 30 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷ ಮುಂಬೈ ಮೆಟ್ರೋಪಾಲಿಟನ್ & ಕೊಂಕಣ ಪ್ರದೇಶಕ್ಕೆ 14, ಪಶ್ಚಿಮ ಮಹಾರಾಷ್ಟ್ರಕ್ಕೆ 13, ಮರಾಠವಾಡಕ್ಕೆ 10 ಮತ್ತು ಉತ್ತರ ಮಹಾರಾಷ್ಟ್ರಕ್ಕೆ 8 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಮೂರು ಪಕ್ಷಗಳು ಸೇರಿರುವ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಜಂಟಯಾಗಿ 221 ಸೀಟುಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. 288 ಕ್ಷೇತ್ರಗಳ ಪೈಕಿ ಎಂವಿಎ 270 ಸೀಟುಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದರು.
2024ರ ಚುನಾವಣೆಗೆ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ 211 ಸೀಟುಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ 121, ಶಿವಸೇನೆ ಮತ್ತು ಎನ್‌ಸಿಪಿ ತಲಾ 45 ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ರಾಜ್ಯದ ಅಡಳಿತ ಪಕ್ಷವಾಗಿರುವ ಮಹಾಯತಿ ಮೈತ್ರಿಕೂಟ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.












Click it and Unblock the Notifications