Madhya Pradesh; ಮಧ್ಯಪ್ರದೇಶ ಚುನಾವಣೆ ಗೆದ್ದ ಕೇಂದ್ರ ಕೃಷಿ ಸಚಿವ!
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿತ್ತು. 230 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 17ರಂದು ಚುನಾವಣೆ ನಡೆದಿತ್ತು. ಸಂಜೆ 8.15ರ ಮಾಹಿತಿಯಂತೆ ಬಿಜೆಪಿ 164 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್ 65 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಬಿಜೆಪಿ ರಾಜ್ಯದ ಚುನಾವಣೆಯಲ್ಲಿ ಗೆಲವು ಸಾಧಿಸಲು ಹಲವು ಹೊಸ ತಂತ್ರವನ್ನು ರೂಪಿಸಿತ್ತು. ಇದುವರೆಗಿನ ಮಾಹಿತಿ ಅನ್ವಯ ಬಿಜೆಪಿ 134, ಕಾಂಗ್ರೆಸ್ 42, ಭಾರತೀಯ ಆದಿವಾಸಿ ಪಕ್ಷ 1 ಸ್ಥಾನದಲ್ಲಿ ಜಯಗಳಿಸಿದೆ. ಚುನಾವಣಾ ಆಯೋಗದಿಂದ ರಾತ್ರಿ 10 ಗಂಟೆಯ ವೇಳೆಗೆ ಫಲಿತಾಂಶದ ಅಂತಿಮ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.

ಚುನಾವಣೆ ಗೆದ್ದ ಕೇಂದ್ರ ಸಚಿವ; ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣಾ ಕಣಕ್ಕೆ ಬಿಜೆಪಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ಥೋಮರ್ ಅವರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿತ್ತು. ದಿಮಾನಿ ಕ್ಷೇತ್ರದಲ್ಲಿ ಅವರು ಗೆಲುವು ಕಂಡಿದ್ದಾರೆ.
ನರೇಂದ್ರ ಸಿಂಗ್ ಥೋಮರ್ ಚುನಾವಣೆಯಲ್ಲಿ 79,137 ಮತಗಳನ್ನು ಪಡೆದು 24,461 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಎಸ್‌ಪಿಯ ಬಲವೀರ್ ಸಿಂಗ್ ದಾಂಡೋತಿಯಾ 54,676 ಮತಗಳನ್ನು ಪಡೆದು 2ನೇ ಸ್ಥಾನವನ್ನು ಪಡೆದರು. ಕಾಂಗ್ರೆಸ್‌ನ ರವೀಂದ್ರ ಸಿಂಗ್ ಥೋಮರ್ 24006 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು.
ಈ ಬಾರಿಯ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೂವರು ಕೇಂದ್ರ ಸಚಿವರು, ಏಳು ಸಂಸದರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾರನ್ನು ಕಣಕ್ಕಿಳಿಸಿತ್ತು. ಮೂವರು ಕೇಂದ್ರ ಸಚಿವರ ಪೈಕಿ ನರೇಂದ್ರ ಸಿಂಗ್ ಥೋಮರ್ ಗೆಲುವು ಕಂಡಿದ್ದಾರೆ. ನರಸಿಂಗಪುರ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್, ಸಚಿವ ಫಗ್ಗಾನ್ ಸಿಂಗ್ ಕುಲಸ್ತೆ ನಿವಾಸ್ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು.
ಚುನಾವಣಾ ಕಣದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಇಂಧೋರ್-1 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಕೈಲಾಶ್ 1,58,123 ಮತಗಳನ್ನು ಪಡೆದು 57,939 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ ಯಾರನ್ನು ಮುಖ್ಯಮಂತ್ರಿ ಮಾಡಲಿದೆ? ಎಂದು ಕಾದು ನೋಡಬೇಕಿದೆ. ಸೋಮವಾರ ಅಥವ ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications