Maha Kumbh Mela 2025: ಮಹಾ ಕುಂಭಮೇಳದಲ್ಲಿ ಯಾತ್ರಾರ್ಥಿಗಳಿಗಾಗಿ ಐಷಾರಾಮಿ ಶಿಬಿರ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಂದು ಮಹಾ ಕುಂಭಮೇಳ ಪ್ರಾರಂಭವಾಗುತ್ತಿದೆ. ಇದಕ್ಕಾಗಿ ದೇಶ ವಿದೇಶದಿಂದ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿವರೆಗೂ ನಡೆಯುವ ಈ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಜನ ಭಕ್ತರು ಭಾಗವಹಿಸುತ್ತಾರೆ. ಹೀಗಾಗಿ ಇಲ್ಲಿ ಉಳಿದುಕೊಳ್ಳವ ಭಕ್ತರ ಅನುಕೂಲಕ್ಕಾಗಿ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಹೌದು.. ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ITDC) ಮಹಾ ಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಐಷಾರಾಮಿ ಶಿಬಿರಗಳನ್ನು ಸ್ಥಾಪಿಸುತ್ತಿದೆ. ಈ ಮೂಲಕ ಯಾತ್ರಿಕರ ಅನುಭವವನ್ನು ಉತ್ತಮವಾಗಿಸಲು ಪ್ರಯತ್ನಿಸುತ್ತಿದೆ. ಸಂಗಮ್ ವಿಐಪಿ ಪ್ರದೇಶದ ಬಳಿ ಇರುವ ಈ ಶಿಬಿರಗಳು ಕಾರ್ಯಕ್ರಮದ ಉದ್ದಕ್ಕೂ ಯಾತ್ರಿಕರು ಮತ್ತು ಸಂದರ್ಶಕರಿಗೆ ತೆರೆದಿರುತ್ತವೆ. ಹಾಗಾದರೆ ಐಟಿಡಿಸಿ ಕ್ಯಾಪಸ್ ಹೇಗಿದೆ?

ITDC ಕ್ಯಾಂಪ್ ಸೈಟ್‌ನ ಪ್ರಮುಖ ಲಕ್ಷಣಗಳು
ಐಟಿಡಿಸಿ ಕ್ಯಾಂಪ್ ಸೈಟ್ ಆಧ್ಯಾತ್ಮಿಕತೆ, ಅನುಕೂಲತೆ ಮತ್ತು ಐಷಾರಾಮಿ ವ್ಯವಸ್ಥೆಯನ್ನು ನೀಡುತ್ತದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. "ಸೈಟ್ ಸೂಪರ್ ಪ್ರೀಮಿಯಂ ಸೂಟ್‌ಗಳು, ಪ್ರೀಮಿಯಂ ಸೂಟ್‌ಗಳು, ಡೀಲಕ್ಸ್ ಸೂಟ್‌ಗಳು ಮತ್ತು ಸ್ಟ್ಯಾಂಡರ್ಡ್ ಕ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ ರೂಂಗಳನ್ನು ಶಾಂತಿಯುತ ಮತ್ತು ಆರಾಮದಾಯಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಸತಿ ಸೌಕರ್ಯಗಳ ಹೊರತಾಗಿ ಇಲ್ಲಿ ವಾಸ್ತವ್ಯ ಹೂಡುವ ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸಲು ಯೋಗ, ಧ್ಯಾನ ಮಾಡಲು ವ್ಯವಸ್ಥೆ ಹಾಗೂ ಅವರದ್ದೇ ಆದ ಆಹಾರ ಒದಗಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ವಿವಿಧ ಚಟುವಟಿಕೆಗಳನ್ನು ಸೈಟ್ ಆಯೋಜಿಸುತ್ತಿದೆ.
2025ರ ಕುಂಭಮೇಳದಲ್ಲಿ ಆತಿಥ್ಯಕ್ಕಾಗಿ ಐಟಿಡಿಸಿಯ ದೃಷ್ಟಿ
"ಮಹಾ ಕುಂಭಮೇಳವು ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಜಾಗೃತಿಯಾಗಿದೆ. ಇದರಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಮರೆಯಲಾಗದ ಅನುಭವವನ್ನು ಒದಗಿಸುವುದು ITDC ಸೈಟ್‌ನ ಉದ್ದೇಶವಾಗಿದೆ" ಎಂದು ಪ್ರವಾಸೋದ್ಯಮ ಸಚಿವಾಲಯ ಜಂಟಿ ಕಾರ್ಯದರ್ಶಿ ಸಿನ್ರೆಮ್ ಹೇಳಿದರು.
ಐಟಿಡಿಸಿಯ ಹಣಕಾಸು ನಿರ್ದೇಶಕ ಲೋಕೇಶ್ ಕುಮಾರ್ ಅಗರ್ವಾಲ್ ಮಾತನಾಡಿ, ''ಸ್ಥಳೀಯ ಯಾತ್ರಿಕರಿಂದ ಹಿಡಿದು ಅಂತರರಾಷ್ಟ್ರೀಯ ಪ್ರವಾಸಿಗರವರೆಗೆ ವಾಸ್ತವ್ಯ ಇರಲು ಅವಕಾಶ ಕಲ್ಪಿಸಲು ಶಿಬಿರವನ್ನು ವಿನ್ಯಾಸಗೊಳಿಸಲಾಗಿದೆ. ನಾವು ಪ್ರತಿಯೊಬ್ಬರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ ಮತ್ತು ಈ ಕಾರ್ಯಕ್ರಮಕ್ಕಾಗಿ ಅತ್ಯುತ್ತಮ ವಸತಿ ಅನುಭವಗಳನ್ನು ನೀಡಲು ಉತ್ಸುಕರಾಗಿದ್ದೇವೆ" ಎಂದು ಅವರು ಹೇಳಿದರು.
ಶಿಬಿರದ ಸ್ಥಳದಲ್ಲಿ ವಿಶೇಷ ಸೇವೆಗಳು
ಅಲ್ಲದೆ ಶಿಬಿರದ ಸ್ಥಳಗಳಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಐಷಾರಾಮಿ ವಸತಿಗಳನ್ನು ವಿಮಾನ ನಿಲ್ದಾಣ, ವಾರಣಾಸಿ ಮತ್ತು ಅಯೋಧ್ಯೆಯಂತಹ ಪ್ರಮುಖ ಧಾರ್ಮಿಕ ಸ್ಥಳಗಳವರೆಗೆ ವಿಸ್ತರಣೆಗೊಳಿಸಲು ನಿರ್ಧರಿಸಲಾಗಿದೆ. ಮಹಾ ಕುಂಭಮೇಳ 2025 ಪರಿವರ್ತಿತ ಆಧ್ಯಾತ್ಮಿಕ ಪ್ರಯಾಣ ಮಾತ್ರವಲ್ಲದೆ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಆಚರಣೆಯಾಗಿದೆ. ಈ ಘಟನೆಯನ್ನು ಪ್ರತಿಯೊಬ್ಬರೂ ಕೂಡ ಕಣ್ತುಂಬಿಕೊಳ್ಳಬೇಕು. ಅವರಿಗೆ ಉತ್ತಮ ಅನುಭವವಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಲೋಕೇಶ್ ಕುಮಾರ್ ಅಗರ್ವಾಲ್ ಹೇಳಿದರು.












Click it and Unblock the Notifications