Maharashtra Assembly Election 2024: ಉದ್ಧವ್ ಠಾಕ್ರೆ ತಂತ್ರ ಅರಿಯಲು ಕಾಂಗ್ರೆಸ್ ವಿಫಲ!
ಮುಂಬೈ, ಅಕ್ಟೋಬರ್ 17: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದೆ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳ ಬಿಸಿಯೇರಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿದೆ.
ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ. ಸೀಟು ಹಂಚಿಕೆಯಲ್ಲಿ ಹೆಚ್ಚಿನ ಸ್ಥಾನ ಕಾಂಗ್ರೆಸ್ ಪಕ್ಷಕ್ಕೋ ಅಥವ ಶಿವಸೇನೆ (ಉದ್ಧವ್ ಠಾಕ್ರೆ ಬಣ)ಗೊ ಎಂಬುದು ಪ್ರಶ್ನೆಯಾಗಿದೆ.

ಉದ್ಧವ್ ಠಾಕ್ರೆ ತಂತ್ರವೇನು?; ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪಕ್ಷವಾದ ಶಿವಸೇನೆ (ಉದ್ಧವ್ ಠಾಕ್ರೆ ಬಣ)ಯ ತಂತ್ರವನ್ನು ಅರಿಯಲು ಕಾಂಗ್ರೆಸ್ ವಿಫಲವಾಗಿದೆಯೇ?. ಕೆಲವು ದಿನಗಳ ಹಿಂದೆ ಮಾತನಾಡಿದ ಉದ್ಧವ್ ಠಾಕ್ರೆ, "ಮೊದಲು ಮಹಾಯತಿ ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿ" ಎಂದು ಹೇಳುವ ಮೂಲಕ ಚಾಣಾಕ್ಷ ನಡೆಯನ್ನು ಅನುಸರಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ 2024ರ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಘೋಷಣೆ ಮಾಡಿಲ್ಲ. ಎಂವಿಎ ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದರೆ ವಿರೋಧ ಪಕ್ಷಗಳು ಅದರ ಕುರಿತು ಮಾತನಾಡುತ್ತವೆ. ಅದಕ್ಕೆ ಚುನಾವಣೆಗೂ ಮೊದಲು ಘೋಷಣೆ ಮಾಡುವುದು ಬೇಡ ಎಂಬುದು ಉದ್ಧವ್ ಠಾಕ್ರೆಯ ತಂತ್ರವಾಗಿದೆ.
ಉದ್ಧವ್ ಠಾಕ್ರೆಯ ಹೇಳಿಕೆ ಹಿಂದೆ ಚುನಾವಣೆ ಮುಗಿದ ಮೇಲೆ ಮುಖ್ಯಮಂತ್ರಿಯ ಪ್ರಶ್ನೆ ಬಂದರೆ ಎನ್‌ಸಿಪಿ (ಶರದ್ ಪವಾರ್) ಬಣ ಸಹ ತಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂಬ ತಂತ್ರವಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಅದು ಸೀಟು ಹಂಚಿಕೆಯ ಚರ್ಚೆಯಲ್ಲಿಯೇ ಮುಳುಗಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಣಕ್ಕಿಳಿದ 17 ಸೀಟುಗಳಲ್ಲಿ 13ರಲ್ಲಿ ಕಾಂಗ್ರೆಸ್ ಗೆದ್ದಿದೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) ಗೆದ್ದಿರುವುದು 21ರಲ್ಲಿ ಕಣಕ್ಕಿಳಿದು ಗೆದ್ದಿರುವುದು 9. ಆದ್ದರಿಂದ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲು ಕಾಂಗ್ರೆಸ್ ತಯಾರಿ ನಡೆಸಿತ್ತು. ಆದರೆ ಹರಿಯಾಣದ ಹೀನಾಯ ಸೋಲು ಮತ್ತು ಜಮ್ಮ & ಕಾಶ್ಮೀರದ ಫಲಿತಾಂಶ ಪಕ್ಷದ ನಡೆಗೆ ತಡೆಯನ್ನು ಹಾಕಿದೆ. ಚುನಾವಣಾ ಫಲಿತಾಂಶ ಎಂವಿಎ ಮೈತ್ರಿಕೂಟದ ಪರವಾಗಿ ಬಂದರೆ ಮುಖ್ಯಮಂತ್ರಿ ಹುದ್ದೆ ಯಾವ ಪಕ್ಷಕ್ಕೆ? ಎಂಬುದು ಸದ್ಯ ಎಲ್ಲರ ಪ್ರಶ್ನೆಯಾಗಿದೆ.
ಉದ್ಧವ್ ಠಾಕ್ರೆ ಬಣ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ. ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ ಎಂವಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಉದ್ಧವ್ ಠಾಕ್ರೆ ಕೈಗೊಂಡ ತೀರ್ಮಾನಗಳು ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಮೈತ್ರಿಕೂಟ ಬಹುಮತ ಪಡೆದರೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಡುವುದರಲ್ಲಿ ಯಾವುದೇ ಅನುಮಾನ ಬೇಡ. ಅದರಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸಿಕ್ಕ ಬೆಂಬಲ ನೋಡಿದ ಬಳಿಕ ಉದ್ಧವ್ ಠಾಕ್ರೆ ಉತ್ಸಾಹ ಇಮ್ಮಡಿಯಾಗಿದೆ.
ಅಕ್ಟೋಬರ್ 13ರಂದು ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, "ನಾವು ಮೂವರು ಯಾರನ್ನು ಬೇಕಾದರೂ ಮುಖ್ಯಮಂತ್ರಿ ಅಭ್ಯರ್ಥಿ ಮಾಡಬಹುದು" ಎಂದು ಹೇಳುವ ಮೂಲಕ ತಾವು ಸಹ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿ ಎಂಬ ಸಂದೇಶ ರವಾನಿಸಿದ್ದಾರೆ.
"ನಾವು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ, ಎಲ್ಲರೂ ಒಟ್ಟಾಗಿ ಮಹಾಯುತಿ ಮೈತ್ರಿಕೂಟದ ವಿರುದ್ಧ ಚುನಾವಣೆಗೆ ಹೋಗುತ್ತೇವೆ. ಶಿವಸೇನೆ, ಎನ್‌ಸಿಪಿ ಜೊತೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತೇವೆ. ಸಂಖ್ಯಾಬಲದ ಬಂದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ" ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌವ್ಹಾಣ್ ಹೇಳಿದ್ದಾರೆ.












Click it and Unblock the Notifications